ತಿ.ನರಸೀಪುರ: ‘ಸ್ಫಟಿಕ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹54,179 ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಜಿ.ರಾಜೇಶ್ ಹೇಳಿದರು.
ಪಟ್ಟಣದ ವಿವೇಕಾನಂದ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ವಿದ್ಯಾರ್ಥಿ ನಿಲಯದಲ್ಲಿ ನಡೆದ 2022–23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಂಘವು ಈವರೆಗೆ ₹12 ಲಕ್ಷ ವಹಿವಾಟು ನಡೆಸಿದೆ. 2024ರ ಸಾಲಿಗೆ ₹15 ಲಕ್ಷ ಮೊತ್ತದ ಬಜೆಟ್ ಅಂದಾಜಿಸಲಾಗಿದೆ. ಸಂಘದಲ್ಲಿ 794 ಷೇರುದಾರರಿದ್ದು, ಹೆಚ್ಚಿನ ಸದಸ್ಯತ್ವದ ಅವಶ್ಯಕತೆ ಇದೆ. ಕೆಲ ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದೇ ಸುಸ್ತಿದಾರರಾಗಿದ್ದಾರೆ. ಸಾಲ ಮರುಪಾವತಿಸಬೇಕು’ ಎಂದು ಸೂಚಿಸಿದರು.
ಸಂಘದ ನಿರ್ದೇಶಕ ತೊಂಟೇಶ್ ಮಾತನಾಡಿ, ‘ಈಗ ಪ್ರತಿ ತಿಂಗಳು ಮೂವರು ಸದಸ್ಯರಿಗೆ ತಲಾ ₹30 ಸಾವಿರ ಸಾಲ ನೀಡಲಾಗುತ್ತಿದೆ. ಸಂಘದ ಬೈಲಾ ಪ್ರಕಾರ ₹40 ಸಾವಿರಕ್ಕೆ ಸಾಲ ಸೌಲಭ್ಯವನ್ನು ಹೆಚ್ಚಿಸಬಹುದು. ಆದರೆ, ಇದಕ್ಕೆ ₹4 ಸಾವಿರ ಡಿಪಾಸಿಟ್ ಇಡಬೇಕಾಗುತ್ತದೆ’ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಬಂದ ಲಾಭವನ್ನು ಸಂಘದ ಅಭಿವೃದ್ಧಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಪಂಕಜ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸೌಮ್ಯ ರಾಜಬುದ್ದಿ, ನಿರ್ದೇಶಕರಾದ ಜಿ.ಪರಶಿವಮೂರ್ತಿ, ಮಹದೇವಸ್ವಾಮಿ, ಸ್ಟುಡಿಯೋ ಜಗದೀಶ್, ಎಂ.ಷಡಕ್ಷರಿ, ರಾಜು, ಕುರುಬೂರು ಅಶೋಕ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.