ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ಅರಸು ಸಮಾಜದ ಕೊಡುಗೆ ಅಪಾರ: ಯತೀಂದ್ರ ಸಿದ್ದರಾಮಯ್ಯ

Published 3 ಡಿಸೆಂಬರ್ 2023, 8:19 IST
Last Updated 3 ಡಿಸೆಂಬರ್ 2023, 8:19 IST
ಅಕ್ಷರ ಗಾತ್ರ

ಮೈಸೂರು: ‘ನಾಡಿಗೆ ಅರಸು ಸಮಾಜ ನೀಡಿರುವ ಕೊಡುಗೆ ಅಪಾರವಾದುದು’ ಎಂದು ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಅರಸು ಮಂಡಳಿ ಸಂಘದಿಂದ ಖಿಲ್ಲೆ ಮೊಹಲ್ಲಾದ ಎಂ.ಜಿ. ರಸ್ತೆಯ ಸಮೀಪದಲ್ಲಿ ಭಾನುವಾರ ನಡೆದ ಶತಮಾನೋತ್ಸವ ಭವನದ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಮತ್ತು ಕರ್ನಾಟಕ ಅಭಿವೃದ್ಧಿ ಸಾಧಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿದ ಬುನಾದಿ ಕಾರಣ. ಆ ಕಾಲದಲ್ಲೇ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದವರು. ನಾವು ಈಗ ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತಾಡುತ್ತಿದ್ದೇವೆ. ಆದರೆ, ನಾಲ್ವಡಿಯವರು ಆಗಲೇ ಅದನ್ನು ಮಾಡಿದ್ದರು. ಅವರ ಕಾರ್ಯವನ್ನು ಎಂದಿಗೂ ಮರೆಯಲಾಗದು’ ಎಂದು ಸ್ಮರಿಸಿದರು.

‘ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಕೊಡುಗೆಯೂ ಅಪಾರವಾದುದು. ಆ ಕಾರಣದಿಂದಲೇ ದಲಿತರು ಹಾಗೂ ಹಿಂದುಳಿದ ವರ್ಗದವರು ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ಕಂಡುಕೊಳ್ಳುವುದು ಸಾಧ್ಯವಾಗಿದೆ’ ಎಂದು ನೆನೆದರು.

ಮೈಸೂರು ಮಹಾರಾಜರು ನಮ್ಮ ಹೆಮ್ಮೆ

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಆಡಳಿತ , ರಸ್ತೆ, ಉದ್ಯಾನ, ಒಳಚರಂಡಿ, ಅರಮನೆ, ಮೂಲಸೌಕರ್ಯ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು ನಮ್ಮ ಮೈಸೂರು ಮಹಾರಾಜರು. ಅದು ನಮ್ಮ ಹೆಮ್ಮೆ’ ಎಂದರು.

‘ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಒದಗಿಸಲಿದ್ದೇನೆ. ವೈಯಕ್ತಿಕವಾಗಿ ₹ 1 ಲಕ್ಷ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ‌ ಒಡೆಯರ್ ಮಾತನಾಡಿ, ‘ಜಾಗ ಕೊಟ್ಟಿದ್ದೇವೆ, ಸಂಘದವರು ಉಳಿಸಿ– ಬೆಳೆಸಿಕೊಂಡು ಹೋಗಬೇಕು ಎಂಬುದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಆಸೆಯಾಗಿತ್ತು.‌ ಅವರಿದ್ದಾಗಲೇ ಭವನದ ನಿರ್ಮಾಣ ಕಾರ್ಯ ನಡೆದಿದ್ದರೆ ಖುಷಿಪಡುತ್ತಿದ್ದರು. ಅವರ ಆಸೆ ಈಡೇರುವ ಲಕ್ಷಣ ಕಾಣುತ್ತಿದೆ. ಸಂಘಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಲು ಸಿದ್ಧವಿದ್ದೇನೆ. ಸಮಾಜದವರೂ ಕೈಲಾದಷ್ಟು ನೆರವಾಗಬೇಕು’ ಎಂದರು.

ಅರಸು ಮಂಡಳಿ ಸಂಘದ ಅಧ್ಯಕ್ಷ ಎಚ್‌.ಎಂ.ಟಿ. ಲಿಂಗರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಡಿ.ಜಯದೇವರಾಜೇ ಅರಸ್, ಎಂ.ಎ. ಶ್ರೀಕಾಂತರಾಜೇ ಅರಸ್, ಗೌರವ ಕಾರ್ಯದರ್ಶಿ ಕೆ.ಸುಮಾ ಅರಸ್, ಸಹ ಕಾರ್ಯದರ್ಶಿ ಎನ್‌.ಬಿ.ಶರತ್‌ ಅರಸ್, ಖಜಾಂಚಿ ಮಲ್ಲರಾಜೇ ಅರಸ್, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್‌, ಸಹಕಾರ ಸಂಘದ ಅಧ್ಯಕ್ಷ ಅಚ್ಯುತ, ಪುನೀತ್ ಅರಸ್, ಡಾ.ಎಂ.ಜಿ.ಆರ್. ಅರಸು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹಾಗೂ ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್‌ ಹಾಜರಿದ್ದರು.

‘ಪ್ರತಿಮೆ ಸ್ಥಾಪನೆಗೆ ಕ್ರಮ’

ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ‘ಎಲ್ಲ ಕ್ಷೇತ್ರದಲ್ಲೂ ಕೊಡುಗೆ ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಆ ಕಾಲದಲ್ಲೇ ಬಡವರು ಹಾಗೂ ಶೋಷಿತರಿಗೆ ನೆರವಾದವರು. ಸಂವಿಧಾನ ಬರುವುದಕ್ಕೂ ಮುಂಚಿನಿಂದಲೇ ಮೀಸಲಾತಿಯನ್ನು ನೀಡಿದ್ದರು. ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಅವರ ದೂರದೃಷ್ಟಿ ಸ್ಮರಣೀಯವಾದುದು’ ಎಂದು ಹೇಳಿದರು.

‘ದೇವರಾಜ ಅರಸು ರಸ್ತೆಯ ಕೊನೆಯಲ್ಲಿ ಮಹಾರಾಣಿ ಕಾಲೇಜಿನ‌ ಸಮೀಪದಲ್ಲಿ ಅರಸರ ಪ್ರತಿಮೆ ಸ್ಥಾಪಿಸಬೇಕು ಎಂದು ಸಮಾಜದವರು ಮುಖ್ಯಮಂತ್ರಿಯನ್ನು ಕೋರಿದ್ದಾರೆ. ಅವರು ಪಾಲಿಕೆಗೆ ಸೂಚನೆ ಕೊಡುವುದಾಗಿ ತಿಳಿಸಿದ್ದಾರೆ. ನನ್ನ ನಿಧಿಯಿಂದ ₹ 10 ಲಕ್ಷ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ನಾನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಋಣದಲ್ಲಿದ್ದೇನೆ. ಶಿಕ್ಷಣ ಹಾಗೂ ವೃತ್ತಿಯ ವಿಷಯದಲ್ಲಿ ದೊಡ್ಡ ಸಹಾಯವನ್ನು ಅವರು ಮಾಡಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಡಿಎಚ್ಒ ಎನಿಸಿಕೊಳ್ಳಲು ಅವರೇ ಕಾರಣ. ನಾನು ನಿವೃತ್ತನಾದ ಮೇಲೆ ರಾಜಕೀಯವಾಗಿ ಜೀವನ ನೀಡಿದವರು ಸಿದ್ದರಾಮಯ್ಯ’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT