ಶುಕ್ರವಾರ, ಅಕ್ಟೋಬರ್ 18, 2019
20 °C
ತಾಯಿ– ಮಗನ ನಡುವಿನ ಭಾವನಾತ್ಮಕ ಸಂಬಂಧಕ್ಕೂ ಮಹತ್ವ ಉಂಟು

ಪ್ರೀತಿ ಪಯಣದ ಕಥೆ ‘ತ್ರಿವಿಕ್ರಮ’

Published:
Updated:
Prajavani

ಮೈಸೂರು: ‘ತ್ರಿವಿಕ್ರಮ’ ಎಂದರೆ ಸೋಲು ಇಲ್ಲದವನು. ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಯುವಕ ಶ್ರೀಮಂತ ಮನೆತನದ ಮುಗ್ಧ ಹುಡುಗಿಯನ್ನು ಪ್ರೀತಿಸುವ ಕಥೆಯನ್ನು ಇದು ಒಳಗೊಂಡಿದೆ. ತಾಯಿ– ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ತರಲೆ, ತುಂಟಾಟವನ್ನೂ ಭಿನ್ನ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ‘ತ್ರಿವಿಕ್ರಮ’ ಚಿತ್ರದ ನಿರ್ದೇಶಕ ಸಹನಾಮೂರ್ತಿ ತಿಳಿಸಿದರು.

ದಸರಾ ಮಹೋತ್ಸವ ನೋಡುವ ಉದ್ದೇಶದಿಂದ ಮೈಸೂರಿಗೆ ಬಂದಿದ್ದ ಚಿತ್ರದ ನಾಯಕ ನಟ ವಿಕ್ರಂ ರವಿಚಂದ್ರನ್‌ ಹಾಗೂ ಸಹನಾಮೂರ್ತಿ, ಚಿತ್ರದ ಈವರೆಗಿನ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಕ್ರೇಜಿಸ್ಟಾರ್‌ ವಿ.ರವಿಚಂದ್ರನ್‌ ಅವರ ಮಗ ವಿಕ್ರಂ ರವಿಚಂದ್ರನ್‌ ಅವರನ್ನು ಈ ಚಿತ್ರದ ಮೂಲಕ ನಾಯಕ ನಟನನ್ನಾಗಿ ರೂಪಿಸುತ್ತಿದ್ದೇನೆ. ರವಿಚಂದ್ರನ್‌ ಮಗ ಎಂದರೆ ದೊಡ್ಡ ನಿರೀಕ್ಷೆ ಇರುತ್ತದೆ. ಹೀಗಾಗಿ, ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ’ ಎಂದು ವಿವರಿಸಿದರು.

ಶೇ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು ₹5 ಕೋಟಿ ಖರ್ಚಾಗಿದೆ. ಬಿಡುಗಡೆ ಹೊತ್ತಿಗೆ ಚಿತ್ರದ ಬಜೆಟ್ ₹10 ಕೋಟಿ ಆಗುವ ಸಾಧ್ಯತೆ ಇದೆ. ದಾಂಡೇಲಿಯ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮುಗಿಸಿ ಬ್ಯಾಂಕಾಕ್‌ಗೆ ತೆರಳುತ್ತೇವೆ. ನಮ್ಮಲ್ಲಿ ಚಿತ್ರದಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಲು ತೊಡಕುಗಳಿವೆ. ಆದರೆ, ಬ್ಯಾಂಕಾಕ್‌ನಲ್ಲಿ ಅವಕಾಶವಿದೆ. ಈ ದೃಶ್ಯವು ಚಿತ್ರಕ್ಕೆ ಮುಖ್ಯವಾಗಿದ್ದು, ಇದಕ್ಕಾಗಿ ₹1 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ. ಮುಂದಿನ ವರ್ಷ ಮಾರ್ಚ್‌ ಅಥವಾ ಏಪ್ರಿಲ್‌ಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದು ವಿವರಿಸಿದರು.

ಸೋಮಣ್ಣ ನಿರ್ಮಾಣದ ಈ ಚಿತ್ರದಲ್ಲಿ ಮುಂಬೈನ ಆಕಾಂಕ್ಷಾ ಶರ್ಮಾ ಹಾಗೂ ಅಕ್ಷರ ಗೌಡ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಗೀತ ಅರ್ಜುನ್‌ ಜನ್ಯ, ಛಾಯಾಗ್ರಹಣ ಸಂತೋಷ್ ರೈ ಪತ್ತಾಜೆ, ನೃತ್ಯ ಸಂಯೋಜನೆ ರಾಜು ಸುಂದರಂ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ತುಳಸಿ ಶಿವಮಣಿ, ಸಾಧು ಕೋಕಿಲ, ಚಿಕ್ಕಣ್ಣ, ತೆಲುಗಿನ ಜಯಪ್ರಕಾಶ್‌ನಂತಹ ಖ್ಯಾತ ನಟರು ಅಭಿನಯಿಸಿದ್ದಾರೆ. ಮಹತ್ವದ ಪಾತ್ರಕ್ಕಾಗಿ ಅನಿಲ್‌ ಕಪೂರ್‌ ಅವರ ತಮ್ಮ ಸಂಜಯ್‌ ಕಪೂರ್‌ ಅವರನ್ನು ಕರೆತರುವ ಉದ್ದೇಶವಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದರು.

ದಸರಾ ನೋಡಲೆಂದೇ ಬಂದೆ: ವಿಕ್ರಂ
‘ಮೈಸೂರು ದಸರಾ ನೋಡಲು ತುಂಬಾ ಆಸೆ ಇತ್ತು. ಇಲ್ಲಿನ ಪರಂಪರೆ ಬಗ್ಗೆ ತಿಳಿದುಕೊಳ್ಳುವ ಬಯಕೆ ಇತ್ತು. ಹೀಗಾಗಿ, ಚಿತ್ರೀಕರಣಕ್ಕೆ ಬಿಡುವು ನೀಡಿ ಇಲ್ಲಿಗೆ ಬಂದಿದ್ದೇವೆ’ ಎಂದರು ವಿಕ್ರಂ ರವಿಚಂದ್ರನ್‌.

‘ತ್ರಿವಿಕ್ರಮ ನನ್ನ ಮೊದಲನೇ ಹೆಜ್ಜೆ, ನನ್ನ ಕನಸು. ಸಹನಾಮೂರ್ತಿ ಅವರು 2018ರ ಆಗಸ್ಟ್‌ನಲ್ಲಿ ಈ ಕಥೆ ಹೇಳಿದರು. ಅದು ತುಂಬಾ ಇಷ್ಟವಾಯಿತು. ಈ ಬಗ್ಗೆ ಅಪ್ಪನಿಗೂ ಹೇಳಿದ್ದೆ. ನಿನಗೆ ಇಷ್ಟವಾಗಿದ್ದರೆ ಮಾಡು ಅಂತ ಅಪ್ಪ ಹೇಳಿದ್ದರು. ಜನ ನಮ್ಮ ಕುಟುಂಬ ಹಾಗೂ ನಮ್ಮ ತಂದೆ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದರು.

ಈ ಚಿತ್ರದಲ್ಲಿ ಹಾಡುಗಳಿಗೆ ತುಂಬಾ ಮಹತ್ವ ನೀಡಲಾಗಿದೆ. ಅರ್ಜುನ್‌ ಜನ್ಯ ಅವರು ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ರಾಜು ಸುಂದರಂ ಅವರ ನೃತ್ಯ ಸಂಯೋಜನೆಯೂ ವಿಶಿಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Post Comments (+)