ಶುಕ್ರವಾರ, ಡಿಸೆಂಬರ್ 4, 2020
22 °C
ತಲಕಾಡು ಪಂಚಲಿಂಗದರ್ಶನ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಚಿಂತನೆ

ತಲಕಾಡು: ಸರಳ, ವರ್ಚುವಲ್‌ ಪಂಚಲಿಂಗ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಡಿಸೆಂಬರ್‌ ತಿಂಗಳಲ್ಲಿ ತಲಕಾಡು ಕ್ಷೇತ್ರದಲ್ಲಿ ನಡೆಯಲಿರುವ ಪಂಚಲಿಂಗ ದರ್ಶನ ಮಹೋತ್ಸವ ಕಾರ್ಯಕ್ರಮವನ್ನು ಕೋವಿಡ್‌–19 ಕಾರಣ ಸರಳವಾಗಿ ಆಯೋಜಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಅಧಿಕಾರಿಗಳು, ಜನಪ್ರತಿನಿಧಿಗಳ ಸಲಹೆಗಳನ್ನು ಪಡೆದರು.

‘ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಂಬೂ ಸವಾರಿಯನ್ನು 300 ಮಂದಿಗೆ ಸೀಮಿತಗೊಳಿಸುವುದಾಗಿ ಹೇಳಿದ್ದೆವು. ಅಷ್ಟರಲ್ಲೇ ಮುಗಿಸಿದ್ದೆವು. ಅದೇ ರೀತಿ ಈ ಕಾರ್ಯಕ್ರಮವನ್ನೂ ಸರಳವಾಗಿ ಆಚರಿಸುವುದು ನಮ್ಮ ಉದ್ದೇಶ’ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಒಳ ಗೊಂಡಂತೆ ಜಿಲ್ಲೆಯ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ಯನ್ನು ರಚಿಸಲಾಗುವುದು. ಉತ್ಸವ ಯಾವ ರೀತಿ ಆಚರಿಸಬೇಕು, ಎಷ್ಟು ಜನರ‌ನ್ನು ಸೇರಿಸಬಹುದು ಎಂಬ ಬಗ್ಗೆ ವರದಿಯನ್ನು ಸಮಿತಿ ನೀಡಲಿದೆ. ಆ ಬಳಿಕ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.‌‌

 ‘2013ರಲ್ಲಿ ಕೊನೆಯದಾಗಿ ಪಂಚಲಿಂಗದರ್ಶನ ನಡೆದಿದ್ದಾಗ 20 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಈ ಬಾರಿ ಕೊರೊನಾ ಇರುವುದರಿಂದ ಲಕ್ಷಾಂತರ ಜನರನ್ನು ಸೇರಿಸಲು ಸಾಧ್ಯ ವಿಲ್ಲ. ತಜ್ಞರ ಸಮಿತಿಯು 100 ಜನರನ್ನು ಮಾತ್ರ ಸೇರಿಸಬಹುದು ಎಂದು ಹೇಳಿದರೆ ಅಷ್ಟರಲ್ಲಿ ಮಹೋತ್ಸವ ಮಾಡಬೇಕಾಗುತ್ತದೆ’ ಎಂದರು.

‘ಪಂಚಲಿಂಗ ದರ್ಶನ ಯಾವಾ ಗಲೋ ಒಮ್ಮೆ ಬರುತ್ತದೆ. ಪ್ರತಿವರ್ಷ ನಡೆಯುವುದಾದರೆ ಈ ವರ್ಷ ರದ್ದುಗೊಳಿಸಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಅದು ಬಂದಾಗ ಮಾಡಲೇಬೇಕಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜತೆಯೂ ಒಂದು ಸುತ್ತಿನ ಚರ್ಚೆ ಮಾಡಿದ್ದೇನೆ. ದಸರಾ ಮಾದರಿಯಲ್ಲಿ ವ್ಯವಸ್ಥಿತವಾಗಿ ನಡೆಸುವಂತೆ ಅವರು ಸಲಹೆ ನೀಡಿದ್ದಾರೆ’ ಎಂದು ತಿಳಿಸಿದರು.

ಹಂತಹಂತವಾಗಿ ಅಭಿವೃದ್ಧಿ: ತಲಕಾಡು ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್‌ ಹಾಗೂ ಆ ಭಾಗದ ತಾಲ್ಲೂಕು ಪಂಚಾಯಿತಿ ಸದಸ್ಯರು ಸೋಮಶೇಖರ್‌ ಅವರನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಭಿವೃದ್ಧಿ ಕಾರ್ಯಗಳೂ ಆಗಬೇಕು. ಡಿಸೆಂಬರ್‌ನಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿರುವುದರಿಂದ ಎಲ್ಲವನ್ನೂ ಒಮ್ಮೆಲೇ ಮಾಡಲು ಸಾಧ್ಯ ವಾಗುವುದಿಲ್ಲ. ತುರ್ತು ಕೆಲಸಗಳನ್ನು ಈಗ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಶಾಶ್ವತ ಅಭಿವೃದ್ಧಿ ಕೆಲಸ ಮಾಡೋಣ ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್‌ಪಿ ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌ ಪಾಲ್ಗೊಂಡಿದ್ದರು.

ಡಿ.10 ರಿಂದ 19ರ ವರೆಗೆ ಕಾರ್ಯಕ್ರಮ

ಪಂಚಲಿಂಗ ದರ್ಶನ ಕಾರ್ಯಕ್ರಮಗಳು ಡಿ.10 ರಿಂದ 19ರ ವರೆಗೆ ನಡೆಯಲಿದೆ. ಡಿ.14 ರಂದು ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ.

ಈ ಹಿಂದಿನ ಪಂಚಲಿಂಗದರ್ಶನ 2013ರಲ್ಲಿ ನಡೆದಿತ್ತು. ಅದಕ್ಕೂ ಹಿಂದೆ 2009, 2006ರಲ್ಲಿ ಜರುಗಿತ್ತು. ಕಾರ್ತೀಕ ಮಾಸ,
ವೃಶ್ಚಿಕ ಅಮಾವಾಸ್ಯೆ, ಸೋಮವಾರ ಕುಹಯೋಗ ಮತ್ತು ವಿಶಾಖ ನಕ್ಷತ್ರ ಸೇರುವ ಸಂವತ್ಸರದಲ್ಲಿ ಪಂಚಲಿಂಗದರ್ಶನ
ನಡೆಯುತ್ತದೆ.

ತಲಕಾಡು ಕ್ಷೇತ್ರದಲ್ಲಿ ವೈದ್ಯೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಮತ್ತು ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು ಪಂಚಲಿಂಗಗಳೆಂದು ಪ್ರಸಿದ್ಧಿಯಾಗಿದೆ.

ಧಾರ್ಮಿಕ ಕಾರ್ಯಕ್ರಮಗಳಿಗೆ ₹ 32 ಲಕ್ಷ

ಪಂಚಲಿಂಗದರ್ಶನ ಪ್ರಯುಕ್ತ ದೇವಾಲಯದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ₹ 32 ಲಕ್ಷ ಅಂದಾಜು ವೆಚ್ಚ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ತಹಶೀಲ್ದಾರ್‌ ಯತಿರಾಜ್‌ ಸಭೆಗೆ ಮಾಹಿತಿ ನೀಡಿದರು.

ಈ ವೆಚ್ಚದಲ್ಲಿ ಯಾವುದೇ ದೀಪಾಲಂಕಾರ ಸೇರಿರುವುದಿಲ್ಲ. ಅದೇ ರೀತಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲು ಮತ್ತು ಎಲ್‌ಇಡಿ ಪರದೆಗಳನ್ನು ಅಳವಡಿಸಲು ₹ 9 ಲಕ್ಷ ಅಗತ್ಯವಿದೆ ಎಂದರು.

ಸರ್ಕಾರವು 2009ರ ಪಂಚಲಿಂಗದರ್ಶನ ಮಹೋತ್ಸವಕ್ಕೆ ₹ 10 ಕೋಟಿ ಹಾಗೂ 2013ರ ಮಹೋತ್ಸವಕ್ಕೆ ₹ 12 ಕೋಟಿ ಬಿಡುಗಡೆ ಮಾಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.