ಮೈಸೂರು: ‘ಚಾಮುಂಡಿ ಬೆಟ್ಟವು ಕಂದಾಯ, ಅರಣ್ಯ, ಮುಜರಾಯಿ, ಪ್ರವಾಸೋದ್ಯಮ ಇಲಾಖೆಗಳಿಗೆ ಸೇರಿದ್ದು, ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರವೇ ಪ್ರಾಧಿಕಾರ ರಚಿಸಿದೆ. ಯಾವುದೇ ಕಾರಣಕ್ಕೂ ಪ್ರಾಧಿಕಾರ ರಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಚಾಮುಂಡಿ ಬೆಟ್ಟ, ದೇಗುಲ ನಮಗೆ ಸೇರಿದ್ದೆಂದು ಹೇಳಿದ್ದಾರೆ. ಕಳೆದ 75 ವರ್ಷಗಳಿಂದ ದೇಗುಲ ಹಾಗೂ ಬೆಟ್ಟ ಅಭಿವೃದ್ಧಿ, ನಿರ್ವಹಣೆಯನ್ನು ಜನರಿಂದ ಚುನಾಯಿತಗೊಂಡ ಸರ್ಕಾರಗಳೇ ಮಾಡಿವೆ. ಬೆಟ್ಟವು ಸರ್ಕಾರಕ್ಕೆ ಸೇರಿದ್ದು’ ಎಂದರು.
‘ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–2024’ ಅನ್ನು ಕಳೆದ ಜುಲೈ 1ರಿಂದ ಜಾರಿಗೆ ಬರುವಂತೆ ಗೆಜೆಟ್ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ಅದಕ್ಕೆ ರಾಜವಂಶಸ್ಥರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆಯಷ್ಟೇ’ ಎಂದು ಹೇಳಿದರು.
‘ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಧಾರ ರಹಿತ ಆರೋಪವನ್ನು ಸಿದ್ದರಾಮಯ್ಯ ವಿರುದ್ಧ ಮಾಡುತ್ತಿದ್ದಾರೆ. ಈ ಹಿಂದೆ ಜಿ.ಟಿ.ದೇವೇಗೌಡ ಹಾಗೂ ಪ್ರತಾಪಸಿಂಹ ಪ್ರಾಧಿಕಾರ ರಚನೆಯಾಗಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು’ ಎಂದರು.
‘ರಾಜ್ಯ ಸರ್ಕಾರಕ್ಕೆ ಬೆಟ್ಟವು ಸೇರಿದ್ದರಿಂದಲೇ ಕೇಂದ್ರ ಸರ್ಕಾರ ‘ಪ್ರಸಾದ್ ಯೋಜನೆ’ಯಡಿ ದೇಗುಲ ಅಭಿವೃದ್ಧಿಗೆ ₹45.7 ಕೋಟಿ ಬಿಡುಗಡೆ ಮಾಡಿದೆ. ಸ್ಥಳೀಯರು, ಪರಿಸರವಾದಿಗಳು, ರಾಜಕಾರಣಿಗಳ ಮನವಿ ಅನುಸಾರವೇ ಪ್ರಾಧಿಕಾರ ರಚಿಸಲಾಗಿದೆ’ ಎಂದು ವಿವರಿಸಿದರು.
‘ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇಗುಲ ನಿರ್ಮಾಣವಾಗಿದೆ. ಅಲ್ಲಿಂದಲೂ ವಿವಿಧ ರಾಜಮನೆತನಗಳೂ ಅಭಿವೃದ್ಧಿಪಡಿಸಿವೆ. ಹಾಗೆಂದು ಮಾಲೀಕತ್ವ ನಮ್ಮದೆಂದು ಪ್ರತಿಪಾದಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಭಾಸ್ಕರ್, ಮಹೇಶ್, ಬಿ.ಎಂ.ರಾಮು, ಹೇಮಂತ್ ಹಾಜರಿದ್ದರು.
‘ಟ್ರೋಲ್: ಸುಮ್ಮನೆ ಕೂರುವುದಿಲ್ಲ’
‘ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರವಿಂದ ಕೇಜ್ರಿವಾಲ್ ಅವರಂತೆಯೇ ಜೈಲಿನಿಂದ ಆಡಳಿತ ನಡೆಸಬೇಕಾಗುತ್ತದೆಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿಕೆ ನೀಡಿದ್ದು ತಾಕತ್ತಿದ್ದರೆ ಜೈಲಿಗೆ ಕಳುಹಿಸಲಿ’ ಎಂದು ಎಂ.ಲಕ್ಷ್ಮಣ ಹೇಳಿದರು. ‘ಜಮೀನಿಗೆ ಬದಲಿಯಾಗಿ ಮುಡಾ 14 ನಿವೇಶನಗಳನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನೀಡಿದೆ. ಹಗರಣ ನಡೆಸಿದ್ದರೆ ದಾಖಲೆ ಪ್ರದರ್ಶಿಸಲಿ. ಸುಳ್ಳುಗಳನ್ನು ಹೇಳಿ ಏಕವಚನದಲ್ಲಿ ಟೀಕಿಸುವುದನ್ನು ನೋಡುತ್ತ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ಟ್ರೋಲ್ ಮಾಡುವವರ ವಿರುದ್ಧ ಸದ್ಯದಲ್ಲೇ ಸೈಬರ್ ಠಾಣೆಗೆ ದೂರು ನೀಡಲಾಗುವುದು’ ಎಂದು ಎಚ್ಚರಿಸಿದರು.
‘ಒತ್ತುವರಿ ಬಗ್ಗೆಯೂ ಮಾತನಾಡಲಿ’
‘ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿರುವವರೂ ಬೆಟ್ಟ ಹಾಗೂ ಸುತ್ತಲಿನ ಪ್ರದೇಶ ಒತ್ತುವರಿ ಮಾಡಿರುವವರ ಬಗ್ಗೆಯೂ ಮಾತನಾಡಲಿ’ ಎಂದು ಎಂ.ಲಕ್ಷ್ಮಣ ಸವಾಲು ಹಾಕಿದರು. ‘ಎಲ್ಲ ವರ್ಗದ ಮಠಾಧೀಶರು ಸುತ್ತಲಿನ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ಪ್ರಾಧಿಕಾರ ರಚನೆಗೆ ವಿರೋಧಿಸುವವರು ಈ ಬೇಲಿಯನ್ನೂ ತೆರವುಗೊಳಿಸಲಿ’ ಎಂದು ಹೇಳಿದ ಅವರು ‘ನಿಮ್ಮದೇ ಸರ್ಕಾರ ಕ್ರಮವಹಿಸುವುದಿಲ್ಲವೇ’ ಎಂಬ ಪ್ರಶ್ನೆಗೆ ‘ಪ್ರಾಧಿಕಾರವೇ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.