ಭಾನುವಾರ, ಜುಲೈ 25, 2021
22 °C
ಮರದೂರು ಗ್ರಾಮದ ದೊಂಬರ ಸಮುದಾಯಕ್ಕೆ ಗಟ್ಟಿ ಸೂರಿಲ್ಲ

ಮೈಸೂರು: ಮೂರು ದಶಕದಿಂದ ಮನೆಗಾಗಿ ಅಲೆಮಾರಿಗಳ ಅಲೆದಾಟ

ಎಚ್‌.ಎಸ್.ಸಚ್ಚಿತ್‌ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಆಧುನಿಕ ಯುಗದಲ್ಲಿ ದೇಶ ಸಾಗುತ್ತಿದ್ದರೂ ಅಲೆಮಾರಿ ಸಮುದಾಯಕ್ಕೆ ಸೇರಿದ ದೊಂಬರಿಗೆ ಸೂರಿಲ್ಲದೆ ಮುರುಕು ಗುಡಿಸಲಿನಲ್ಲಿ ಬದುಕು ಸಾಗಿಸಬೇಕಾದ ಅನಿವಾರ್ಯತೆ ಇದೆ.

ಹೌದು...! ಇದು ತಾಲ್ಲೂಕಿನ ಮರದೂರು ಗ್ರಾಮದ ದೊಂಬರ ಕಾಲೊನಿಯ ವಾಸವಿರುವ ಸುಮಾರು 30 ಕುಟುಂಬಗಳ ಸ್ಥಿತಿ. ಮೂರು ದಶಕಗಳಿಂದ ಮನೆ ಇಲ್ಲದೆ ಗುಡಿಸಲಿನಲ್ಲೇ ಹತ್ತಾರು ಸಮಸ್ಯೆಗಳ ನಡುವೆ ಕಾಲ ಕಳೆಯುತ್ತಿದ್ದಾರೆ.

ಸಮಾಜದ ಮುಖಂಡ ಕೃಷ್ಣಯ್ಯನಿಗೆ ದೇವರಾಜ ಅರಸು ಕಾಲದಲ್ಲಿ ಮಂಜೂರಾದ 2 ಎಕರೆ ಕೃಷಿ ಭೂಮಿಯನ್ನು ತನ್ನ ಸಮುದಾಯದ ಜನರ ವಾಸಕ್ಕಾಗಿ 1 ಎಕರೆ ದಾನಿ ನೀಡಿದ್ದರಿಂದ ಈ ಕುಟುಂಬಗಳು ಗುಡಿಸಲನ್ನು ಕಟ್ಟಿಕೊಂಡು ಸ್ವಲ್ಪ ಬೆಚ್ಚಗೆ ಇರಲು ಸಾಧ್ಯವಾಗಿದೆ ಎನ್ನುತ್ತಾರೆ ಕಾಲೊನಿ ನಿವಾಸಿ ಜಾನಕಮ್ಮ.

ವೃತ್ತಿ ಬದಲು: ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಜನರು ಮರಾಠಿ ಭಾಷಿಗರಾಗಿದ್ದು, ಇವರು ಹೊಟ್ಟೆ ಪಾಡಿಗೆ ದೊಂಬರಾಟ (ಬೀದಿ ಸರ್ಕಸ್‌) ನಡೆಸಿ ಬದುಕುತ್ತಿದ್ದರು. ಕಾಲ ಉರುಳಿದಂತೆ ಸರ್ಕಸ್ ಬಿಟ್ಟು ಆಟಿಕೆ ಸಾಮಗ್ರಿಗಳನ್ನು ಮಾರಾಟ ಹೀಗೆ ಒಂದೊಂದು ರೀತಿ ಬದುಕು ಕಟ್ಟಿಕೊಳ್ಳುತ್ತಿದ್ದ ಈ ಸಮುದಾಯ ಅಂತಿಮವಾಗಿ ಕೃಷಿ ಕೂಲಿ ಕಾರ್ಮಿಕರಾಗಿ ವೃತ್ತಿ ಬದಲಿಸಿಕೊಂಡು ಸದ್ಯ ಜೀವನ ನಡೆಸಿದ್ದಾರೆ.

ಸೂರು ಕೊಡಿ: ಮರದೂರು ಪಂಚಾಯಿತಿಗೆ ಸೇರಿದ ದೊಂಬರ ಕಾಲೊನಿಯಲ್ಲಿ ಗುಡಿಸಲನಲ್ಲೇ ಜೀವನ ಕಳೆದಿದ್ದೇವೆ. ನಮ್ಮ ಮಕ್ಕಳೂ ಇದೇ ರೀತಿ ಜೀವನ ನಡೆಸಬೇಕಾ? ಎನ್ನುವ ಸ್ಥಳೀಯ ನಿವಾಸಿ ಗೀತಾ, ‘ಮಳೆಗಾಲದಲ್ಲಿ ನಮ್ಮ ಬದುಕು ಹೇಗಿದೆ ಎಂದು ಹೇಳಿಕೊಳ್ಳಲು ಅಸಹ್ಯವಾಗುತ್ತದೆ’ ಎಂದು ಕಣ್ಣೀರು ಹಾಕಿದರು.

ಈ ಕಾಲೊನಿಯಲ್ಲಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಪಿಯುಸಿ, ಒಬ್ಬರು ಪದವಿ ಓದುತ್ತಿದ್ದಾರೆ. ಉಳಿದವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಕೆಬ್ಬೆಕೊಪ್ಪಲು, ಬನ್ನಿಕೊಪ್ಪಲು, ಹುಣಸೂರಿಗೆ ನಿತ್ಯ ಬಂದು ಹೋಗುತ್ತಾರೆ.

ಶೌಚಾಲಯ: ಸ್ವಚ್ಛ ಭಾರತ್ ಅಭಿಯಾನ ದೇಶದಲ್ಲೇ ಸದ್ದು ಮಾಡಿದ್ದರೂ ಈ ಜನರಿಗೆ ಯೋಜನೆ ಇನ್ನೂ ತಲುಪಿಲ್ಲ. ಕಾಲೊನಿ ನಿವಾಸಿಗಳಿಗೆ ಶೌಚಾಲಯ ಬಳಕೆ ಗೊತ್ತೇ ಇಲ್ಲ ಎಂದರು ಹೆಸರು ಹೇಳದ ಪಿಯುಸಿ ವಿದ್ಯಾರ್ಥಿನಿ.

ಕಾಲೊನಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಹೋರಾಡುತ್ತಿರುವ ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ‘ಕಾಲೊನಿಯಲ್ಲಿ 30 ರಿಂದ 40 ವಿದ್ಯಾರ್ಥಿಗಳು ವಿವಿಧ ಹಂತದಲ್ಲಿ ಓದುತ್ತಿದ್ದಾರೆ. ಇವರ ಓದಿಗೆ ಬೀದಿ ದೀಪದ ಬೆಳಕೇ ಗತಿ. ಭವಿಷ್ಯದ ಹಲವು ಕನಸು ಕಾಣುತ್ತಿರುವ ಇವರ ಭವಿಷ್ಯಕ್ಕೆ ತಾಲ್ಲೂಕು ಆಡಳಿತ ಸ್ಪಂದಿಸಬೇಕು‘ ಎಂದು  ಒತ್ತಾಯಿಸಿದರು.

‘30 ವರ್ಷದಿಂದ ನೆಲೆಸಿರುವ ಈ ಸಮುದಾಯದ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿ ಹಾಗೂ ತಾಲ್ಲೂಕು ಆಡಳಿತಕ್ಕೆ ಇಚ್ಛಾಶಕ್ತಿ ಇಲ್ಲದೆ ಈ ಜನರು ಅತಂತ್ರ ಜೀವನ ನಡೆಸಿದ್ದಾರೆ’ ಎಂದು ಸತ್ಯಪ್ಪ ಸಮಸ್ಯೆಗಳನ್ನು ವಿವರಿಸಿದರು.

ಫಲಾನುಭವಿಗಳ ಹೆಸರಿನಲ್ಲಿ ಹಕ್ಕುಪತ್ರವಿಲ್ಲ

ಸರ್ಕಾರಿ ಯೋಜನೆ ಜಾರಿಗೊಳಿಸಲು ಫಲಾನುಭವಿಗಳ ಹೆಸರಿನಲ್ಲಿ ನಿವೇಶನದ ಹಕ್ಕು ಪತ್ರವಿಲ್ಲ, ಇದರೊಂದಿಗೆ ಕೆಲ ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಈಗ ಸರಿಪಡಿಸಲಾಗಿದೆ. ತಿಂಗಳೊಳಗಾಗಿ ಹಕ್ಕುಪತ್ರ ಹಾಗೂ ಮನೆ ಯೋಜನೆ ಜಾರಿ ಆಗಲಿದೆ.
ಗಿರೀಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ಎರಡು ವರ್ಷಗಳ ಹೋರಾಟ

ದೊಂಬರಿಗೆ ಸೂರು ಕಲ್ಪಿಸುವ ದಿಕ್ಕಿನಲ್ಲಿ ಎರಡು ವರ್ಷದಿಂದ ಹೋರಾಟ ನಡೆದಿದೆ. ಶಾಸಕರ ಗಮನಕ್ಕೂ ತಂದಿದ್ದೇನೆ. ಜಿಲ್ಲಾಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸುವೆ. ಇಲ್ಲವಾದಲ್ಲಿ ಹೋರಾಟ ಮಾಡುವೆ
ಡಾ.ಪುಷ್ಪಾ ಅಮರನಾಥ್ , ಜಿ.ಪಂ. ಸದಸ್ಯೆ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು