ಇನ್ನೆರಡು ದಿನಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭ

7
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಮತ್ತೆ 14 ಕೋರ್ಸ್‌ಗಳಿಗೆ ಮಾನ್ಯತೆ

ಇನ್ನೆರಡು ದಿನಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭ

Published:
Updated:

ಮೈಸೂರು: ಯುಜಿಸಿಯಿಂದ ಹೊಸದಾಗಿ ಮಾನ್ಯತೆ ಲಭಿಸಿದ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಶೀಘ್ರದಲ್ಲೇ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಿದೆ.

ಹೊಸದಾಗಿ ಮಾನ್ಯತೆ ನೀಡಿರುವ ಕೋರ್ಸ್‌ಗಳಿಗೆ ಅಕ್ಟೋಬರ್‌ 20ರ ಒಳಗಾಗಿ ಪ್ರವೇಶ ಪ್ರಕ್ರಿಯೆ ಕೊನೆಗೊಳಿಸುವಂತೆ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಸೂಚಿಸಿದೆ. ಅ.6 ಅಥವಾ 7 ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

32 ಕೋರ್ಸ್‌ಗಳಿಗೆ ಮಾನ್ಯತೆ ಕೋರಿ ಮನವಿ ಸಲ್ಲಿಸಿದ್ದೆವು. ಅದರಲ್ಲಿ 17 ಕೋರ್ಸ್‌ಗಳಿಗೆ ಈ ಮೊದಲು ಮಾನ್ಯತೆ ನೀಡಿದ್ದು, ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. 15 ಕೋರ್ಸ್‌ಗಳ ಮಾನ್ಯತೆಯನ್ನು ವಿವಿಧ ಕಾರಣಗಳಿಂದ ತಡೆಹಿಡಿಯಲಾಗಿತ್ತು. ಯುಜಿಸಿ ಕೇಳಿದ್ದ ಎಲ್ಲ ಮಾಹಿತಿಗಳನ್ನು ಒದಗಿಸಿರುವ ಕಾರಣ 15 ರಲ್ಲಿ 14 ಕೋರ್ಸ್‌ಗಳಿಗೆ ಮಾನ್ಯತೆ ದೊರೆತಿದೆ ಎಂದರು.

ಈ 14 ಕೋರ್ಸ್‌ಗಳಲ್ಲಿ 12 ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ. ಎಂಬಿಎ ಮತ್ತು ಬಿ.ಇಡಿ ಕೋರ್ಸ್‌ಗಳಿಗೆ ಜನವರಿಯಿಂದ ಪ್ರವೇಶಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಿ.ಇಡಿ ಹಾಗೂ ಎಂಬಿಎ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಸಬೇಕು. ಬಿ.ಇಡಿಗೆ 500 ಮಂದಿಗೆ ಪ್ರವೇಶಕ್ಕೆ ಅವಕಾಶವಿರುವುದರಿಂದ ಮೀಸಲಾತಿ ನಿಯಮ ಕೂಡಾ ಅನುಸರಿಸಬೇಕು. ಈ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ಬೇಕಾದ್ದರಿಂದ ಜನವರಿಯಿಂದ ಕೋರ್ಸ್‌ ಆರಂಭಿಸಲು ನಿರ್ಧರಿಸಿದ್ದೇವೆ ಎಂದರು.

ಎಲ್‌ಎಲ್‌ಎಂ ಕೋರ್ಸ್‌ಗೆ ಮಾನ್ಯತೆ ಇಲ್ಲ: ‘ಸ್ನಾತಕೋತ್ತರ ಕಾನೂನು ಕೋರ್ಸ್‌ಗೆ (ಎಲ್‌ಎಲ್‌ಎಂ) ಮಾತ್ರ ಮಾನ್ಯತೆ ಲಭಿಸಿಲ್ಲ. ಈ ಕೋರ್ಸ್‌ ಆರಂಭಿಸಲು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಒಪ್ಪಿಗೆ ಬೇಕು ಎಂದು ಯುಜಿಸಿ ಹೇಳಿದೆ. ಮತ್ತೆ ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವಿದೆ. ಎಲ್‌ಎಲ್‌ಎಂ ಕೋರ್ಸ್‌ಗೆ ಮಾನ್ಯತೆ ಲಭಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

ಮಾನ್ಯತೆ ಲಭಿಸಿದ ಕೋರ್ಸ್‌ಗಳ ಪ್ರವೇಶಾತಿಗೆ ಕಡಿಮೆ ಸಮಯಾವಕಾಶವಿದೆ. ಆದ್ದರಿಂದ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಪ್ರವೇಶಾತಿ ನಡೆಯಲಿದೆ. ಪ್ರವೇಶಾತಿ ಅವಧಿಯನ್ನು ಇನ್ನಷ್ಟು ವಿಸ್ತರಿಸುವಂತೆ ಯುಜಿಸಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಕುಲಸಚಿವ ಡಾ.ಬಿ.ರಮೇಶ್ ಮತ್ತು ಡೀನ್‌ (ಅಕಡೆಮಿಕ್) ಡಾ.ಜಗದೀಶ್‌ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !