ಬುಧವಾರ, ಆಗಸ್ಟ್ 4, 2021
21 °C
ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಕಪಿಲಾ, ಕಾವೇರಿ ಸೇತುವೆ

ತಿ.ನರಸೀಪುರ: ನಿರ್ವಹಣೆಯಿಲ್ಲದೇ ನಶಿಸುತ್ತಿವೆ ಪಾರಂಪರಿಕ ಸೇತುವೆಗಳು

ಎಂ. ಮಹದೇವ್ Updated:

ಅಕ್ಷರ ಗಾತ್ರ : | |

Prajavani

ತಿ.ನರಸೀಪುರ: ‘ಹೊಸ ನೀರು ಬಂದು ಹಳೇ ನೀರು ಕೊಚ್ಚಿ ಹೋದಂತೆ’ ಪರ್ಯಾಯ ಸೇತುವೆಗಳ ನಿರ್ಮಾಣದ ಬಳಿಕ ಪಟ್ಟಣದ ಹಳೆಯ ಪಾರಂಪರಿಕ ಸೇತುವೆಗಳು ಸಮರ್ಪಕ ನಿರ್ವಹಣೆ ಇಲ್ಲದೇ ದುಃಸ್ಥಿತಿಯತ್ತ ಸಾಗಿವೆ.

ಒಂದು ಕಾಲದಲ್ಲಿ ಸಂಪರ್ಕ ಬೆಸೆಯುತ್ತಿದ್ದ ಈ ಸೇತುವೆಗಳು ದುರಾವಸ್ಥೆಯಿಂದಾಗಿ ಅವಲಕ್ಷಣಗಳೆನಿಸಿವೆ. ಆಕರ್ಷಕ ತಡೆಗೋಡೆಗಳನ್ನು ಹೊಂದಿರುವ ಈ ಸೇತುವೆಗಳನ್ನು ಅಭಿವೃದ್ಧಿ ಪಡಿಸಿದರೆ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸಬಹುದಾದ ಎಲ್ಲ ಸಾಧ್ಯತೆ
ಗಳು ಇದ್ದಾಗ್ಯೂ ಯಾರೊಬ್ಬರು ಇತ್ತ ಗಮನ ಹರಿಸಿಲ್ಲ.

ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಕಪಿಲಾ ಮತ್ತು ಕಾವೇರಿ ಸೇತುವೆಗಳಿಗೆ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 80 ವರ್ಷಗಳಿಗೂ ಹೆಚ್ಚು ಹಳೆಯದಾದ ಸೇತುವೆಗಳಿವು. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ಸಂಚಾರಕ್ಕೆ ಅನುಗುಣವಾಗಿ ಕಪಿಲಾ ನದಿಗೆ ಅಡ್ಡಲಾಗಿ ಮೇಲ್ಸೇತುವೆ ಹಾಗೂ ಕಾವೇರಿಗೆ ಅಡ್ಡಲಾಗಿ ಪರ್ಯಾಯ ಸೇತುವೆಗಳನ್ನು ನಿರ್ಮಿಸಲಾಯಿತು. ಇವು ಕಳೆದ 6 ವರ್ಷಗಳಿಂದ ಬಳಕೆಯಲ್ಲಿವೆ.

ತ್ರಿವೇಣಿ ಸಂಗಮಕ್ಕೆ ಕಳಸಪ್ರಾಯದಂತಿರುವ ಪಾರಂಪರಿಕ ಸೇತುವೆಗಳಲ್ಲಿ ನಿರ್ವಹಣೆಯ ಕೊರತೆಯಿದೆ. ಹೊಸ ಸೇತುವೆಗಳ ನಿರ್ಮಾಣಕ್ಕೆ ಮುನ್ನ ಈ ಸೇತುವೆಗಳು ಬೆಂಗಳೂರು, ಮಂಡ್ಯ ಚಾಮರಾಜನಗರ ಜಿಲ್ಲೆಗಳಲ್ಲದೇ ಕೇರಳ, ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಸೇತುವೆಗಳಾಗಿದ್ದವು.

ಪ್ರಸ್ತುತ ಕಪಿಲಾ ಸೇತುವೆಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ನಿಂತು ಮತ್ತಷ್ಟು ಹಾಳಾಗುತ್ತಿದೆ. ಇದೇ ಸೇತುವೆಯ ಮೇಲೆ ಕಾವೇರಿ ನೀರು ಸರಬರಾಜು ಕಾಮಗಾರಿಗಾಗಿ ಪೈಪ್‌ಲೈನ್‌ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದರು. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದ್ಯ ಈ ಪೈಪ್‌ಲೈನ್‌ ಅಳವಡಿಕೆ ಕಾರ್ಯ ನಿಂತಿದೆ. ಸೇತುವೆಯ ಒಂದು ಬದಿಯಲ್ಲಿ ಹುಲ್ಲಿನ ಗಿಡಗಳು ದಟ್ಟವಾಗಿ ಬೆಳೆದಿವೆ.

ಕಾವೇರಿ ಸೇತುವೆಯ ಸ್ಥಿತಿಯಂತೂ ಹೇಳತೀರದಾಗಿದೆ. ಅಲ್ಲಿಯೂ ಸೇತುವೆಯ ಮಧ್ಯಭಾಗದಲ್ಲಿ ಗುಂಡಿ ಬಿದ್ದಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಣ್ಣ ಸಣ್ಣ ಗುಂಡಿಗಳಿವೆ. ಸೇತುವೆಯ ಕಂಬಿಗಳ ಮೇಲೆ ಗಿಡಗಂಟಿಗಳು ಬೆಳೆದಿವೆ. ಕಂಬಿಗಳು ತುಕ್ಕು ಹಿಡಿಯುತ್ತಿವೆ. ಬಹಳ ಉತ್ತಮ ಆಕರ್ಷಣೆ ವಿನ್ಯಾಸವಿರುವ ಈ ಸೇತುವೆ ನಿರ್ವಹಣೆಯ ಕೊರತೆಯಿಂದ ತನ್ನ ಪಾರಂಪರಿಕ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

ತಿ.ನರಸೀಪುರ ಪ್ರವಾಸಿ ಹಾಗೂ ಪುಣ್ಯ ಕ್ಷೇತ್ರವೆನಿಸಿರುವ ಕಾರಣ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಿರ್ವಹಣೆ ಮಾಡದೇ ಹಾಗೆ ಬಿಟ್ಟರೇ ವರ್ಷ ದಿಂದ ವರ್ಷಕ್ಕೆ ಸೇತುವೆಗಳು ಶಿಥಿಲವಾಗುತ್ತಾ ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ರಾಜರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ರಾಜ್ಯದ ಉತ್ತಮ ಮಾದರಿಯ ಸೇತುವೆಗಳನ್ನು ಉಳಿಸಬೇಕು ಎಂದು ತಾಲ್ಲೂಕಿನ ಜನರು ಒತ್ತಾಯಿಸುತ್ತಾರೆ.

ಟೆಂಡರ್ ಪ್ರಕ್ರಿಯೆ ಆರಂಭ

ಶ್ರೀರಂಗಪಟ್ಟಣ ಸರಹದ್ದಿ ನಿಂದ ಕಲಿಯೂರು ಮಾರ್ಗವಾಗಿ ಕೊಳ್ಳೇಗಾಲ ಸರಹದ್ದು ಮಹದೇಶ್ವರ ಬೆಟ್ಟ ದವರಿಗಿನ ರಸ್ತೆ ಅಭಿವೃದ್ಧಿ ನಿರ್ವಹಣೆಗೆ ಈಗಾಗಲೇ ಅಂದಾಜು ಮಾಡಿ ಟೆಂಡರ್ ಕರೆದಿದೆ.‌ ಜುಲೈ 12 ರವರೆಗೆ ಟೆಂಡರ್ ಪ್ರಕ್ರಿಯೆ ಇದ್ದು, ಟೆಂಡರ್ ಪ್ರಕ್ರಿಯೆ ಮುಗಿದ 20–25 ದಿನಗಳ ಒಳಗಾಗಿ ರಸ್ತೆ ನಿರ್ವಹಣೆ ಆರಂಭವಾಗುತ್ತದೆ .‌ಅದೇ ರಸ್ತೆಯಲ್ಲಿ ಈ ಸೇತುವೆ ಕೂಡ ಸೇರುವುದರಿಂದ ಸೇತುವೆ ರಸ್ತೆಯ ದುರಸ್ತಿ ಮಾಡಿಸಲಾಗುತ್ತದೆ. ಅಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿಸುತ್ತೇವೆ. ಶಾಸಕರು ಕೂಡಾ ಈ ಬಗ್ಗೆ ಮಾತನಾಡಿ ಸೇತುವೆ ಹಳ್ಳ ಕೊಳ್ಳ ದುರಸ್ತಿಗೆ ಸೂಚಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು