ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಗತಿಸಿದರೂ ಬದಲಾಗದ ಬದುಕು

ದಯನೀಯ ಸ್ಥಿತಿಯಲ್ಲಿ ಆಟೊ ಚಾಲಕರು; ಕನಿಷ್ಠ ದುಡಿಮೆಗೂ ಕಂಟಕವಾದ ಕೊರೊನಾ
Last Updated 26 ಮೇ 2020, 1:38 IST
ಅಕ್ಷರ ಗಾತ್ರ

ಮೈಸೂರು: ಆಟೊ ಸಂಚಾರಕ್ಕೆ ಅನುಮತಿ ಸಿಕ್ಕಿ ವಾರ ಗತಿಸಿದೆ. ನಗರದ ಎಲ್ಲೆಡೆ ಆಟೊಗಳು ರಸ್ತೆಗಿಳಿದಿವೆ. ಆದರೆ, ಚಾಲಕರ ಬದುಕು ಮಾತ್ರ ಕಿಂಚಿತ್ ಸುಧಾರಿಸಿಲ್ಲ...

ಒಂದೆಡೆ ಕನಿಷ್ಠ ದುಡಿಮೆಯೂ ಸಿಗದ ಪರಿಸ್ಥಿತಿ. ಇನ್ನೊಂದೆಡೆ ರಾಜ್ಯ ಸರ್ಕಾರದ ಪರಿಹಾರ ಪ್ಯಾಕೇಜ್‌ ಇನ್ನೂ ಕೈಗೆಟುಕಿಲ್ಲ. ಮತ್ತೊಂದೆಡೆ ಸಹೃದಯಿಗಳ ನೆರವು ನಿಂತಿದೆ. ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ‘ಆಟೊ ರಾಜ’ರ ನೆರವಿಗೆ ಯಾರೊಬ್ಬರು ಬಾರದಾಗಿದ್ದಾರೆ.

‘21 ವರ್ಷದಿಂದ ಬಾಡಿಗೆ ಆಟೊ ಓಡಿಸುತ್ತಿರುವೆ. ಕೊರೊನಾಗೂ ಮುನ್ನ ನಿತ್ಯ ಕನಿಷ್ಠ ₹ 600 ದುಡಿಯುತ್ತಿದ್ದೆ. ₹ 200 ಗ್ಯಾಸ್‌ಗೆ ಖರ್ಚಾದರೆ, ₹ 100 ಊಟ–ತಿಂಡಿ, ಕಾಫಿ–ಟೀಗೆ ಖರ್ಚಾಗುತ್ತಿತ್ತು. ₹ 150ನ್ನು ದಿನದ ಬಾಡಿಗೆಯಾಗಿ ಆಟೊ ಮಾಲೀಕನಿಗೆ ಕೊಟ್ಟರೆ, ಉಳಿದ ₹ 150 ಮನೆ ಖರ್ಚಿಗೆ ಮೀಸಲಾಗಿರುತ್ತಿತ್ತು. ಭಾನುವಾರ ರಜೆ. ಸಿಕ್ಕಷ್ಟರಲ್ಲೇ ನೆಮ್ಮದಿಯ ಬದುಕು ನಡೆಸುತ್ತಿದ್ದೆ’ ಎಂದು ಯರಗನಹಳ್ಳಿಯ ಆಟೊ ಚಾಲಕ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೀಗ ಚಿತ್ರಣವೇ ಬದಲಾಗಿದೆ. ದಿನವಿಡಿ ಬಿಸಿಲಲ್ಲಿ ಕಾದರೂ ₹ 200 ದುಡಿಮೆಯಿಲ್ಲ. ಸೋಮವಾರ ವಾರದ ಆರಂಭದ ದಿನ. ಸೂರ್ಯ ನೆತ್ತಿ ಮೇಲೆ ಬಂದು ಕೆಂಡದಂಥ ಬಿಸಿಲು ಸೂಸುತ್ತಿದ್ದರೂ, ಒಂದು ಬಾಡಿಗೆ ಸಿಕ್ಕಿಲ್ಲ. ತಿಂಡಿಯನ್ನೇ ತಿಂದಿಲ್ಲ. ಇಂಥ ಸ್ಥಿತಿಯಲ್ಲಿ ಮಾಲೀಕನಿಗೆ ಹೆಂಗೆ ಬಾಡಿಗೆ ಕೊಡೋದು’ ಎಂದು ಆತಂಕಿತರಾದರು.

‘ನಮ್ ಮಾಲೀಕ ಒಳ್ಳೆಯವ. ನಿತ್ಯವೂ ಬಾಡಿಗೆಗೆ ಪೀಡಿಸಲ್ಲ. ನಾವೂ ತಿಳಿದುಕೊಂಡು ಕನಿಷ್ಠ ಅರ್ಧ ಬಾಡಿಗೆಯನ್ನಾದರೂ ಕೊಡದಿದ್ದರೆ ಹೆಂಗೆ. ಮೈಸೂರಿನಲ್ಲಿ 60 ಸಾವಿರಕ್ಕೂ ಹೆಚ್ಚು ಆಟೊಗಳಿವೆ. ಇವುಗಳಲ್ಲಿ 70 ಭಾಗ ಬಾಡಿಗೆಗೆ ಓಡುವವು. ಇವನ್ನೇ ನಂಬಿರುವ ಆಟೊ ಚಾಲಕರ ಬದುಕು ಲಾಕ್‌ಡೌನ್‌ ಸಡಿಲಿಕೆಯಾದರೂ, ಹಳಿಗೆ ಬಾರದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬೇಸಿಗೆಯ ಸೀಜನ್‌ನಲ್ಲೇ ವಹಿವಾಟಿಲ್ಲ:

‘ಬೇಸಿಗೆ, ಆಟೊ ಚಾಲಕರಿಗೂ ಸೀಜನ್. ಬಹುತೇಕರು ಬಿಸಿಲಿನ ಪ್ರಖರತೆಗೆ ಅಂಜಿ ಹೆಚ್ಚೆಚ್ಚು ಆಟೊದಲ್ಲೇ ಓಡಾಡುತ್ತಿದ್ದರು. ಕೊರೊನಾ ವೈರಸ್ ಹರಡುವಿಕೆಯ ಭೀತಿಯಿಂದ ಹೆಚ್ಚಿನ ಜನ ರಸ್ತೆಗಿಳಿಯುತ್ತಿಲ್ಲ. ಇಳಿದವರೂ ತಮ್ಮ ತಮ್ಮ ವಾಹನಗಳಲ್ಲೇ ಸಂಚರಿಸುತ್ತಿದ್ದಾರೆ’ ಎಂದು ಟೆರೇಷಿಯನ್ ಕಾಲೇಜಿನ ಮುಂಭಾಗ ಗ್ರಾಹಕರಿಗಾಗಿ ಕಾಯುತ್ತಿದ್ದ ಆಟೊ ಚಾಲಕ ರವಿ ತಿಳಿಸಿದರು.

‘ಮೈಸೂರು ತಂಪಿನ ವಾತಾವರಣ ಹೊಂದಿರುವ ಊರು. ಬೇಸಿಗೆಯಲ್ಲೂ ಇಲ್ಲಿಗೆ ಪ್ರವಾಸಿಗರು ಬರುತ್ತಿದ್ದರು. ನಮಗೆ ಬಾಡಿಗೆ ಹೆಚ್ಚಿಗೆ ಸಿಗುತ್ತಿತ್ತು. ಇದೀಗ ಯಾವೊಬ್ಬ ಪ್ರವಾಸಿ ಬರುತ್ತಿಲ್ಲ. ಇದು ನಮ್ಮ ಆದಾಯಕ್ಕೆ ಹೊಡೆತ ನೀಡಿದೆ. ಇನ್ನೂ ರಂಜಾನ್ ಮಾಸದಲ್ಲಿ ಮುಸ್ಲಿಮರು ದುಡಿಮೆಗೆ ಹೆಚ್ಚಾಗಿ ಬರಲ್ಲ. ಈ ಆಟೊಗಳ ಬಾಡಿಗೆಯೂ ನಮಗೆ ಸಿಗುತ್ತಿತ್ತು. ಆದರೆ, ಕೋವಿಡ್–19 ಇದಕ್ಕೂ ಮರ್ಮಾಘಾತದ ಪೆಟ್ಟು ನೀಡಿದೆ’ ಎಂದು ಹೇಳಿದರು.

‘ಆಟೊ’ ನಮ್ಮ ಬದುಕು...

‘ಆಟೊ ಬಿಟ್ಟರೇ ಬೇರೇನೂ ಗೊತ್ತಿಲ್ಲ ನಮಗೆ. ಮೂರ್ನಾಲ್ಕು ದಶಕದಿಂದಲೂ ರೈಲ್ವೆ ನಿಲ್ದಾಣವೇ ಆಸರೆ. ಕೊರೊನಾಗಿಂತಲೂ ಮುಂಚೆ ನಿತ್ಯ ₹ 700– ₹ 800 ದುಡಿಮೆಯಿತ್ತು. ಇದೀಗ ಒಪ್ಪೊತ್ತಿನ ಊಟಕ್ಕಾದರೂ ಸಾಕು ಎನ್ನುವಂತಹ ಸ್ಥಿತಿಯಿದೆ’ ಎನ್ನುತ್ತಾರೆ ಕೆ.ಜಿ.ಕೊಪ್ಪಲಿನ ಆಟೊ ಚಾಲಕ ಕೃಷ್ಣೇಗೌಡ.

‘90 ಭಾಗ ಜನರು ಆಟೊ ನಂಬಿ ಬದುಕು ನಡೆಸುತ್ತಿದ್ದಾರೆ. ನಿತ್ಯವೂ ದುಡಿಯಲೇಬೇಕು. ಈ ಹಿಂದೆ ನಾವೇ ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದೆವು. ಇದೀಗ ಬೇಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದೇವೆ’ ಎಂದು ಕಣ್ಣೀರಾದರು.

‘ಜನರ ಬಳಿಯೂ ಕಾಸಿಲ್ಲ. ಎಷ್ಟೇ ದೂರವಾದರೂ ನಡೆದೇ ಹೋಗುತ್ತೇವೆ ಎನ್ನುವವರೇ ಹೆಚ್ಚಾಗಿದ್ದಾರೆ. ನಗರವಿಡಿ ಸುತ್ತಿದರೂ ಗ್ಯಾಸ್ ಖಾಲಿಯಾಗುತ್ತೇ ವಿನಾಃ, ಒಂದು ಬಾಡಿಗೆ ಸಿಗಲ್ಲ. ರಸ್ತೆ ಬದಿ ನಡೆದು ಹೋಗುವವರನ್ನು ಕರೆದರೂ ಕಾಸಿಲ್ಲ. ಆಟೊ ಹತ್ತಲ್ಲ ಎನ್ನುತ್ತಾರೆ. ನಮಗೂ ಸಂಕಟ. ಏನೂ ತೋಚದಂತಹ ಸ್ಥಿತಿಗೆ ತಲುಪಿದ್ದೇವೆ. ಭವಿಷ್ಯವೇ ಮಸುಕಾಗಿದೆ’ ಎಂದು ವಿಜಯಕುಮಾರ್ ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT