ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ ಕುಲಪತಿಯಾಗಿ ಪ್ರೊ.ಹೇಮಂತಕುಮಾರ್‌ ನೇಮಕ

2017ರ ಜ. 10ರಿಂದ ಖಾಲಿ ಇದ್ದ ಹುದ್ದೆ
Last Updated 16 ನವೆಂಬರ್ 2018, 15:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಹೇಮಂತಕುಮಾರ್‌ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು.

ಪ್ರಭಾರಿ ಕುಲಪತಿ ಪ್ರೊ.ಆಯಿಷಾ ಎಂ.ಷರೀಫ್ ಅವರು ಅಧಿಕಾರ ಹಸ್ತಾಂತರಿಸಿದರು. ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಸಿಹಿ ತಿನ್ನಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ವಿದ್ಯಾರ್ಥಿಗಳು, ಸಂಶೋಧನೆ ವಿದ್ಯಾರ್ಥಿಗಳು ಹಾಗೂ ಆಪ್ತರು ಹೇಮಂತಕುಮಾರ್ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ನಂತರ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೊ.ಹೇಮಂತಕುಮಾರ್, ‘ಅತಿ ಸೂಕ್ಷ್ಮ ಜಾತಿಯಿಂದ ಬಂದಿರುವ ನನ್ನನ್ನು ಪ್ರತಿಭೆಯ ಆಧಾರದ ಮೇಲೆ ಸರ್ಕಾರ ನೇಮಿಸಿದೆ; ಸಾಮಾಜಿಕ ನ್ಯಾಯವನ್ನೂ ನೀಡಿದೆ. ಇದಕ್ಕಾಗಿ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

‘ವಿ.ವಿ.ಯನ್ನು ಶೈಕ್ಷಣಿಕವಾಗಿ ಎತ್ತರಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಭಿವೃದ್ಧಿ ಕಾರ್ಯ ನಡೆಸುವೆ. ಮೂರು ತಿಂಗಳು ಇದಕ್ಕಾಗಿ ವಿನಿಯೋಗಿಸಿ ನೂರು ವರ್ಷ ಇತಿಹಾಸವಿರುವ ವಿ.ವಿ.ಯ ಘನತೆ ಎತ್ತಿಹಿಡಿಯುವೆ’ ಎಂದು ಹೇಳಿದರು.

‘ನನಗೆ ಎಲ್ಲರೊಂದಿಗೆ ಹೊಂದಿಕೊಳ್ಳುವ, ಎಲ್ಲರನ್ನೂ ಸಾಂಘಿಕವಾಗಿ ಮುನ್ನಡೆಸುವ ಸಾಮರ್ಥ್ಯವಿದೆ. ವಿ.ವಿ.ಯ ಅಭಿವೃದ್ಧಿಗಾಗಿ ಸರ್ಕಾರ ₹ 150 ಕೋಟಿ ಐಒಇಗೆ ಬಿಡುಗಡೆಗೊಳಿಸಿದ್ದಾಗ ಸಮರ್ಥವಾಗಿ ನಿಭಾಯಿಸಿದ್ದೆ. ಆಗ 40 ಮಂದಿ ನನ್ನೊಂದಿಗೆ ಕೆಲಸ ಮಾಡಿದ್ದರು. ಅಂತೆಯೇ, ಐಸಿಡಿ ಯೋಜನೆಗಾಗಿ ಎಲ್ಲರೊಂದಿಗೆ ಕೆಲಸ ಮಾಡಿದ್ದೆ ’ ಎಂದರು.

ಪ್ರತಿಭೆಗೆ ಸಿಕ್ಕ ಮಾನ್ಯತೆ

ಶೋಧನಾ ಸಮಿತಿಯು ಆಯ್ಕೆ ಮಾಡಿದ್ದ ಮೂವರು ಹೆಸರುಗಳ ಪೈಕಿ ಪ್ರೊ.ಹೇಮಂತಕುಮಾರ್ ಪ್ರತಿಭೆಯ ಆಧಾರದ ಮೇಲೆ ಕುಲಪತಿಯಾಗಿ ನೇಮಕಗೊಂಡಿದ್ದಾರೆ.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿಯ ಸಭೆ ಮಂಗಳವಾರ ನಡೆದಿತ್ತು. ಪ್ರೊ.ಹೇಮಂತಕುಮಾರ್, ಕುವೆಂಪು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹೊಸಟ್ಟಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಮಾಜವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಮಿಡತಲೆ ರಾಣಿ ಅವರ ಹೆಸರನ್ನು ಸಮಿತಿಯು ಉನ್ನತ ಶಿಕ್ಷಣ ಇಲಾಖೆಗೆ ಮುಚ್ಚಿದ ಲಕೋಟೆಯಲ್ಲಿ ನೀಡಿತ್ತು.

ಕುಲಪತಿ ಹುದ್ದೆಗೆ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳನ್ನು ಪರಿಶೀಲಿಸಿದ ಶೋಧನಾ ಸಮಿತಿಯು ಮೂರು ವಿಭಾಗಗಳಲ್ಲಿ ಮೂವರ ಹೆಸರುಗಳನ್ನು ಅಂತಿಮಗೊಳಿಸಿತ್ತು. ಗಣಿತ ಮತ್ತು ಭೂತ ವಿಜ್ಞಾನದಲ್ಲಿ ಪ್ರೊ.ಹೇಮಂತಕುಮಾರ್, ಜೀವವಿಜ್ಞಾನ ವಿಭಾಗದಿಂದ ಪ್ರೊ.ಹೊಸಟ್ಟಿ ಹಾಗೂ ಸಮಾಜವಿಜ್ಞಾನ ವಿಭಾಗದಿಂದ ಪ್ರೊ.ಮಿಡತಲೆ ರಾಣಿ ಅವರ ಹೆಸರು ಅಂತಿಮಗೊಂಡಿದ್ದವು.

ಈ ಮೂರೂ ವಿಭಾಗಗಳಲ್ಲಿ ಸಂಶೋಧನೆ, ಆಯಾ ಕ್ಷೇತ್ರಗಳಲ್ಲಿ ಸಾಧನೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಮಂಡಣೆ, ಮುಂತಾದ ಮಾನದಂಡಗಳನ್ನು ಆಧರಿಸಿ ಕುಲಪತಿ ನೇಮಕವಾಗಿದೆ. ಪ್ರೊ.ಹೇಮಂತಕುಮಾರ್‌ ಅವರಿಗೆ ಅತಿ ಹೆಚ್ಚು ಅಂಕಗಳು ಸಿಕ್ಕಿದ್ದು, ಕುಲಪತಿಯಾಗಿ ನೇಮಕಗೊಳ್ಳಲು ಸಹಾಯವಾಗಿದೆ.

ಅತಿ ಸೂಕ್ಷ್ಮ ಸಮುದಾಯದ ‍ಪ್ರಾತಿನಿಧ್ಯ

ಮೈಸೂರಿನವರೇ ಆದ ಪ್ರೊ.ಹೇಮಂತಕುಮಾರ್ ಅವರು ಅತಿ ಸೂಕ್ಷ್ಮ ಹಾಗೂ ಹಿಂದುಳಿದ ಜಾತಿ ಸಮುದಾಯ ಸಾಧು ಚಿಟ್ಟಿಯಾರ್‌ಗೆ ಸೇರಿದವರು. ಮೈಸೂರಿನಲ್ಲಿ ಈ ಸಮುದಾಯಕ್ಕೆ ಸೇರಿದ ಕೇವಲ 50 ಕುಟುಂಬಗಳು ಇವೆ. ರಾಜ್ಯದಲ್ಲಿ ಈ ಸಮುದಾಯದ ಜನಸಂಖ್ಯೆ ಕೇವಲ 50 ಸಾವಿರ.

ಇವರು ಬಿ.ಎಂ.ಗೊವಿಂದರಾಜು ಹಾಗೂ ಪೂರ್ಣಿಮಾ ದೇವಿ ಪುತ್ರ. ಇವರಿಗೆ ನಾಲ್ವರು ಸಹೋದರರು, ಒಬ್ಬ ಸಹೋದರಿ ಇದ್ದಾರೆ. ನಗರದ ಚಾವಡಿ ಸರ್ಕಾರಿ ಶಾಲೆ ಹಾಗೂ ಲಕ್ಷ್ಮಿಪುರಂ ಸರ್ಕಾರಿ ಶಾಲೆಯಲ್ಲಿ ‍ಪ್ರಾಥಮಿಕ ಶಿಕ್ಷಣ; ಜೆಎಸ್ಎಸ್‌ ಶಾಲೆಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದಿದ್ದಾರೆ. ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ, ಬಳಿಕ ಬಿಇಡಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಕಂಪ್ಯೂಟರ್‌ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮೈಸೂರು ವಿ.ವಿ.ಯ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಸ್ನಾತಕೋತ್ತರ ಕೋರ್ಸಿನ ಮೊದಲ ತಂಡದ ವಿದ್ಯಾರ್ಥಿ ಇವರು. ಇದೇ ವಿಭಾಗದಲ್ಲಿ ಪಿಎಚ್‌.ಡಿ ಪದವಿ ಪಡೆದ ಮೊದಲಿಗರಿವರು. 1999ರಿಂದ ಪ್ರವಾಚಕರಾಗಿ, 2007ರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 333 ವೈಜ್ಞಾನಿಕ ಪ್ರಬಂಧ ಮಂಡಿಸಿದ್ದಾರೆ. 20 ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ್ದಾರೆ.

ಕುಲಪತಿಯಾಗಿ ನೇಮಕಗೊಳ್ಳುವವರೆಗೂ ಅಂತರರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಅಂತರ್ಜಾಲ ಯೋಜನೆ ಜಾರಿಗೊಳಿಸುವಲ್ಲಿ ಇವರು ರೂವಾರಿಯಾಗಿದ್ದರು. ಕಾಗದರಹಿತ ಇ–ಆಡಳಿತವನ್ನು ವಿ.ವಿ.ಯಲ್ಲಿ ಜಾರಿಗೊಳಿಸಿದ್ದೂ ಹೇಮಂತಕುಮಾರ್‌ ಅವರೇ.

ಅಂತ್ಯಗೊಂಡ ಪ್ರಭಾರಿಗಳ ಆಡಳಿತ

ಮೈಸೂರು ವಿ.ವಿ ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿ ಮುಗಿದ ಬಳಿಕ ಆರು ಮಂದಿ ಪ್ರಭಾರಿಗಳಾಗಿ ಕಾರ್ಯನಿರ್ವಹಿಸಿರುವುದು ಇದೇ ಮೊದಲು.

ಪ್ರೊ.ಯಶವಂತ ಡೋಂಗ್ರೆ, ಪ್ರೊ.ದಯಾನಂದ ಮಾನೆ, ಪ್ರೊ.ಸಿ.ಬಸವರಾಜು, ನಿಂಗಮ್ಮ ಬೆಟ್ಸೂರು, ಪ್ರೊ.ಟಿ.ಕೆ.ಉಮೇಶ್‌ ಹಾಗೂ ಪ್ರೊ.ಆಯಿಷಾ ಎಂ.ಷರೀಫ್‌ ಪ್ರಭಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟು 1 ವರ್ಷ 11 ತಿಂಗಳು ವಿ.ವಿ.ಯಲ್ಲಿ ಪ್ರಭಾರಿ ಕುಲಪತಿಗಳ ಆಡಳಿತ ನಡೆದಿತ್ತು.

ಪ್ರೊ.ಜೆ.ಶಶಿಧರ ಪ್ರಸಾದ್ ಅವರು ಕುಲಪತಿಯಾಗಿ ನಿವೃತ್ತರಾದ ಬಳಿಕ ಪ್ರೊ.ವಿ.ಜಿ.ತಳವಾರ್‌ ಅವರು ಕುಲಪತಿಯಾಗಿ ನೇಮಕಗೊಳ್ಳುವ ನಡುವೆ ಒಟ್ಟು 11 ತಿಂಗಳು ಹುದ್ದೆ ಖಾಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT