ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ | 8,643 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ನಾಶ

Published 24 ಸೆಪ್ಟೆಂಬರ್ 2023, 5:22 IST
Last Updated 24 ಸೆಪ್ಟೆಂಬರ್ 2023, 5:22 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕು ಬರದಿಂದ ತತ್ತರಿಸಿದ್ದು, ಪ್ರಮುಖ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 12,740 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದು, ಈ ಪೈಕಿ 8,643 ಹೆಕ್ಟೇರ್‌ ಪ್ರದೇಶದ ಜೋಳ ಮಳೆ ಕೊರತೆಯಿಂದ ನಾಶವಾಗಿದೆ.

ಈ ಬಾರಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದು, ಈ ಬೆಳೆ ಸಹ ನೀರಿಲ್ಲದೆ ಒಣಗುತ್ತಿದೆ. ಹೀಗಾಗಿ, ಸಂಕಷ್ಟಕ್ಕೆ ಸಿಲುಕಿರುವ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

‘ರಾಗಿ ಮತ್ತು ಜೋಳದ ಬೆಳೆಗೆ ಹೆಕ್ಟೇರ್‌ಗೆ ₹8500 ಕೇಂದ್ರ ಸರ್ಕಾರ ನೀಡಲು ಕೃಷಿ ಇಲಾಖೆ ಶಿಫಾರಸು ಮಾಡಿದೆ’ ಎಂದರು.
ವೈ.ಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

‘ತಾಲ್ಲೂಕಿನಲ್ಲಿ 56.4 ಸೆಂ.ಮೀ ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈ ಬಾರಿ 46.2 ಸೆಂ.ಮೀ. ಮಳೆಯಾಗಿದೆ. ಬೆಟ್ಟದಪುರ ಮತ್ತು ರಾವಂದೂರು ಹೋಬಳಿಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ರಾವಂದೂರು ಹೋಬಳಿಯಲ್ಲಿ 52.4 ಸೆಂ.ಮೀ. ವಾಡಿಕೆ ಮಳೆ ಬದಲು, 30.2 ಸೆಂ.ಮೀ ಮಳೆಯಾಗಿದ್ದು, ಶೇ 42ರಷ್ಟು ಕೊರತೆಯಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸರ್ಕಾರ ಹೆಕ್ಟೇರ್‌ಗೆ ₹3500 ನೀಡುತ್ತಿರುವುದು ಸಾಲದು. ರಾಜ್ಯ ಸರ್ಕಾರ ಸಹ ಕನಿಷ್ಠ ₹5 ಸಾವಿರ ನೀಡಬೇಕು.
ದೇವರಾಜ್, ಪ್ರಗತಿಪರ ರೈತ, ಬೆಟ್ಟದಪುರ

ರಾವಂದೂರು ಹೋಬಳಿಯಲ್ಲಿ ದೊಡ್ಡ ಬೇಲಾಳು, ಕಿರನಲ್ಲಿ, ಮೆಲ್ಲಹಳ್ಳಿ, ಕಗ್ಗುಂಡಿ, ಬಸವಲಾಪುರ, ಜವನಿ ಕುಪ್ಪೆ ಮತ್ತಿತರ ಗ್ರಾಮಗಳಲ್ಲಿ ಮುಸುಕಿನಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಬೆಟ್ಟದಪುರ ಹೋಬಳಿಯಲ್ಲಿ ಈಚೂರು, ಕೂರಗಲ್ಲು, ಬೆಕ್ಕರೆ, ಭುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಮುಸುಕಿನ ಜೋಳ ಬೆಳೆ ಗಣನೀಯ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಕಸಬಾ ಹೋಬಳಿಯಲ್ಲಿ ನಾರಾಯಣಪುರ, ಮುತ್ತೂರು, ಬೆಳೆತೂರು, ಚಿಟ್ಟೆನಹಳ್ಳಿ, ಕಿರಂಗೂರು ಗ್ರಾಮಗಳು, ಹಾರನಹಳ್ಳಿ ಹೋಬಳಿಯ ಚಪ್ಪರದಹಳ್ಳಿ, ಅಂಬಲಾರೆ ಹಾರನಹಳ್ಳಿ, ಚನ್ನಕಲ್ಲು ಕಾವಲು, ಮುತ್ತಿನಮುಳಸೋಗೆ ಗ್ರಾಮಗಳಲ್ಲಿ ಮುಸುಕಿನ ಜೋಳದ ಬೆಳೆ ನಾಶವಾಗಿದೆ.

ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಗೋಶಾಲೆ ತೆರೆಯಬೇಕು. ನರೇಗಾ ಯೋಜನೆಯಡಿ ನೀಡುವ ಕೂಲಿ ದಿನಗಳನ್ನು ಹೆಚ್ಚಿಸಬೇಕು.
ಜಾನಕಮ್ಮ ಅಬ್ಬಳತಿ, ಗಿರಿಜನ ಹಾಡಿಯ ಮಹಿಳೆ

‘ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಅಂತರ್ಜಲದ ಮಟ್ಟ ಕಡಿಮೆಯಾಗಿದ್ದು, ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ರೈತರು ತಮ್ಮ ಭೂಮಿಗೆ ನೀರು ಹರಿಸಲು ಸಮಸ್ಯೆ ಉಂಟಾಗುತ್ತಿದೆ’ ಎಂದು ಪ್ರಗತಿಪರ ರೈತ ರಮೇಶ್ ಅಳಲು ತೋಡಿಕೊಂಡರು.

ಪಿರಿಯಾಪಟ್ಟಣ ತಾಲ್ಲೂಕಿನ ಕೂರಗಲ್ಲು ಗ್ರಾಮದಲ್ಲಿ ಮಳೆ ಕೊರತೆಯಿಂದಾಗಿ ಮುಸುಕಿನ ಜೋಳ ಸೊರಗಿದೆ
ಪಿರಿಯಾಪಟ್ಟಣ ತಾಲ್ಲೂಕಿನ ಕೂರಗಲ್ಲು ಗ್ರಾಮದಲ್ಲಿ ಮಳೆ ಕೊರತೆಯಿಂದಾಗಿ ಮುಸುಕಿನ ಜೋಳ ಸೊರಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT