ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಇಳಿಕೆಯತ್ತ ಟೊಮೆಟೊ ಧಾರಣೆ

ಹಲವು ತರಕಾರಿಗಳಿಗೆ ಕಡಿಮೆಯಾದ ಬೇಡಿಕೆ
Last Updated 21 ಜುಲೈ 2020, 7:17 IST
ಅಕ್ಷರ ಗಾತ್ರ

ಮೈಸೂರು: ಟೊಮೆಟೊ ಧಾರಣೆ ಈ ವಾರ ಇಳಿಕೆಯ ಹಾದಿಯಲ್ಲಿದೆ. ಕಳೆದ ವಾರ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 28 ಇದ್ದ ಧಾರಣೆ, ಸೋಮವಾರ ₹ 15ಕ್ಕೆ ಕುಸಿದಿದೆ. ಒಂದೇ ವಾರದಲ್ಲಿ 13 ರೂಪಾಯಿಯಷ್ಟು ಇಳಿಕೆಯಾಗಿರುವುದು ರೈತರ ನಿರಾಸೆಗೆ ಕಾರಣವಾಗಿದೆ. ಹಾ‍ಪ್‌ಕಾಮ್ಸ್‌ನಲ್ಲಿ ದರ ₹ 28 ಇದೆ.

‘ಕೇರಳ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಟೊಮೆಟೊ ಖರೀದಿಸಲು ನಿರೀಕ್ಷಿತ ಪ್ರಮಾಣದ ವ್ಯಾಪಾರಿಗಳು ಮಾರುಕಟ್ಟೆಗೆ ಬರಲಿಲ್ಲ. ಬೇಡಿಕೆ ಕಡಿಮೆಯಾದ್ದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಾಗಿದೆ’ ಎಂದು ಎಪಿಎಂಸಿ ವ್ಯಾಪಾರಿ ರಾಜು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಗೆ ಭಾನುವಾರ 1,280 ಕ್ವಿಂಟಲ್‌ನಷ್ಟು ಟೊಮೆಟೊ ಆವಕವಾಗಿದ್ದರೆ, ಸೋಮವಾರ 890 ಕ್ವಿಂಟಲ್‌ನಷ್ಟು ಬಂದಿತ್ತು.

ಕಳೆದ ವಾರ ಕೆ.ಜಿ.ಗೆ ಸಗಟು ಬೆಲೆ ₹ 18ರಲ್ಲಿದ್ದ ಬೀನ್ಸ್‌ನ ಧಾರಣೆಯೂ ಈ ವಾರ ₹3 ರೂಪಾಯಿಯಷ್ಟು ಕಡಿಮಯಾಗಿದೆ. ಕೆ.ಜಿಗೆ ₹ 15ಕ್ಕೆ ಹೆಚ್ಚಿನ ಬೀನ್ಸ್ ಮಾರಾಟವಾಗಿತ್ತು. ಹಾಪ್‌ಕಾಮ್ಸ್‌ನಲ್ಲಿ ₹ 20 ಇದೆ.

ಹಸಿಮೆಣಸಿನಕಾಯಿ ದರ ಕುಸಿತ

ಕಳೆದೆರಡು ವಾರಗಳಲ್ಲಿ ಉತ್ತಮ ಬೆಲೆಯಿಂದ ಬೆಳೆಗಾರರಲ್ಲಿ ಹರ್ಷ ತರಿಸಿದ್ದ ಹಸಿಮೆಣಸಿನಕಾಯಿ ಈ ಬಾರಿ ಕೇವಲ ಒಂದೇ ದಿನಕ್ಕೆ ಕೆ.ಜಿಗೆ ₹ 5ರಷ್ಟು ಇಳಿಕೆ ಕಂಡು ಅಚ್ಚರಿ ತರಿಸಿದೆ. ಜುಲೈ 19ರಂದು ಕೆ.ಜಿಗೆ ₹ 27 ಇದ್ದ ಇದರ ಸಗಟು ಧಾರಣೆ ಸೋಮವಾರ ₹ 22ಕ್ಕೆ ಇಳಿಕೆಯಾಗಿದೆ.

ಈ ವಾರ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಕನಿಷ್ಠ ಧಾರಣೆ ₹ 6ಕ್ಕೆ ಇಳಿಕೆಯಾಗಿದೆ. ಗರಿಷ್ಠ ಧಾರಣೆ ₹ 10ಕ್ಕೆ ಇಳಿದಿದೆ. ಕಳೆದ ವಾರ ಇದು ಕ್ರಮವಾಗಿ ₹ 9 ಹಾಗೂ ₹ 12 ಇತ್ತು.

ಆಲೂಗಡ್ಡೆ ಬೆಲೆಯಲ್ಲಿ ಈ ವಾರ ದಿಢೀರ್ ಏರಿಕೆಯಾಗಿದೆ. ಕೆ.ಜಿಗೆ ₹ 20 ಇದ್ದದ್ದು ₹ 30ಕ್ಕೆ ಏರಿಕೆ ಕಂಡಿದೆ. ಇದರ ಆವಕದ ಪ್ರಮಾಣವು 900 ಕ್ವಿಂಟಲ್‌ ಇದ್ದದ್ದು 100 ಕ್ವಿಂಟಲ್‌ಗೆ ಇಳಿದಿರುವುದು ಇದಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿ ನಂಜರಾಜು ತಿಳಿಸಿದರು.

ಕುಂಬಳಕಾಯಿ ₹ 6, ಹೀರೇಕಾಯಿ ₹ 16, ಪಡವಲಕಾಯಿ ₹ 6, ದಪ್ಪಮೆಣಸಿನ ಕಾಯಿ ₹ 55, ಬೆಂಡೆಕಾಯಿ ₹ 10ಕ್ಕೆ ವ್ಯಾಪಾ ರಸ್ಥರು ಎಪಿಎಂಸಿಯಲ್ಲಿ ಖರೀದಿಸಿದರು.

ಹೂಗಳ ಬೆಲೆಗಳಲ್ಲಿ ಈ ವಾರ ಕೊಂಚ ಏರಿಕೆಯಾಗಿ ಹೂ ಬೆಳೆಗಾರರಿಗೆ ತುಸು ನೆಮ್ಮದಿ ತರಿಸಿತು. ಕೊನೆಯ ಆಷಾಢ ಶುಕ್ರವಾರ ಹಾಗೂ ಭೀಮನ ಅಮಾವಾಸ್ಯೆಯ ಕಾರಣ ಬೇಡಿಕೆ ಹೆಚ್ಚಳವಾಗಿದ್ದೇ ಇದಕ್ಕೆ ಕಾರಣವಾಗಿತ್ತು. ಶ್ರಾವಣ ಮಾಸದಲ್ಲಿ ಉತ್ತಮ ಬೆಲೆ ಬರಬಹುದು ಎನ್ನುವ ನಿರೀಕ್ಷೆ ಬೆಳೆಗಾರರದ್ದಾಗಿದೆ.

ಮೊಟ್ಟೆ ದರ ಚೇತರಿಕೆ: ಬೆಲೆ ಕುಸಿತದ ಹಾದಿಯಲ್ಲಿದ್ದ ಕೋಳಿಮೊಟ್ಟೆ ಧಾರಣೆ ಈಗ 15 ಪೈಸೆಯಷ್ಟು ಚೇತರಿಕೆ ಕಂಡಿದೆ. ಕಳೆದ ವಾರ ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.73 ಇತ್ತು. ಈಗ ಇದು ₹ 3.88ಕ್ಕೆ ಹೆಚ್ಚಾಗಿದೆ. ತಿಂಗಳ ಆರಂಭದಲ್ಲಿ ಇದರ ದರ ₹ 3.75 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT