ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿರಿಯಾಪಟ್ಟಣ | ಕೆರೆಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ: 24ರಂದು ಯೋಜನೆಗೆ ಚಾಲನೆ

24ರಂದು ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ: ಸಚಿವ ಕೆ.ವೆಂಕಟೇಶ
ಬಿ.ಆರ್. ಗಣೇಶ್
Published 22 ಜನವರಿ 2024, 6:35 IST
Last Updated 22 ಜನವರಿ 2024, 6:35 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಪ್ರಮುಖ ಯೋಜನೆಯಾದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಕೊಂಡಿದ್ದು ಜ. 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

2018ರಲ್ಲಿ ಶಾಸಕರಾಗಿದ್ದ ಕೆ. ವೆಂಕಟೇಶ್ ₹ 295 ಕೋಟಿ ವೆಚ್ಚದ ಈ ಯೋಜನೆಯ ರೂಪಿಸಿ ಪ್ರಸ್ತಾವವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟು ಮಹತ್ವದ ಯೋಜನೆಗೆ ಮಂಜೂರಾತಿ ಪಡೆದು ಶಂಕುಸ್ಥಾಪನೆ ಸಹ ಮಾಡಿಸಿದ್ದರು.

ಕಾವೇರಿ ನದಿಯ ದಡದಲ್ಲಿರುವ ಮುಳಸೋಗೆ ಗ್ರಾಮದಿಂದ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ₹ 295 ಕೋಟಿ ಅಂದಾಜು ವೆಚ್ಚದ ಈ ಯೋಜನೆಯನ್ನು ಕಾವೇರಿ ನೀರಾವರಿ ನಿಗಮವು ಮಹಾರಾಷ್ಟ್ರ ಕೊಲ್ಲಾಪುರದ ಲಕ್ಷ್ಮಿ ಸಿವಿಲ್‌ ಎಂಜಿನಿಯರಿಂಗ್‌ ಅಂಡ್ ಕನ್‌ಸ್ಟ್ರಕ್ಷನ್‌ ಕಂಪನಿ ಮೂಲಕ ಅನುಷ್ಠಾನಗೊಳಿಸಿದೆ.

ಮುಳ್ಳುಸೋಗೆ ಗ್ರಾಮದ ಬಳಿ ಏತ ನೀರಾವರಿಯ ಮೂಲಕ ಕಾವೇರಿ ನದಿಯಿಂದ ನೀರನ್ನು ಎತ್ತಿ ಅಲ್ಲಿಂದ 11.37 ಕಿ.ಮೀ ವರೆಗೆ ಅಳವಡಿಸಿರುವ ಪೈಪ್‌ಲೈನ್‌ಗಳ ಮೂಲಕ ಬ್ಯಾಡರ ಬೆಳಗೊಲಿ ಬಳಿ ನಿರ್ಮಾಣಗೊಂಡಿರುವ ಸಂಗ್ರಹಣಾ ತೊಟ್ಟಿಗೆ ನೀರನ್ನು ತರುವ ಕಾಮಗಾರಿ ಸಹ ಸಂಪೂರ್ಣಗೊಂಡಿದೆ.

ಈ ಯೋಜನೆಗೆ 66 ಕೆವಿ ವಿದ್ಯುತ್‌ ಅಗತ್ಯವಿದ್ದು, ಮಳೆಗಾಲದಲ್ಲಿ ನಿರಂತರವಾಗಿ ಕೆರೆಗಳಿಗೆ ನೀರು ಹಾಯಿಸುವ ಸಲುವಾಗಿ ಪ್ರತ್ಯೇಕ ವಿದ್ಯುತ್ ಉಪ ಕೇಂದ್ರವನ್ನು ಸಹ ತೆರೆಯಲಾಗಿದೆ. ಬೃಹತ್ ಗಾತ್ರದ ಜಾಕ್‌ವೆಲ್, ಪಂಪ್‌ಗಳನ್ನು ಅಳವಡಿಸಿ, ದೊಡ್ಡ ಗಾತ್ರದ ಪೈಪ್‌ಗಳನ್ನು ಅಳವಡಿಸಿ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.

ಮಾಜಿ ಶಾಸಕ ಕೆ.ಮಹದೇವ್ ಈ ಯೋಜನೆ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿದ್ದರೂ ಕೊರೊನಾ ಮತ್ತಿತರ ಕಾರಣಗಳಿಂದ 5 ವರ್ಷಗಳಾದರೂ ಸೂಕ್ತ ಅನುದಾನ ಸಿಗದೇ ಕುಂಟುತ್ತಾ ಸಾಗಿತ್ತು. ಕೆ.ವೆಂಕಟೇಶ್ ಸಚಿವರಾದ ನಂತರ ಕಾಮಗಾರಿ  ವೇಗ ಪಡೆದುಕೊಂಡು ಪೂರ್ಣಗೊಂಡಿದೆ.

‘ತಾಲ್ಲೂಕು ಅರೆಮಲೆನಾಡು ಪ್ರದೇಶವಾಗಿದ್ದು, ಇಲ್ಲಿ ಮಳೆಯಾಶ್ರಿತ ಭೂಮಿ ಹೆಚ್ಚಾಗಿದೆ. ಕಾವೇರಿ ತಾಲ್ಲೂಕಿನ ಗಡಿ ಪ್ರದೇಶದಲ್ಲಿ ಹರಿದರೂ ಈ ನೀರು ಕುಡಿಯುವ ನೀರಿಗಾಗಿ ಬಿಟ್ಟರೆ ಬೇರೆ ಉಪಯೋಗಕ್ಕೆ ಬಳಸಲಾಗುವ ಅವಕಾಶವೇ ದೊರೆತಿರಲಿಲ್ಲ. ಈಗ ನೀರು ದೊರೆಯುವಂತಾಗಿದೆ’ ಎಂದರು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್.

ಜ. 24ರಂದು ತಾಲ್ಲೂಕಿನ ಭಾರತಮಾತ ಕೊಪ್ಪ ಶಾಲೆಯ ಬಳಿ ಇರುವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮಳೆ ಸೋಗಿ ಗ್ರಾಮದ ಸಿದ್ಧಗೊಂಡ ಬಳಿ ಪಂಪ್‌ ಹೌಸ್ ಮತ್ತು ವಿದ್ಯುತ್ ಉಪ ವಿತರಣಾ ಕೇಂದ್ರ 
ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮಳೆ ಸೋಗಿ ಗ್ರಾಮದ ಸಿದ್ಧಗೊಂಡ ಬಳಿ ಪಂಪ್‌ ಹೌಸ್ ಮತ್ತು ವಿದ್ಯುತ್ ಉಪ ವಿತರಣಾ ಕೇಂದ್ರ 
ಸಚಿವ ಕೆ. ವೆಂಕಟೇಶ್
ಸಚಿವ ಕೆ. ವೆಂಕಟೇಶ್
ನೀರು ತುಂಬಿಸಲು ಸಿದ್ಧತೆ
‘ಮುಂದಿನ ಮಳೆಗಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಿಸಿ ದನ ಕರುಗಳಿಗೆ ಕುಡಿಯುವ ನೀರು ಮೀನು ಸಾಕಾಣಿಕೆಗೆ ಉತ್ತೇಜನ ದೊರೆತು ಆರ್ಥಿಕ ಅಭಿವೃದ್ಧಿ ಸಹ ಹೊಂದಲಿದೆ’ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT