ಮತಿ ಉಪಯೋಗಿಸಿ ಮತ ಹಾಕಿ

ಬುಧವಾರ, ಏಪ್ರಿಲ್ 24, 2019
29 °C

ಮತಿ ಉಪಯೋಗಿಸಿ ಮತ ಹಾಕಿ

Published:
Updated:
Prajavani

ನಾವು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಈ ವ್ಯವಸ್ಥೆಯ ಪ್ರಾಥಮಿಕ ಮತ್ತು ಆದ್ಯ ಕರ್ತವ್ಯ ಏನೆಂದರೆ ಅದು ಮತದಾನ. ಒಂದು ವೇಳೆ ಮತದಾನದಿಂದ ದೂರ ಉಳಿದರೆ ನಾವು ಈ ವ್ಯವಸ್ಥೆಯಿಂದ ದೂರ ಹೋದಂತೆ.

ಭಾರತ ದೇಶ ಇಂದು ನಿಂತಿರುವುದೇ ಪ್ರಜಾಪ್ರಭುತ್ವದ ತಳಪಾಯದ ಮೇಲೆ. ಇಂತಹ ತಳಪಾಯ ಭದ್ರವಾಗಿರಬೇಕಾದರೆ ಅದಕ್ಕೆ ಮತದಾನ ಮಾಡಲೇಬೇಕು. ಮತದಾನ ಮಾಡದೇ ಹೋದರೆ ಈ ತಳಪಾಯ ಅಲುಗಾಡುತ್ತದೆ. ಆಗ ಮುಂದೊಂದು ದಿನ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಬೀಳುವ ಆತಂಕ ಎದುರಾಗಲಿದೆ.

ಶೇ 100ರಷ್ಟು ಮತದಾನ ಆಗಲೇಬೇಕು. ಆಗ ಮಾತ್ರ ನಮ್ಮ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಸಾಲು ಸಾಲು ರಜೆಗಳು ಬರುತ್ತವೆ. ಈ ರಜೆಗಳನ್ನು ಜನರು ಪ್ರವಾಸಕ್ಕಾಗಿ ಬಳಸಬಾರದು. ಪ್ರವಾಸವನ್ನು ಬೇರೆ ದಿನ ಹೊರಡಲು ಸಾಧ್ಯ. ಆದರೆ, ಮತದಾನವನ್ನು ಬೇರೆ ದಿನ ಮಾಡಲು ಆಗುವುದಿಲ್ಲ ಎನ್ನುವುದನ್ನು ಮರೆಯಬಾರದು.

ಪ್ರವಾಸಕ್ಕಾಗಿಯಾದರೂ ಹೊರಡಿ, ದೇವಸ್ಥಾನಕ್ಕಾಗಿಯಾದರೂ ಹೊರಡಿ. ಆದರೆ, ಅದು ಮತದಾನ ಮಾಡಿದ ಬಳಿಕವಷ್ಟೇ. ಹಾಗಾಗಿ, ಮತದಾನ ಮಾಡುವ ಕಡೆಗೆ ಗಮನ ಹರಿಸಬೇಕು.

ಮತದಾನ ಯಾರಿಗೆ ಮಾಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಆಸೆ ಆಮಿಷಗಳನ್ನು ಒಡ್ಡಿದವರಿಗೆ, ಹಣ, ಒಡವೆ, ಸೌಲಭ್ಯಗಳನ್ನು ಒದಗಿಸಿದವರಿಗೆ ಖಂಡಿತಾ ಮಾಡಬಾರದು. ಮತದಾನದಂತಹ ಅಮೂಲ್ಯ ಹಕ್ಕನ್ನು ಇಂತಹ ಆಮಿಷಗಳಿಗೆ ಮಾರಿಕೊಳ್ಳಬಾರದು.

ಕಣದಲ್ಲಿರುವ ಅಭ್ಯರ್ಥಿಗಳನ್ನು ಅಳೆದು ತೂಗಿ ಸರಿ ಎನಿಸಿದ ಯೋಗ್ಯ ಅಭ್ಯರ್ಥಿಗೆ ಮತ ಚಲಾವಣೆ ಮಾಡಬೇಕು. ಪ್ರಜಾಪ್ರಭುತ್ವದ ಬೀಜಾಂಕುರವಾಗಿರುವ ಭಾರತದಲ್ಲಿ ಪ್ರಜೆ ತನ್ನ ವೈಯಕ್ತಿಕ ಹಕ್ಕಾದ ಮತ ಚಲಾಯಿಸುವ ಮೂಲಕ ಪ್ರತಿನಿಧಿಗಳನ್ನು ಆರಿಸಬೇಕು. ಈ ವ್ಯವಸ್ಥೆಯೇ ನಿಜವಾದ ಪ್ರಜಾಪ್ರಭುತ್ವ.

ಒಂದು ಮದುವೆ ಮಾಡಲು ಹುಡುಗ ಅಥವಾ ಹುಡುಗಿಯ ಪೂರ್ವಾಪರವನ್ನು ನಾವೆಷ್ಟು ಯೋಚಿಸುತ್ತೇವೆ, ವಿಚಾರಿಸುತ್ತೇವೆ. ಕನಿಷ್ಠ ಅಷ್ಟಾದರೂ ನಾವು ನಮ್ಮ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾದರೆ ಯೋಚಿಸಬೇಕಲ್ಲವೇ?

– ವಿದ್ವಾನ್ ಶಿವಕುಮಾರಸ್ವಾಮಿ,
ಚಿಂತಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !