ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಸವಾದ ತರಕಾರಿ ವ್ಯಾಪಾರ: ಎಲ್ಲ ತರಕಾರಿ ಮಾರುಕಟ್ಟೆಗಳು ಬಂದ್

ವ್ಯಾಪಾರಸ್ಥರ ಪರದಾಟ
Last Updated 4 ಮೇ 2021, 3:38 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಪೊಲೀಸರು, ನಗರದ ಎಲ್ಲ ತರಕಾರಿ ಮಾರುಕಟ್ಟೆಗಳನ್ನು ಸೋಮವಾರ ಬಂದ್ ಮಾಡಿದರು.

ಭಾನುವಾರವೇ ದೇವರಾಜ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಮಂಡಿ ಮಾರುಕಟ್ಟೆಗೆ ಒಂದು ದಿನದ ಅವಕಾಶ ನೀಡಲಾಗಿತ್ತು. ಸೋಮವಾರ ಈ ಮಾರುಕಟ್ಟೆಯನ್ನೂ ಬಂದ್ ಮಾಡಲಾಯಿತು.

ಇದರಿಂದ ಹೊರಗೆ ರಸ್ತೆಗಳಲ್ಲಿ ಕೆಲ ಹೊತ್ತು ವ್ಯಾಪಾರ ನಡೆಯಿತಾದರೂ, ಮಾರುಕಟ್ಟೆಯ ಒಳಗೆ ನಡೆಯುತ್ತಿದ್ದಷ್ಟು ವ್ಯಾಪಾರ ನಡೆಯಲಿಲ್ಲ. ಕೆಲವೇ ಕೆಲವು ವ್ಯಾಪಾರಸ್ಥರು ಕಾಣಿಸಿಕೊಂಡರು. ಉಳಿದವರು ಮನೆಯತ್ತ ತೆರಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೇವರಾಜ ಮಾರುಕಟ್ಟೆಯ ತರಕಾರಿ ವ್ಯಾಪಾರಿ ನವೀನ್, ‘ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮಾರುಕಟ್ಟೆ ಒಳಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಈಗ ರೈತರಿಂದಲೂ ಖರೀದಿ ಮಾಡಲು ವ್ಯಾಪಾರಸ್ಥರು ಉತ್ಸುಕತೆ ತೋರುತ್ತಿಲ್ಲ. ಇದರಿಂದ ಕೇವಲ ವ್ಯಾಪಾರಸ್ಥರಿಗೆ ಮಾತ್ರವಲ್ಲ ರೈತರಿಗೂ ನಷ್ಟವಾಗುತ್ತದೆ. ಸರ್ಕಾರ ಇನ್ನಾದರೂ ತನ್ನ ತೀರ್ಮಾನವನ್ನು ಬದಲಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಯ್ಯಾಜಿರಾವ್ ರಸ್ತೆ, ಎಂ.ಜಿ.ರಸ್ತೆ, ಮಂಡಿ ಮಾರುಕಟ್ಟೆ ಸಮೀಪ ಹಾಗೂ ಇತರೆಡೆ ಬೆಳಿಗ್ಗೆಯಿಂದ 12 ಗಂಟೆಯವರೆಗೆ ವ್ಯಾಪಾರ ನಡೆಯಿತು. ಬೆಳಿಗ್ಗೆ ಕೆಲಹೊತ್ತು ಜನಸಂದಣಿ ಇತ್ತು. ನಂತರ, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಉಳಿದಂತೆ, ಮಧ್ಯಾಹ್ನದ ನಂತರ ವಾಹನ ಸಂಚಾರ ಪ್ರಮಾಣದಲ್ಲಿ ಇಳಿಕೆ ಕಂಡು ಬಂತು. ಎಂದಿನಂತೆ ಹಲವೆಡೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಅಲ್ಲಲ್ಲಿ ಬಿಗಿಯಾದ ತಪಾಸಣಾ ಕಾರ್ಯ ಪೊಲೀಸರಿಂದ ನಡೆಯಿತು.

402 ವಾಹನಗಳು ವಶ: ಮೈಸೂರು ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 402 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 328 ದ್ವಿಚಕ್ರ ವಾಹನಗಳು, 53 ಕಾರುಗಳು, 12 ಆಟೊಗಳು, 9 ಇತರೆ ವಾಹನಗಳು ಇದರಲ್ಲಿ ಸೇರಿವೆ. ಕೋವಿಡ್ ನಿಯಮ ಉಲ್ಲಂಘನೆ ಕುರಿತು 311 ಪ್ರಕರಣಗಳನ್ನು ದಾಖಲಿಸಿ, ₹ 50,400 ದಂಡವನ್ನು ವಸೂಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT