ಮೈಸೂರು: ‘ಕಾವೇರಿ ನೀರು ತಮಿಳುನಾಡಿಗೆ ನಿರಂತರವಾಗಿ ಹರಿಯುತ್ತಿದ್ದು, ರಾಜ್ಯ ಸರ್ಕಾರವೇ ಮುಂದೆ ನಿಂತು ಇದನ್ನು ನಿರ್ವಹಿಸುತ್ತಿದೆ’ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಆರೋಪಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಕಾವೇರಿ ಕ್ರಿಯಾ ಸಮಿತಿ ಸಭೆ ನೇತೃತ್ವ ವಹಿಸಿ ಮಾತನಾಡಿ, ‘ಕನ್ನಡಪರ, ರೈತ ಸಂಘಟನೆಗಳ ನಿರಂತರ ಒತ್ತಾಯಕ್ಕೂ ಮಣಿಯದ ಸರ್ಕಾರ ನೀರು ಬಿಡುವಲ್ಲಿ ನಿರತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.
‘ಕಾವೇರಿ ನ್ಯಾಯಮಂಡಳಿ ತೀರ್ಪು ರಾಜ್ಯಕ್ಕೆ ಘೋರ ಅನ್ಯಾಯ ಮಾಡಿದ್ದು, 90ರ ದಶಕದಲ್ಲಿ ನಗರದಲ್ಲಿ ನಡೆದ ಐತಿಹಾಸಿಕ ಧರಣಿ, ಹೋರಾಟಗಳು ಮತ್ತೆ ಮರುಕಳಿಸಬೇಕಿದೆ. ಸರ್ವರೂ ಇದಕ್ಕೆ ಬೆಂಬಲ ಸೂಚಿಸಿ, ಸಹಕರಿಸಬೇಕು’ ಎಂದು ಸಭೆಯಲ್ಲಿ ಮನವಿ ಮಾಡಿದರು.
ಕ್ರಿಯಾ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಮಾತನಾಡಿ, ‘ಕಾವೇರಿ ಕ್ರಿಯಾ ಸಮಿತಿ ಮುಂಚಿನಂತೆಯೇ ಸರ್ವರನ್ನು ಒಳಗೊಳ್ಳುವ, ಸಮಗ್ರ ಭಾಗೀದಾರರನ್ನು ಎಚ್ಚರಿಸಿ ಒಕ್ಕೂಟದೊಂದಿಗೆ ಹೋರಾಟಕ್ಕೆ ಮುನ್ನುಗ್ಗಿಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.
‘ಹೋರಾಟಕ್ಕೆ ಉತ್ತಮ ಪ್ರಚಾರ ನೀಡಬೇಕು. ಪಕ್ಷಬೇಧವಿಲ್ಲದೇ, ರಾಜಕೀಯ ನುಸುಳಲು ಬಿಡದೇ, ಕಾವೇರಿ ನೀರನ್ನು ಕುಡಿಯುವ ಪ್ರತಿಯೊಬ್ಬರನ್ನು ತಲುಪುವಂತೆ ಮಾರ್ಗ ರೂಪಿಸಬೇಕು’ ಎಂದು ಪ್ರಮುಖರಾದ ಪಿ.ಸಿ.ನಾಗರಾಜ್ ಸಲಹೆ ನೀಡಿದರು.
‘ಸಂವಿಧಾನಕ್ಕೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆಯೂ ಹಳೇ ಕಾಲದ ಒಡಂಬಡಿಕೆಯಲ್ಲಿಯೇ ಮುಂದುವರಿಯುತ್ತಿರುವುದು ದೊಡ್ಡ ಅನ್ಯಾಯ. ಸಮಯಕ್ಕೆ ತಕ್ಕಂತೆ ಪರಿಷ್ಕರಣೆಯಾಗಬೇಕು. ರಾಜ್ಯಕ್ಕೆ ನ್ಯಾಯ ದೊರೆಯಬೇಕು’ ಎಂದು ಸಭಿಕರು ಒತ್ತಾಯಿಸಿದರು.
ಮತ್ತೊಂದು ಪೂರ್ವಭಾವಿ ಸಭೆಯನ್ನು ಸೆ.23ರಂದು ಸಂಜೆ 4ಕ್ಕೆ ಜಲದರ್ಶಿನಿಯಲ್ಲಿ ನಡೆಸಲಾಗುವುದು. ಅಂದು ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ ಎಂದು ಸಭೆ ತಿಳಿಸಿತು.
ಸಭೆಯಲ್ಲಿ ಎಸ್.ಡಿ ರಾಜೇಶ್, ಎಂ.ಮಂಜುನಾಥ್, ಬಿ.ಕೆ.ರಾಜೇಶ್, ಎಂ.ಜೆ.ಸುರೇಶ್ ಗೌಡ, ಎಸ್.ಬಸಪ್ಪ, ಎಂ.ಜಯಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.