ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ: ಬಸವಣ್ಣ, ಅಂಬೇಡ್ಕರನ್ನು ಜೈಲಿಗೆ ಹಾಕುವಿರಾ? ಎಚ್‌. ವಿಶ್ವನಾಥ್ ಪ್ರಶ್ನೆ

ಮತಾಂತರ ನಿಷೇಧ ಕಾಯ್ದೆ ಜಾರಿ ಸಂಬಂಧ ಸದನ ಆಯ್ಕೆ ಸಮಿತಿ ರಚಿಸಲು ಆಗ್ರಹ
Last Updated 23 ಡಿಸೆಂಬರ್ 2021, 9:01 IST
ಅಕ್ಷರ ಗಾತ್ರ

ಮೈಸೂರು: ‘ಮತಾಂತರ ನಿಷೇಧ ಕಾಯ್ದೆ ಸಂಬಂಧ ಸದನ ಆಯ್ಕೆ ಸಮಿತಿ ರಚಿಸಿ, ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಿದ ಬಳಿಕವೇ ಕಾಯ್ದೆಯನ್ನು ಜಾರಿಗೊಳಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದರು.

‘12ನೇ ಶತಮಾನದಲ್ಲಿ ಬಸವೇಶ್ವರರು ಅಸ್ಪೃಶ್ಯರು, ಅವಮಾನಿತರು, ತಳ ಸಮುದಾಯದವರಿಗೆ ಲಿಂಗದೀಕ್ಷೆ ನೀಡುವ ಮೂಲಕ ವೀರಶೈವ ಧರ್ಮವನ್ನು ಸ್ಥಾಪಿಸಿದ್ದರು. ಇದನ್ನೇ ಮಾನವ ಧರ್ಮ ಎನ್ನುತ್ತೇವೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಬಸವೇಶ್ವರರ ಮೂಲ ತತ್ವಗಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾಗಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸಬಾರದು. ಸದನ ಆಯ್ಕೆ ಸಮಿತಿ ಸದಸ್ಯರು ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಸಲಹೆ ಪಡೆದು, ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ವೀರಶೈವ ಧರ್ಮದ ಹರಣ ಆಗುತ್ತಿದ್ದರೂ ಮಠಮಾನ್ಯಗಳು ಬಾಯಿ ಬಿಡುತ್ತಿಲ್ಲ. ಬಸವಣ್ಣನ ಹೆಸರಿನಲ್ಲಿ ಪಾರಿತೋಷಕ ನೀಡುವ ಚಿತ್ರದುರ್ಗದ ಸ್ವಾಮೀಜಿ ಬಾಯಿ ಮುಚ್ಚಿಕೊಂಡು ಇದ್ದಾರೆ. ಸರ್ಕಾರದ ಅನುದಾನದ ಅನುಗ್ರಹ ಅವರ ಬಾಯಿ ಮುಚ್ಚಿಸಿರಬಹುದೇ? ಅಹಿಂದ ಸ್ವಾಮೀಜಿಗಳ ಬಾಯಿ ಕಟ್ಟಿರುವುದು ಯಾರು? ಸಾಹಿತಿಗಳು, ಚಿಂತಕರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವರು ರಾಜ್ಯೋತ್ಸವ ಪ್ರಶಸ್ತಿಗೆ ಸೀಮಿತರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈಲಿಗೆ ಹಾಕಲು ಸಾಧ್ಯವೇ?: ‘ಮತಾಂತರ ನಿಷೇಧ ಕಾಯ್ದೆ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಹಾಗಿದ್ದರೆ, ಮಾನವ ಧರ್ಮದ ಪರವಿದ್ದ ಬಸವಣ್ಣ, ಗಾಂಧಿ, ಅಂಬೇಡ್ಕರ್‌, ಕುವೆಂಪು ಅವರನ್ನು ಜಿಲ್ಲಾಧಿಕಾರಿಗಳ ಮೂಲಕ ಜೈಲಿಗೆ ಹಾಕಲು ಆಗುತ್ತದೆಯೇ? ಆರ್‌ಎಸ್‌ಎಸ್‌ ನಾಯಕ ಸಿಂಘಾಲ್‌, ಮುರಳಿಮನೋಹರ ಜೋಷಿ, ಅಡ್ವಾಣಿ, ಸುಬ್ರಹ್ಮಣ್ಯಸ್ವಾಮಿ, ಪ್ರವೀಣ್‌ ತೊಗಾಡಿಯ ಅವರ ಹೆಣ್ಣುಮಕ್ಕಳು, ಬಾಳಠಾಕ್ರೆ ಮೊಮ್ಮಗಳು ಮುಸ್ಲಿಂ ವ್ಯಕ್ತಿಗಳನ್ನು ಮದುವೆಯಾಗಿದ್ದಾರೆ. ಸಿನಿಮಾ ನಟರಾದ ಶಾರುಖ್‌ ಖಾನ್‌, ಸೈಫ್‌ ಅಲಿಖಾನ್‌, ಅರ್ಬಾಜ್‌ ಖಾನ್‌ ಇವರೆಲ್ಲಾ ಹಿಂದೂ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ. ಇವರನ್ನೆಲ್ಲಾ ಜೈಲಿಗಟ್ಟಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಅಮೆರಿಕ, ಅರಬ್‌ ರಾಷ್ಟ್ರಗಳು ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ನಿಮ್ಮ ಮಕ್ಕಳಿಗೆ ಬೇರೆ ದೇಶಗಳ ಗ್ರೀನ್‌ ಕಾರ್ಡ್‌ ಬೇಕು. ಅಲ್ಲಿ ಶಿಕ್ಷಣ ಪಡೆಯಲು, ಉದ್ಯಮ ಸ್ಥಾಪಿಸಲು ಹಾತೊರೆಯುವ ನೀವು ಯಾಕೆ ಕ್ರಿಶ್ಚಿಯನ್ನರು, ಮುಸ್ಲಿಮರಿಗೆ ಕಿರುಕುಳ ನೀಡುತ್ತೀರಿ? ಆರ್‌ಎಸ್‌ಎಸ್‌, ಬಿಜೆಪಿ ನಾಯಕರ ಮಕ್ಕಳು, ಮೊಮ್ಮಕ್ಕಳು ಕ್ರಿಶ್ಚಿಯನ್‌ ಸಂಸ್ಥೆಗಳಲ್ಲಿ ಓದುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT