ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗೂರು: ಅರೆ ಮಲೆನಾಡಿನಲ್ಲಿ ತಡವಾಗಿ ಮಳೆಯಾದರೂ ಉತ್ತಮ ಇಳುವರಿಯ ನಿರೀಕ್ಷೆ

Last Updated 21 ಆಗಸ್ಟ್ 2021, 2:19 IST
ಅಕ್ಷರ ಗಾತ್ರ

ಸರಗೂರು: ಮಳೆ ಕೊರತೆಯಿಂದ ಹತ್ತಿ ಬೇಸಾಯಕ್ಕೆ ತಡವಾದರೂ ಬಂಪರ್‌ ಇಳುವರಿಯ ನಿರೀಕ್ಷೆ ತಾಲ್ಲೂಕಿನ ರೈತರದ್ದಾಗಿದೆ.

ಪೂರ್ವ ಮುಂಗಾರು ಸಕಾಲಕ್ಕೆ ಸುರಿದಿದ್ದರಿಂದ ಬಿತ್ತನೆ ಪೂರ್ಣಗೊಂಡಿದೆ. ವಿವಿಧ ಬೆಳೆಗಳು ಸಮೃದ್ಧವಾಗಿದ್ದು, ರಾಗಿ, ಮುಸುಕಿನ ಜೋಳದ ಬೆಳೆಯೂ ಸೊಂಪಾಗಿದೆ.

2018, 2019ರಲ್ಲಿ ಅತಿವೃಷ್ಟಿಯಿಂದಾಗಿ ಸರಿಯಾದ ಬೆಳೆ ಬಂದಿರಲಿಲ್ಲ. ಹಿಂದಿನ ವರ್ಷ ಮಳೆ ಕೊರತೆ ಕಾಡಿತು. ಈ ವರ್ಷ ಹದ ಮಳೆಯಾಗಿದೆ.

ಭರಣಿ ಮಳೆ ಸುರಿಯದಿದ್ದರಿಂದ ಹತ್ತಿ ಬೆಳೆಯ ಬದಲಿಯಾಗಿ ಮುಸುಕಿನ ಜೋಳ ಬಿತ್ತಲಾಗಿದೆ. ಏಪ್ರಿಲ್‌ ಕೊನೆಯಲ್ಲಿ ಹದ ಮಳೆಯಾಗಿದ್ದರೆ, 12.5 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುತ್ತಿದ್ದರು. ಮಳೆ ಅಭಾವದಿಂದ 10 ಸಾವಿರ ಹೆಕ್ಟೇರ್‌ನಲ್ಲಷ್ಟೇ ಹತ್ತಿಯಿದೆ.

ಹತ್ತಿಯ ಬಿತ್ತನೆ ಕ್ಷೇತ್ರ ಕಡಿಮೆಯಾಗಿದ್ದರಿಂದ, 1300 ಹೆಕ್ಟೇರ್‌ ಮುಸುಕಿನ ಜೋಳದ ಬಿತ್ತನೆ ಗುರಿ ದ್ವಿಗುಣಗೊಂಡಿದೆ. 3,800 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ವಾಡಿಕೆಯಂತೆ ತಾಲ್ಲೂಕಿನಲ್ಲಿ ಈವರೆಗೆ 57.51 ಸೆಂ.ಮೀ. ಮಳೆ ಸುರಿಯಬೇಕಿತ್ತು. ಆದರೆ ಈ ವರ್ಷ 40.55 ಸೆಂ.ಮೀ. ಮಳೆ ಆಗಿದೆ. ಶೇ 29ರಷ್ಟು ಕೊರತೆಯಾಗಿದೆ.

2 ಸಾವಿರ ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಭತ್ತದ ನಾಟಿ ಚುರುಕುಗೊಂಡಿದೆ. ತಿಂಗಳ ಅಂತ್ಯಕ್ಕೆ ನಾಟಿ ಪೂರ್ಣಗೊಳ್ಳಲಿದೆ. 4015 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿಯಿದ್ದು, 1275 ಹೆಕ್ಟೇರ್‌ನಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ. ತಂಬಾಕು ಕೊಯ್ಲಿನ ನಂತರ ರಾಗಿ ಬಿತ್ತನೆ ಚುರುಕುಗೊಳ್ಳಲಿದೆ.

‘ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪಿಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ತಂಬಾಕು ಕೊಯ್ಲು, ಬ್ಯಾರನ್‌ನಲ್ಲಿ ಹದಗೊಳಿಸುವ ಪ್ರಕ್ರಿಯೆ ನಡೆದಿದ್ದು, ಸಕಾಲಕ್ಕೆ ಕಾರ್ಮಿಕರು ಸಿಗದಿರುವುದು ಸಮಸ್ಯೆಯಾಗಿ ಬಾಧಿಸುತ್ತಿದೆ’ ಎನ್ನುತ್ತಾರೆ ತಂಬಾಕು ಬೆಳೆಗಾರ ಡಿ.ಪಿ.ನಟರಾಜು.

‘ನಮ್ಮ ತಾಲ್ಲೂಕು ಬಹುತೇಕ ಕಾಡಂಚಿನ ಪ್ರದೇಶ. ರಾಗಿ, ಮುಸುಕಿನ ಜೋಳ, ಹತ್ತಿ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೇಳತೀರದು. ಫಸಲನ್ನು ಮನೆಗೆ ತರುವ ತನಕವೂ ಯಾವೊಂದು ನಿರೀಕ್ಷೆಯೇ ಇರಲ್ಲ’ ಎಂದು ಸಾಹಿತಿಯೂ ಆಗಿರುವ ರೈತ ಅಮ್ಮ ರಾಮಚಂದ್ರ ಅಳಲು ತೋಡಿಕೊಂಡರು.

‘ಅರೆ ಮಲೆನಾಡು ಎಂದೇ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ನೀರಾವರಿಗಿಂತ ಮಳೆಯಾಶ್ರಿತ ಕೃಷಿಯೇ ಹೆಚ್ಚು. ಕಬಿನಿ, ತಾರಕ, ನುಗು ಜಲಾಶಯಗಳು ಸಮೀಪದಲ್ಲೇ ಇದ್ದರೂ, ಸರಗೂರಿಗೆ ಅನುಕೂಲಕಾರಿಯಾಗಿಲ್ಲ. ನಂಜನಗೂಡು, ತಿ.ನರಸೀಪುರ, ಕೊಳ್ಳೇಗಾಲ ಸೇರಿದಂತೆ ನೆರೆಯ ತಮಿಳುನಾಡಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ’ ಎನ್ನುತ್ತಾರೆ ಬೀರಂಬಳ್ಳಿ ಪ್ರಭಾಕರ್‌.

‘ಐಆರ್ 64, ಜಯ, ಜ್ಯೋತಿ, ಆರ್‌ಎನ್ಆರ್, ತನು, ಎಂಟಿಯು-1001 ಸೇರಿದಂತೆ ಇತರೆ ತಳಿಯ ಭತ್ತದ ತಳಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, 1500 ಕ್ವಿಂಟಲ್‌ ಬಿತ್ತನೆ ಭತ್ತದಲ್ಲಿ 770 ಕ್ವಿಂಟಲ್‌ ವಿತರಣೆ ಆಗಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಕೆ.ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT