ಶುಕ್ರವಾರ, ಏಪ್ರಿಲ್ 3, 2020
19 °C
ಭಾವುಕರಾದ ಹಲವರು, ಮೈಸೂರಿನ ಬಗ್ಗೆ ಮೆಚ್ಚುಗೆಯ ಮಹಾಪೂರ

ಮೈಸೂರಿನಿಂದ ತವರಿನತ್ತ ಹೆಜ್ಜೆ ಹಾಕಿದ ಕಾಶ್ಮೀರದ ಯುವಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಳೆದ 7 ದಿನಗಳಿಂದ ಇಲ್ಲಿನ ಯೂತ್‌ ಹಾಸ್ಟೆಲ್‌ನಲ್ಲಿ ತಂಗಿದ್ದ 132 ಮಂದಿ ಕಾಶ್ಮೀರದ ಯುವಕ, ಯುವತಿಯರು ಭಾರವಾದ ಮನಸ್ಸಿನಿಂದ ಬುಧವಾರ ತವರಿನತ್ತ ಹೆಜ್ಜೆ ಹಾಕಿದರು.

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವಕೇಂದ್ರ ಸಂಘಟನೆ ಹಾಗೂ ನೆಹರೂ ಯುವ ಕೇಂದ್ರ ಮೈಸೂರು ವತಿಯಿಂದ ಇಲ್ಲಿ ಏರ್ಪಡಿಸಲಾಗಿದ್ದ ‘ಕಾಶ್ಮೀರಿ ಯುವಜನ ವಿನಿಮಯ ಕಾರ್ಯಕ್ರಮ’ದಲ್ಲಿ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಈ ದೃಶ್ಯಗಳು ಕಂಡು ಬಂದವು.

ಇವರು ಇಲ್ಲಿನ ಕೈಗಾರಿಕೆಗಳು, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಖುಷಿ ಪಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಹಾಕಿಬ್ ನಜೀರ್, ‘ಕರ್ನಾಟಕ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇಲ್ಲಿಯೆ ನೆಲೆಸೋಣ ಎಂದು ಅನ್ನಿಸುತ್ತಿದೆ’ ಎಂದು ಭಾವುಕರಾದರು.

ಆರಿಫ್‌ ಹುಸೇನ್ ಪ್ರತಿಕ್ರಿಯಿಸಿ, ‘ಇಲ್ಲಿನ ಚಾಮುಂಡಿಬೆಟ್ಟ, ಅರಮನೆ ತುಂಬಾ ಇಷ್ಟವಾಯಿತು. ಕೈಗಾರಿಕೆಗಳ ಪ್ರಗತಿ ಕಂಡು ಬೆಕ್ಕಸಬೆರಗಾದೆ. ಕರ್ನಾಟಕದವರು ನಿಜಕ್ಕೂ ಅದೃಷ್ಟವಂತರು’ ಎಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ‘ಭಾರತದ ಸಾಂಸ್ಕೃತಿಕ ವೈವಿಧ್ಯ ಉಳಿಸುವಲ್ಲಿ ಯುವ ಜನಾಂಗದ ಪಾತ್ರ ದೊಡ್ಡದು. ಯುವ ತಲೆಮಾರು ದೇಶದ ವೈವಿಧ್ಯಗಳನ್ನು ಅರಿತು ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು’ ಎಂದು ತಿಳಿಸಿದರು.

ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ಪ ಅವರು ತಾವು ಕಾಶ್ಮೀರದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು.

ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮೈಸೂರು ಪೇಟಾಗೆ ಯುವಕರು ಮಾರುಹೋದರು. ಇದನ್ನು ತೊಟ್ಟುಕೊಂಡು ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)