ಮೈಸೂರು: ಹೈಕೋರ್ಟ್ ತಡೆಯಾಜ್ಞೆ ಕುರಿತ ಗೊಂದಲದ ನಡುವೆಯೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಚಾಮುಂಡಿ ಬೆಟ್ಟದ ದಾಸೋಹ ಭವನದ ಸಭಾಂಗಣದಲ್ಲಿ ನಡೆಯಿತು.
‘ಬೆಟ್ಟದ ಆಸ್ತಿ ವಿವಾದವು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ತಡೆಯಾಜ್ಞೆಯು ಸೆಪ್ಟೆಂಬರ್ 5ರವರೆಗೆ ಜಾರಿಯಲ್ಲಿದೆ. ಹೀಗಾಗಿ ಪ್ರಾಧಿಕಾರದ ಸಭೆ ನಡೆಸುವುದು ಕಾನೂನಿನ ಉಲ್ಲಂಘನೆಯಾಗಲಿದ್ದು, ಸಭೆಯನ್ನು ರದ್ದುಪಡಿಸಬೇಕು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮುಂಡೇಶ್ವರಿ ದೇಗುಲ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಗೆ ಸೋಮವಾರವೇ ಪತ್ರ ಬರೆದು ಆಕ್ಷೇಪಿಸಿದ್ದರು. ಆದರೂ ಸರ್ಕಾರ ಪೂರ್ವನಿಗದಿಯಂತೆ ಸಭೆ ನಡೆಸಿತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ತಡೆಯಾಜ್ಞೆಯು ಆಗಸ್ಟ್ 22 ರಂದು ತೆರವುಗೊಂಡಿದೆ. ಸದ್ಯ ಯಾವುದೇ ತಡೆಯಾಜ್ಞೆ ಇಲ್ಲ. ನ್ಯಾಯಾಲಯದ ತೀರ್ಮಾನದಂತೆಯೇ ಮೊದಲ ಸಭೆ ನಡೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
'ಬೆಟ್ಟದ ದೇಗುಲದ ನಿರ್ವಹಣೆಗೆ ಈ ಹಿಂದೆಯೂ ಸರ್ಕಾರದ ಅಧೀನದಲ್ಲಿ ಆಡಳಿತ ಮಂಡಳಿ ಇತ್ತು. ಸದಸ್ಯರನ್ನು, ಅಧ್ಯಕ್ಷರನ್ನು ಸರ್ಕಾರವೇ ನೇಮಿಸುತ್ತಿತ್ತು’ ಎಂದರು.
ಸಭೆಯಿಂದ ಸಂಸದ ಯದುವೀರ್ ದೂರ:
ರಾಜ ವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಚಾಮುಂಡಿ ಬೆಟ್ಟದ ಪ್ರಾಧಿಕಾರದ ಸಭೆಯೇ ಅಕ್ರಮ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಸೆ. 5 ವರೆಗೆ ತಡೆಯಾಜ್ಞೆ ಜಾರಿಯಲ್ಲಿದ್ದರೂ ಮುಖ್ಯಮಂತ್ರಿ ಯಾವ ಆಧಾರದಲ್ಲಿ ತೆರವಾಗಿದೆ ಎಂದು ಹೇಳಿದ್ದಾರೋ ಗೊತ್ತಿಲ್ಲ’ ಎಂದರು.
‘ನ್ಯಾಯಾಂಗ ನಿಂದನೆಗೊಳಪಡುವ ಸಭೆಗೆ ಹೋಗಲಾರೆ. ಹೀಗಾಗಿ ಪಾಲ್ಗೊಂಡಿಲ್ಲ. ಯಾವುದೇ ಕಾರಣಕ್ಕೂ ಪ್ರಾಧಿಕಾರ ರಚನೆಯಾಗಬಾರದು. ಅದರಿಂದ ನಮ್ಮ ನಂಬಿಕೆ, ಆಚರಣೆ, ಪರಂಪರೆಗೆ ಧಕ್ಕೆಯಾಗುತ್ತದೆ. ಯದುವಂಶದವರು ಚಾಮುಂಡಿ ಬೆಟ್ಟದ ಪೋಷಕರು. ಈ ಹಕ್ಕನ್ನು ನಾವು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಬೆಟ್ಟವನ್ನು ನಿಯಂತ್ರಣ ಮಾಡಲು ಸರ್ಕಾರ ಪ್ರಾಧಿಕಾರ ರಚನೆ ಮಾಡುತ್ತಿದೆ. ಅದು ಸರಿಯಲ್ಲ. ದೇವಸ್ಥಾನಗಳ ಹುಂಡಿ ಹಣ ಆಯಾ ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಬೇಕು’ ಎಂದು ಆಗ್ರಹಿಸಿದರು.
ನೀಲನಕ್ಷೆ ರಚನೆ; ಒತ್ತುವರಿ ತೆರವಿಗೆ ಕ್ರಮ
ಚಾಮುಂಡಿ ಬೆಟ್ಟದ ಮುಂದಿನ ಐದು ವರ್ಷಗಳ ಅಭಿವೃದ್ಧಿಯ ನೀಲನಕ್ಷೆ ರಚನೆ ಐದು ದೇವಾಲಯಗಳ ಜೀರ್ಣೋದ್ದಾರ ಅಪರಾಧ ನಿಯಂತ್ರಣಕ್ಕೆ ಟಾಸ್ಕ್‌ಪೋರ್ಸ್ ರಚನೆ ಸೇರಿದಂತೆ ಹಲವು ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯು ಕೈಗೊಂಡಿತು.
‘ದೇವಾಲಯದ ಖಾತೆಯಲ್ಲಿ ಸದ್ಯ ₹169 ಕೋಟಿಯಷ್ಟು ನಿಶ್ಚಿತ ಠೇವಣಿ ಇದ್ದು ವಾರ್ಷಿಕ ಸರಾಸರಿ ₹20–25 ಕೋಟಿಯಷ್ಟು ನಿವ್ವಳ ಆದಾಯ ಬರುತ್ತಿದೆ. ಹೀಗಾಗಿ ಪ್ರಾಧಿಕಾರಕ್ಕೆ ಹಣದ ಕೊರತೆ ಇಲ್ಲ. ಅದನ್ನು ಬಳಸಿಕೊಂಡು ಪ್ರಾಧಿಕಾರದ ವ್ಯಾಪ್ತಿಯ 24 ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇವಸ್ಥಾನಗಳಿಗೆ ಸೇರಿದ ಆಸ್ತಿಗಳ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುವುದು’ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
‘ದೇವಸ್ಥಾನಕ್ಕೆ ಬರುವವರಿಗೆ ಯಾವುದೇ ವಸ್ತ್ರನಿಯಮ ನಿಗದಿಪಡಿಸುವುದಿಲ್ಲ. ಜಾತಿ–ಧರ್ಮಗಳ ಬೇಧವಿಲ್ಲದೆ ಎಲ್ಲರೂ ಬರಬಹುದು’ ಎಂದರು. ಸಚಿವರಾದ ರಾಮಲಿಂಗಾರೆಡ್ಡಿ ಎಚ್.ಕೆ. ಪಾಟೀಲ ಎಚ್.ಸಿ. ಮಹದೇವಪ್ಪ ಕೆ. ವೆಂಕಟೇಶ್ ಸಭೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.