ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರಕೇರಿಗೆ ಕುಲಶಾಸ್ತ್ರೀಯ ಅಧ್ಯಯನ ತಂಡ ಭೇಟಿ

ನಂಜನಗೂಡು ತಾಲ್ಲೂಕು: ಹಂಪಿ ವಿ.ವಿ ತಂಡದಿಂದ ಮಾಹಿತಿ ಸಂಗ್ರಹ
Last Updated 19 ಫೆಬ್ರುವರಿ 2021, 4:53 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಚಾಮಲಾಪುರದ ಹುಂಡಿ, ಗೋಳೂರು, ಹೆಮ್ಮರಗಾಲ, ಹಗಿನವಾಳು ಮುಂತಾದ ಗ್ರಾಮಗಳಿಗೆ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ನೇತೃತ್ವದ ತಂಡ ಭೇಟಿ ನೀಡಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಿತು.

ಚಾಮಲಾಪುರದ ಹುಂಡಿಯ ಮಾರಮ್ಮನ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ಮೇತ್ರಿ ಅವರು, ‘ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ವತಿಯಿಂದ 5 ಮಂದಿಯ ತಂಡದೊಂದಿಗೆ ತಾಲ್ಲೂಕಿನ 53 ಗ್ರಾಮಗಳಲ್ಲಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ. ಇದುವರೆಗೆ ನಡೆಸಿದ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗ ಬುಡಕಟ್ಟು ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.

‘ಚಿಕ್ಕಮ್ಮ, ಚಿಕ್ಕದೇವಿ, ಸಿದ್ದಪ್ಪಾಜಿ, ರವಣಮ್ಮ ದೇವಿಗಳ ಆರಾಧಕರಾದ ಸಮಾಜ, ಬುಡಕಟ್ಟು ಜನರಂತೆ ಪ್ರಕೃತಿಯ ಬೇವಿನ ಮರ, ಭಂಡಾರಗಳ ಪೂಜೆಯನ್ನು ನಡೆಸುತ್ತ ಬಂದಿದ್ದಾರೆ. ಬ್ರಾಹ್ಮಣರ ಪ್ರಭಾವಕ್ಕೆ ಒಳಗಾಗಿ ದಾಸ ಕುಲ, ವೆಂಕಟೇಶ್ವರನ ಆರಾಧಕರು ಆದವರು ಇದ್ದಾರೆ. ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಮೊಬೈಲ್ ಆ್ಯಪ್ ಮೂಲಕ 2 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿದ್ದು, ಕುಟುಂಬದ ಹಿರಿಯರಿಂದ ಮಾಹಿತಿ ಪಡೆದು, ಸಮಾಜದ ಪದ್ಧತಿ, ಆಚರಣೆ, ಕುಟುಂಬ ಜೀವನಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಿದರೆ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ‘ನಮ್ಮ ಪೂರ್ವಿಕರು ನಲ್ಲರಾಯರನ್ನು ಕುಲಗುರುಗಳಾಗಿ ಸ್ವೀಕರಿಸಿದವರು. ಪರಿಶಿಷ್ಟ ಜಾತಿಯವರಿಗೂ ನಲ್ಲರಾಯರೇ ಕುಲಗುರುಗಳು. ಪರಿಶಿಷ್ಟರಂತೆ ನಮ್ಮಲ್ಲೂ ಸಹ 9 ಬಣ್ಣಗಳ ಕುಲವಿದೆ, ಅವರಂತೆ ನಮ್ಮಲ್ಲಿ ನಾಗ, ಬೆಳ್ಳಿ, ಬೀಗದ ಕುಲ ಎಂಬ ಗುಂಪುಗಳಿವೆ. ಒಂದು ಕುಲಕ್ಕೆ ಸೇರಿದವರು ಬೇರೆ ಕುಲಕ್ಕೆ ಹೆಣ್ಣು ಕೊಡುವ- ತರುವ ಪದ್ಧತಿ ಇಲ್ಲ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣ ಮದುವೆ ಮಾಡುವ ಪದ್ಧತಿಯಿದೆ. ಪ್ರಾಣಿ ಬಲಿ, ದೇವರ ಗುಡ್ಡನನ್ನು ಬಿಡುವುದು ಹಾಗೂ ಮದುವೆ ಸಂಪ್ರದಾಯಗಳಲ್ಲಿ ಸಾಮ್ಯತೆ ಇದೆ’ ಎಂದರು.

‘ಜನಾಂಗದವರು ಮೀನು ಹಿಡಿಯುವ, ಕಲ್ಲು ಒಡೆಯುವ, ಮರಗೆಲಸ, ಕಟ್ಟಡ ನಿರ್ಮಾಣ ಕೆಲಸದಂತಹ ಕೆಲಸದಲ್ಲಿ ಸಮಾಜದವರು ತೊಡಗಿದ್ದಾರೆ. ಈ ಹಿಂದೆ ನಮ್ಮ ಸಮಾಜ ಅಲೆಮಾರಿ ಜನಾಂಗವಾಗಿದ್ದ ಬಗ್ಗೆ ಕುರುಹುಗಳಿವೆ. ಅದ್ದರಿಂದ ಸಮಗ್ರ ಅಧ್ಯಯನ ನಡೆಸಿ ಉಪ್ಪಾರ ಸಮಾಜವನ್ನು ಬುಡಕಟ್ಟು ಜನಾಂಗ ಅಥವಾ ಪರಿಶಿಷ್ಟ ಜಾತಿ- ಪಂಗಡವಾಗಿ ಪರಿಗಣಿಸಿ ಮೀಸಲಾತಿ ನೀಡಬೇಕು’ ಎಂದು ಕೋರಿದರು.

ಜಿ.ಪಂ. ಸದಸ್ಯೆ ಲತಾ ಸಿದ್ದಶೆಟ್ಟಿ ಮುಖಂಡರಾದ ಶಿವಣ್ಣ, ಹೆಮ್ಮರಗಾಲ ಸೋಮಣ್ಣ, ಬಾಲಚಂದ್ರ, ವೆಂಕೋಬರಾವ್, ಸೋಮೇಶ್ ಉಪ್ಪಾರ್, ಮಂಜುನಾಥ್, ರಾಮು, ಹುಂಡಿ ಮಹದೇವು, ನಗರಸಭೆ ಸದಸ್ಯರಾದ ನಾಗಮಣಿ ಶಂಕರಪ್ಪ, ಮಹದೇವಮ್ಮ ಬಾಲಚಂದ್ರ, ಸಿದ್ದರಾಜು, ಶಶಿಕಲಾ, ಸೌಮ್ಯಾ, ಸಿದ್ದಶೆಟ್ಟಿ, ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT