ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿ.ನರಸೀಪುರ: ಫೆ.6ರಂದು ಬೆಂಗಳೂರು ಚಲೋ

ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆ; ರೈತರ ಸಮಸ್ಯೆ ಪರಿಹಾರಕ್ಕೆ ಒತ್ತಾಯ
Published 2 ಫೆಬ್ರುವರಿ 2024, 15:34 IST
Last Updated 2 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಸಿಎಂ ಸಿದ್ದರಾಮಯ್ಯನವರು ಫೆ.16ರಂದು ಮಂಡಿಸುವ ಬಜೆಟ್‌ನಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಲು ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಫೆ.6ರಂದು ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್ ತಿಳಿಸಿದರು.

ಬೆಂಗಳೂರು ಚಲೋ ಸಂಬಂಧ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ‌‌ ಶುಕ್ರವಾರ ನಡೆದ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಪ್ರವಾಹ ಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ತೀರಿಸಲಾಗದೆ ಬಳಲುತ್ತಿದ್ದಾರೆ. ಇದರಿಂದ ಹೊರಬರಲು ಕೃಷಿ ಸಾಲ ಸಂಪೂರ್ಣ ಮನ್ನಾ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು’ ಎಂದರು.

‘ಕೈಗಾರಿಕೋದ್ಯಮಿಗಳಿಗೆ ಸಂಕಷ್ಟದಲ್ಲಿ ನೆರವು ನೀಡಿ ₹12 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವಂತೆ, ರೈತರ ಸಾಲ ಮನ್ನಾ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಬೆಂಬಲ ಬೆಲೆಯಲ್ಲಿ ಇತರೆ ರಾಜ್ಯಗಳಲ್ಲಿರುವಂತೆ ಮಿತಿ ಇಲ್ಲದೆ ಖರೀದಿ, ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು ಪ್ರದೇಶಗಳ ಜಲಾಶಯದ ನೀರನ್ನು ತಮಿಳುನಾಡಿಗೆ ಬಿಟ್ಟ ಕಾರಣ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವಂತೆ’ ಒತ್ತಾಯಿಸಿದರು.

‘ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ-ಸಕ್ರಮ ವಿದ್ಯುತ್ ಹೊಸ ಸಂಪರ್ಕಕ್ಕೆ ಸರ್ಕಾರವೇ ಖರ್ಚು ವೆಚ್ಚ ಭರಿಸಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು 10 ಗಂಟೆ ನಿರಂತರ ವಿದ್ಯುತ್ ನೀಡಬೇಕು. ಕಳೆದ ವರ್ಷದ ಕಬ್ಬಿನ ಬಾಕಿ ₹150 ರಾಜ್ಯ ಸರ್ಕಾರ ಕೂಡಲೇ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಬಾಕಿ ಕೊಡಿಸಬೇಕು. ಕಬಿನಿ ಬಲದಂಡೆ ನಾಲೆಯಿಂದ ಜನ ಜಾನುವಾರು, ಕೆರೆಕಟ್ಟೆ ತುಂಬಿಸಲು ಮತ್ತು ಅಂತರ್ಜಲ ಅಭಿವೃದ್ಧಿಗೆ ಕಾಲುವೆಗಳಲ್ಲಿ ನೀರು ಪೂರೈಕೆ, ಗ್ರೀನ್ ಬರ್ಡ್ಸ್ ಕಂಪನಿಯ ಮುಟ್ಟುಗೋಲು ಆಸ್ತಿಯನ್ನು ಮಾರುಕಟ್ಟೆ ಬೆಲೆಯಲ್ಲಿ ಹರಾಜು ಮಾಡಿ ಠೇವಣಿದಾರರಿಗೆ ನ್ಯಾಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕಿರುಗಸೂರ್ ಶಂಕರ್, ತಾಲ್ಲೂಕು ಉಪಾಧ್ಯಕ್ಷ ನಂಜುಂಡಸ್ವಾಮಿ, ರಂಗರಾಜ್ ಕಿರುಗಸೂರು ಪ್ರಸಾದ್ ನಾಯಕ್, ಕುರುಬೂರು ಪ್ರದೀಪ್, ಪರಶಿವಮೂರ್ತಿ, ತರಕಾರಿ ನಿಂಗರಾಜ್, ವಾಚ್ ಕುಮಾರ್, ಉಮೇಶ್, ಯೋಗೇಶ್, ಬನ್ನೂರು ಸೂರಿ, ಗ್ರೀನ್ ಬರ್ಡ್ಸ್ ರೂಪ, ಮಾದೇವಸ್ವಾಮಿ, ವಿಠಲ್ ರಾವ್, ಹೇಮಾವತಿ, ರಾಘವೇಂದ್ರ, ಕಿರಗಸೂರು ರವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT