ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಆನ್‌ಲೈನ್‌ ವಂಚಕರಿದ್ದಾರೆ ಎಚ್ಚರ!

ಮಾಹಿತಿ, ಜಾಗೃತಿ ಬಳಿಕವೂ ಮುಂದುವರೆದ ಪ್ರಕರಣಗಳು; ಕೋಟ್ಯಂತರ ರೂಪಾಯಿ ವಂಚನೆ
Published : 6 ಡಿಸೆಂಬರ್ 2023, 6:36 IST
Last Updated : 6 ಡಿಸೆಂಬರ್ 2023, 6:36 IST
ಫಾಲೋ ಮಾಡಿ
Comments

ಮೈಸೂರು: ನಗರದ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಇತರೆ ಪ್ರಕರಣಗಳಿಗಿಂತ, ಸೈಬರ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ವಿದ್ಯಾವಂತರೇ ಆನ್‌ಲೈನ್‌ ಮೋಸದ ಜಾಲಕ್ಕೆ ಸಿಲುಕುತ್ತಿದ್ದು, ತಂತ್ರಜ್ಞಾನದ ಬಳಕೆಯ ನಡುವೆ ವಂಚನೆ ಕುರಿತು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಸೈಬರ್‌ ಪ್ರಕರಣಗಳ ದಾಖಲಾತಿಯಲ್ಲಿ ರಾಜ್ಯದಲ್ಲಿ ಮೈಸೂರು ಜಿಲ್ಲೆಯು ಎರಡನೇ ಸ್ಥಾನದಲ್ಲಿದ್ದು, 2022ರಲ್ಲಿ ಇಲ್ಲಿನ ಜನ ₹14.07 ಕೋಟಿ ಕಳೆದುಕೊಂಡಿದ್ದಾರೆ. 2023ರಲ್ಲೂ ಈ ಸಂಖ್ಯೆ ಹೆಚ್ಚಾಗಿದ್ದು, ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಜನರಲ್ಲಿನ ನ್ಯೂನತೆಗಳನ್ನೇ ಅಸ್ತ್ರವಾಗಿಸಿ ವಂಚನೆ ನಡೆಯುತ್ತಿದೆ.

ನಿರುದ್ಯೋಗಿಗಳು ಟಾರ್ಗೆಟ್‌:

ಆನ್‌ಲೈನ್‌ ವಂಚಕರು ನಿರುದ್ಯೋಗಿಗಳನ್ನು ಗುರಿಯಾಗಿಸಿ ಉದ್ಯೋಗದ ಭರವಸೆ ನೀಡಿ ವಂಚಿಸಿದ ಹಲವು ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗ ಕುರಿತ ಜಾಹೀರಾತು ನೀಡಿ, ಬಳಿಕ ಅವರಿಗೆ ಉದ್ಯೋಗದ ಭರವಸೆ ನೀಡಲಾಗುತ್ತದೆ. ಆನ್‌ಲೈನ್‌ ಮೂಲಕ ಸೇವಾ ಶುಲ್ಕವೆಂದು ಹಣ ಪಡೆದು ಮೋಸ ಮಾಡುವ ಜಾಲಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಆನ್‌ಲೈನ್‌ ಸ್ನೇಹಿತೆಯರ ಸಂಚು:

ವಿವಿಧ ಕಡೆಗಳಲ್ಲಿರುವ ಹುಡುಗಿಯರ ಸ್ನೇಹ ಬೆಳೆಸುವುದಕ್ಕಾಗಿಯೇ ರೂಪುಗೊಂಡಿರುವ ಅನೇಕ ಮೊಬೈಲ್‌ ಆ್ಯಪ್‌ಗಳ ಮೂಲಕವೂ ದಂಧೆ ನಡೆಯುತ್ತಿದೆ. ಆ್ಯಪ್‌ ಮೂಲಕ ಪರಿಚಯವಾಗಿ ಸ್ನೇಹ ಬೆಳೆಸಿ ನಂತರ ವಿಡಿಯೊ ಕಾಲ್‌ ಮೂಲಕ ಹನಿಟ್ರ್ಯಾಪ್‌ ನಡೆಸಿ, ಬೆತ್ತಲೆ ವಿಡಿಯೊ ಚಿತ್ರಿಸಿ, ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಮರು ವಸೂಲಾತಿ ಕಡಿಮೆ:

ಕರ್ನಾಟಕದಲ್ಲಿ 2022ರಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ₹46.87 ಕೋಟಿ ಮಾತ್ರ ಮರುವಸೂಲಿಯಾಗಿದ್ದು, ಇದು ಒಟ್ಟಾರೆ ಮೊತ್ತದ ಶೇ 12ರಷ್ಟು ಮಾತ್ರ. ಹಿಂದಿನ ವರ್ಷಗಳ ಅಂಕಿ–ಅಂಶವೂ ಆಶಾದಾಯಕವಾಗಿಲ್ಲ. ಶೇ 80ಕ್ಕೂ ಹೆಚ್ಚು ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಹೀಗಾಗಿ ಕಳೆದುಕೊಂಡ ಹಣವು ಮರಳಿ ದೊರಕದೆ ಸಾಲ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ.

ಟೆಲಿಗ್ರಾಂ ಗುಂಪು ರಚನೆ:

ಹಲವು ಪ್ರಕರಣದಲ್ಲಿ ಟೆಲಿಗ್ರಾಂ ಬಳಸಿ ವಂಚನೆ ನಡೆಸುವುದು ಕಂಡುಬಂದಿದೆ. ಜನರನ್ನು ಸೆಳೆದು ಟೆಲಿಗ್ರಾಂನಲ್ಲಿ ಗುಂಪು ರಚಿಸಿ ಅವರಿಗೆ ಸ್ಕ್ರೀನ್‌ ಶಾಟ್‌ಗಳನ್ನು ಕಳುಹಿಸಿ ನಂಬಿಕೆ ಬರುವಂತೆ ನೋಡಿಕೊಳ್ಳುತ್ತಾರೆ. ಕ್ರಿಫ್ಟೋ ಕರೆನ್ಸಿ ಪ್ರಕರಣಗಳಲ್ಲಿ ಲಕ್ಷಾಂತರ ಹಣ ಗಳಿಸಿರುವ ವಿಚಾರಗಳನ್ನು ಹಂಚಿಕೊಂಡು, ವ್ಯಕ್ತಿಯು ಹೆಚ್ಚು ಹೂಡಿಕೆ ಮಾಡುವಂತೆ ನೋಡಿಕೊಳ್ಳುತ್ತಾರೆ.

ತಕ್ಷಣದ ಮಾಹಿತಿಯಿಂದ ತನಿಖೆ:

ವಂಚನೆಗೊಳಗಾದ ತಕ್ಷಣವೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವುದರಿಂದ ತನಿಖೆಗೆ ಸಹಕಾರಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಹಣ ವಸೂಲಾತಿಯ ಅವಕಾಶವೂ ಹೆಚ್ಚಿರುತ್ತದೆ. ಆದರೆ, ವಂಚನೆಗೊಳಗಾದವರು ದೂರು ನೀಡಲು ಹಿಂಜರಿದು, ಘಟನೆ ನಡೆದು ಕೆಲವು ದಿನಗಳು ಕಳೆದ ಬಳಿಕ ದೂರು ನೀಡುತ್ತಾರೆ. ಇದರಿಂದಾಗಿ ತನಿಖೆಯು ಕುಂಠಿತವಾಗುತ್ತದೆ. ಹಿಂದೆ ಸೆನ್‌ ಠಾಣೆಯಲ್ಲಿ ದೂರು ನೀಡಬೇಕಿತ್ತು. ಆದರೆ, ಈಗ ಸಾರ್ವಜನಿಕರ ಸಹಕಾರಕ್ಕಾಗಿ ಎಲ್ಲಾ ಠಾಣೆಯಲ್ಲೂ ಸೈಬರ್‌ ದೂರು ಸ್ವೀಕರಿಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ಎಲ್ಲೆಡೆ ಹಬ್ಬಿದ ಆನ್‌ಲೈನ್‌ ವಂಚನೆ ಜಾಲ ನಾನಾ ಸೋಗಿನಲ್ಲಿ ವಂಚನೆ ಸಾಮಾಜಿಕ ಜಾಲತಾಣದ ಬಳಕೆ

ವಿದ್ಯಾವಂತರೇ ಮೋಸ ಹೋಗುತ್ತಿರುವುದು ಆತಂಕಕಾರಿ. ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳ ಬಳಿಕವೂ ಜನ ವಂಚನೆಗೊಳಗಾಗುತ್ತಿದ್ದಾರೆ.

-ರಮೇಶ್‌ ಬಾನೋತ್‌ ನಗರ ಪೊಲೀಸ್‌ ಆಯುಕ್ತ

ಮೈಸೂರಿನಲ್ಲಿ ದಾಖಲಾದ ಆನ್‌ಲೈನ್‌ ವಂಚನೆ

ಪ್ರಕರಣಗಳ ವಿವರ ಉದ್ಯೋಗ ಭರವಸೆಯ ಮೂಲಕ ನಡೆದ ವಂಚನೆ ಪ್ರಕರಣಗಳು; ಶ್ರೀರಾಂಪುರ 2ನೇ ಹಂತದ ನಿವಾಸಿಗೆ ₹5.2 ಲಕ್ಷ ವಾಟ್ಸ್‌ಆ್ಯಪ್‌ ಮೂಲಕ ಕುವೆಂಪುನಗರದ ನಿವಾಸಿಗೆ ₹3.6 ಲಕ್ಷ ಹಿನಕಲ್‌ ಮಹಿಳೆಗೆ ₹5.24 ಲಕ್ಷ ಜಯನಗರ ನಿವಾಸಿಗೆ ₹9.73 ಲಕ್ಷ ವಿಜಯನಗರದ ನಿವಾಸಿಗೆ ₹4.96 ಲಕ್ಷ ರಾಜೀವ್‌ ನಗರ ನಿವಾಸಿಗೆ ₹81 ಸಾವಿರ ಬಂಕಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯದಲ್ಲಿ ಸೀಟ್‌ ನೀಡುವುದಾಗಿ ಡಾ.ಲೋಕೇಶ್‌ ಅವರಿಗೆ ₹18.8 ಲಕ್ಷ ಕಾಲ್‌ಗರ್ಲ್ ಸೇವೆ ನೆಪದಲ್ಲಿ ನಂಜನಗೂಡಿನ ಸ್ವಾಮಿಗೆ ₹14.5 ಲಕ್ಷ ವಿಶೇಷ ಪೂಜೆ ಮಾಡಿಸುತ್ತೇನೆಂದು ಸರಸ್ವತಿಪುರಂ ನಿವಾಸಿ ರೂಪಾ ಅವರಿಗೆ ₹6.24 ಲಕ್ಷ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಕೆ.ಬಿ.ಮಹೇಶ್‌ ಎಂಬಾತನಿಂದ 15 ಯುವತಿಯರಿಗೆ ಮೋಸ ಸಾಫ್ಟ್‌ವೇರ್‌ ಉದ್ಯಮಿಯೊಬ್ಬರಿಗೆ ಕ್ರಿಫ್ಟೋ ಕರೆನ್ಸಿ ಮೂಲಕ ₹16 ಲಕ್ಷ ವಂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT