ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಹಿಂದುಳಿದ ವರ್ಗಗಳ ಸಭೆ: ಸಿದ್ದರಾಮಯ್ಯರನ್ನು ಸಿಎಂ ಮಾಡಲು ಮನವಿ

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಹಕ್ಕೊತ್ತಾಯ
Last Updated 5 ಡಿಸೆಂಬರ್ 2022, 11:34 IST
ಅಕ್ಷರ ಗಾತ್ರ

ಮೈಸೂರು: ‘ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಬೇಕು’ ಎಂದು ರಾಜ್ಯ‌ ಹಿಂದುಳಿದ ಹಾಗೂ ಅತಿ‌ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳು ಆಗ್ರಹಿಸಿವೆ.

ಎರಡೂ ವೇದಿಕೆಗಳ ಸಹಯೋಗದಲ್ಲಿ ನಗರದ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಸೋಮವಾರ ನಡೆದ ದುಂಡು‌ ಮೇಜಿನ ಸಭೆಯಲ್ಲಿ 3 ‍ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ರದ್ದುಗೊಳಿಸಿರುವುದನ್ನು ವಿರೋಧಿಸಿ ಡಿ.9ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ವಿಶೇಷ ಅಧಿವೇಶನ

ಹಿಂದುಳಿದ ವರ್ಗಗಳ ಮೇಲಿನ ಸಾಮಾಜಿಕ ಮತ್ತು ರಾಜಕೀಯ ಶೋಷಣೆ ಖಂಡಿಸಿ, ಜಾಗೃತಿ ಮೂಡಿಸಲು ಮಾಸಾಂತ್ಯದಲ್ಲಿ ರಾಜ್ಯಮಟ್ಟದ ವಿಶೇಷ ಅಧಿವೇಶನ ನಡೆಸಲು ಮತ್ತು ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಶ್ರಮಿಸುತ್ತಿರುವ ರಾಜಕೀಯ ಶಕ್ತಿಗೆ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.

ರಾಜ್ಯ‌ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ಕೇಂದ್ರ ಸರ್ಕಾರದ ನಡೆಯಿಂದಾಗಿ ಮೀಸಲಾತಿ‌‌ ವಿಚಾರದಲ್ಲಿ ಬಹಳ ಗೊಂದಲ, ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಅಸಮಾನ ಹಂಚಿಕೆ ಮೂಲಕ ಸಂವಿಧಾನದ ಆಶಯ ಬುಡಮೇಲು ಮಾಡಲು ಹೊರಟಿರುವ ಆತಂಕ ನಮ್ಮನ್ನು ಕಾಡುತ್ತಿದೆ. ಅಸಮಾನತೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

ಖಳನಾಯಕನಾಗಿದ್ದಾರೆ

‘ಪ್ರಧಾನಿ ನರೇಂದ್ರ ಮೋದಿ, ಬ್ರಾಹ್ಮಣರಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ಮೀಸಲಾತಿ ನೀಡುವ ಮೂಲಕ ಹಿಂದುಳಿದ ವರ್ಗಗಳ ಖಳನಾಯಕನಾಗಿದ್ದಾರೆ. ಕೇವಲ ಶೇ 3ರಷ್ಟು ಜನಸಂಖ್ಯೆಗೆ ಶೇ 10ರಷ್ಟು ಮೀಸಲಾತಿ ಕೊಟ್ಟಿರುವುದು ಖಂಡನೀಯ. ಹಿಂದುಳಿದ ವರ್ಗದವರು ಶೇ 60ರಷ್ಟಿದ್ದೇವೆ. ಹಾಗಾದರೆ, ನಮಗೆಷ್ಟು ಕೊಡಬೇಕಾಗುತ್ತದೆ?’ ಎಂದು ಕೇಳಿದರು.

‘ಸಾಮಾನ್ಯ ವರ್ಗದ ಮೀಸಲಾತಿ (ಕೋಟಾ) ರದ್ದುಗೊಳಿಸಬೇಕು.ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ‌ನಿಗದಿಪಡಿಸಿದರೆ ಸಾಮಾಜಿಕ ನ್ಯಾಯ ಸಿಗುತ್ತದೆ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇವೆ. ನಮಗೂ ಶೇ 27ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ವಿರೋಧವಿದೆ. ಪ್ರಬಲ ಸಮುದಾಯಗಳು ಮೀಸಲಾತಿ ಕೇಳುವುದು ಸಾಮಾಜಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಸಿದ್ದರಾಮಯ್ಯ ಬಿಟ್ಟರೆ ಬೇರಾರು ಪ್ರಶ್ನಿಸುತ್ತಿಲ್ಲವೇಕೆ?’ ಎಂದು ಕೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ‘ಈಗಿನ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ‌ಸಿಗುವುದು ಕನಸು ಎಂಬ ವಾತಾವರಣ ನಿರ್ಮಾಣವಾಗಿದೆ. ಅಹಿಂದ ಪರವಾಗಿ ನಿಂತಿರುವ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತುವವರ‌ ವಿರುದ್ಧ ನಾವೆಲ್ಲರೂ ಒಗ್ಗೂಡಬೇಕು. ಪುರೋಹಿತಶಾಹಿ ಧೋರಣೆ ವಿರುದ್ಧ ಹೋರಾಡಬೇಕು’ ಎಂದು ತಿಳಿಸಿದರು.

ಮುಖಂಡ ಆರ್. ಅನಂತು ಮಾತನಾಡಿ, ‘ಹಿಂದುಳಿದವರಿಗೆ ಅನ್ಯಾಯ ಆಗುತ್ತಿದ್ದರೂ‌ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯದೇ ಇರುವುದು ಕಳವಳಕಾರಿಯಾಗಿದೆ. ಪರಿಶಿಷ್ಟ ‌ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದರೂ ದೊಡ್ಡ ಮಟ್ಟದಲ್ಲಿ ಎತ್ತದಿರುವುದು ಸರಿಯಲ್ಲ’ ಎಂದರು.

‘ದಲಿತರು, ಹಿಂದುಳಿದ ವರ್ಗಗಳ ಪರವಾಗಿರುವ ಸಿದ್ದರಾಮಯ್ಯ ಅವರನ್ನು ನಾವೆಲ್ಲರೂ ಬೆಂಬಲಿಸಬೇಕು. ಅವರು ಮುಖ್ಯಮಂತ್ರಿಯಾಗಲು ಬೆಂಬಲಿಸಬೇಕು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ತೀವ್ರ ತೊಂದರೆ ಆಗುತ್ತದೆ’ ಎಂದು ಹೇಳಿದರು.

ಎಸ್‌ಡಿಪಿಐ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟನಂಜಯ್ಯ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಮಾಜದ ಮುಖಂಡರಾದ ಆರ್.ಅನಂತು, ಹಿನಕಲ್ ಪ್ರಕಾಶ್, ಎನ್.ಆರ್.ನಾಗೇಶ್, ಶ್ರೀನಿವಾಸ್, ಎಚ್.ಎಸ್.ಪ್ರಕಾಶ್, ಯೋಗೇಶ್ ಉಪ್ಪಾರ್, ಹಿನಕಲ್ ಉದಯ್, ಛಾಯಾ, ರವಿನಂದನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT