ಮಂಗಳವಾರ, ಮಾರ್ಚ್ 21, 2023
23 °C
ಜನತಾ ನಗರದಲ್ಲಿರುವ ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆ

ಮೈಸೂರು: ಮಕ್ಕಳಿಗೆ ಮಾತು ಬರಿಸುವ ಆಲಯ

ನವೀನ್‌ ಕುಮಾರ್ ಎನ್. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶ್ರವಣದೋಷವುಳ್ಳ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಿರುವ ವಿಶಿಷ್ಟ ಕೆಲಸದಲ್ಲಿ ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್‌ನ (ಪಿಎಡಿಸಿ) ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆ ತೊಡಗಿದೆ.

ಜನತಾ ನಗರದಲ್ಲಿರುವ ಇಲ್ಲಿ, ತಾಯಂದಿರೇ ಮಕ್ಕಳಿಗೆ ಮಾತು ಬರಿಸುವ ಪ್ರಕ್ರಿಯೆಯಲ್ಲಿ ತೊಡಗುವುದು ವಿಶೇಷ.

ಆರಂಭದಲ್ಲಿ ಶ್ರವಣದೋಷವುಳ್ಳ ಮಕ್ಕಳು ಹಾಗೂ ತಾಯಂದಿರಿಗೆ ತರಬೇತಿ ನೀಡಲಾಗುತ್ತದೆ. ಮಗು ನಿದ್ದೆಯಿಂದ ಎದ್ದು ರಾತ್ರಿ ಮಲಗುವವರೆಗೆ ಹೇಗೆ, ಯಾವಾಗ ಹೇಳಿಕೊಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಮಗುವಿಗೆ ವಸ್ತುಗಳನ್ನು ಗುರುತಿಸಲು, ಶಬ್ದಗಳ ಗ್ರಹಿಸಲು ವಿವಿಧ ಆಟಿಕೆ ವಸ್ತು, ಚಾರ್ಟ್‌ಗಳನ್ನು ಬಳಸಿ ಹೇಳಿಕೊಡಲಾಗುತ್ತಿದೆ. ಶಬ್ದಗಳನ್ನು ಕೇಳಿಸಿಕೊಳ್ಳಲು ಅನುವಾಗುವಂತೆ ಶಬ್ದ ನಿರೋಧಕ ಕೊಠಡಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯ, ಇಲ್ಲಿ 89 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

‘ಎರಡು ವರ್ಷದ ಮಗನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಈ ಶಾಲೆಗೆ ಬಂದು ಒಂದು ವಾರ ಆಗಿದೆ. ಯಾವುದೇ ವಸ್ತುವಿನ ಬಗ್ಗೆ ಮಗನಿಗೆ ಹೇಗೆ ಹೇಳಬೇಕು, ಗುರುತಿಸಬೇಕು ಎಂಬುದರ ಕುರಿತು ತರಬೇತಿ ನೀಡುತ್ತಿದ್ದಾರೆ. ಮಗನ ಪ್ರತಿ ಚಟುವಟಿಕೆ ಬಗ್ಗೆ ನಿಗಾ ವಹಿಸಿದ್ದೇನೆ’ ಎಂದು ಪೂಜಾ ತಿಳಿಸಿದರು.

‘ನನ್ನ ಮಗನಿಗೆ ಸ್ವಲ್ಪವೂ ಕಿವಿ ಕೇಳಿಸುತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಇಲ್ಲಿಗೆ ಬಂದೆವು. ಈಗ ಮಗ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದ್ದಾನೆ. ಪ್ರತಿ ವಿಚಾರ ಅಥವಾ ವಸ್ತುವಿನ ಬಗ್ಗೆ ಮಾತಿನ ಮೂಲಕ ಹೇಳಿ ರೂಢಿ ಮಾಡಿಸಬೇಕು. ಬರವಣಿಗೆ ಮೂಲಕವೂ ಹೇಳಿಕೊಡುತ್ತಿದ್ದೇನೆ’ ಎಂದು ಬಳ್ಳಾರಿಯ ಸುಷ್ಮಾ
ಹೇಳಿದರು.

‘ನನ್ನ ಹಿರಿಯ ಮಗನಿಗೆ 3 ವರ್ಷವಿದ್ದಾಗ ಶ್ರವಣದೋಷ ಸಮಸ್ಯೆ ಇರುವುದು ಗೊತ್ತಾಯಿತು. ಇದೇ ಶಾಲೆಯಲ್ಲಿ ತರಬೇತಿ ಪಡೆದಿದ್ದ ಮಹಿಳೆಯೊಬ್ಬರ ಸಲಹೆಯಂತೆ ಇಲ್ಲಿಗೆ 2010ರಲ್ಲಿ ಬಂದೆ. ಮೂರು ವರ್ಷ ತರಬೇತಿ ಪಡೆದ ಮಗ ಈಗ ಎಲ್ಲರಂತೆ ಸಾಮಾನ್ಯ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. 2ನೇ ಮಗನಿಗೂ ಕಿವಿ ಸಮಸ್ಯೆ ಇರುವುದು ಗೊತ್ತಾಯಿತು. ತಡ ಮಾಡದೆ ಇಲ್ಲಿಗೆ ಬಂದೆ. ಇನ್ನೂ ಒಂದು ವರ್ಷ ತರಬೇತಿ ಅಗತ್ಯವಿದ್ದು, ಮುಂದೆ ಅವನೂ ಎಲ್ಲ ಮಕ್ಕಳಂತೆ ಮುಖ್ಯವಾಹಿನಿಗೆ ಬರಲಿದ್ದಾನೆ’ ಎಂದು ಬೆಳಗಾವಿಯ ಅಶ್ವಿನಿ ವಿಶ್ವಾಸ ವ್ಯಕ್ತಪಡಿಸಿದರು.

ದಂಪತಿ ಆರಂಭಿಸಿದ ಸಂಸ್ಥೆ

‘ಈ ಸಂಸ್ಥೆಯನ್ನು ವಿಂಗ್‌ ಕಮಾಂಡರ್‌ ಕೆ.ಕೆ.ಶ್ರೀನಿವಾಸನ್‌–ರತ್ನಾ ದಂಪತಿ 1980ರಲ್ಲಿ ಆರಂಭಿಸಿದರು. ನಾಲ್ವರು ಮಕ್ಕಳಿಗೆ ತಮ್ಮ ಮನೆಯಲ್ಲೇ ತರಬೇತಿ ನೀಡುತ್ತಿದ್ದರು. 1993ರಲ್ಲಿ ಜನತಾ ನಗರಕ್ಕೆ ಸ್ಥಳಾಂತರಗೊಂಡಿತು. ತಾಯಂದಿರು ಉಳಿದುಕೊಳ್ಳಲು ಹಾಸ್ಟೆಲ್‌ ವ್ಯವಸ್ಥೆ ಇದೆ’ ಎಂದು ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್‌ ಆಡಳಿತ ಮಂಡಳಿ ಸದಸ್ಯೆ ರತ್ನಾ ಬಿ. ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರವಣದೋಷವುಳ್ಳ ಮಗುವಿಗೆ 3–4 ವರ್ಷಗಳ ತರಬೇತಿ ಇರುತ್ತದೆ. ಮಾತು ಬರಿಸುವುದರೊಂದಿಗೆ ಕೇಳಿಸಿಕೊಳ್ಳುವುದು ಮತ್ತು ಓದು‍– ಬರಹವನ್ನೂ ಕಲಿಸುತ್ತೇವೆ. ನಾಟಕ, ನೃತ್ಯ, ಏಕಪಾತ್ರಾಭಿನಯ, ಚಿತ್ರಕಲೆಯಂತಹ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸುತ್ತೇವೆ’ ಎಂದರು.

‘ಶುಲ್ಕ ಭರಿಸಲು ಕಷ್ಟವಾಗುವ ಪೋಷಕರಿಗೆ ದಾನಿಗಳ ಮೂಲಕ ಪಾವತಿಗೆ ಸಹಾಯ ಮಾಡುತ್ತೇವೆ. ಶ್ರವಣ ಉಪಕರಣ ಖರೀದಿಸಲು ಆರ್ಥಿಕ ಸಹಾಯ ಮಾಡುತ್ತೇವೆ. ಇಲ್ಲಿ ತರಬೇತಿ ಮುಗಿಸುವ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾದರೆ ಪ್ರತಿ ವರ್ಷ ₹5ಸಾವಿರ ವಿದ್ಯಾರ್ಥಿ ವೇತನ ನೀಡುತ್ತೇವೆ. ಈವರೆಗೆ 2ಸಾವಿರಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆದಿದ್ದಾರೆ’ ಎಂದು ವಿವರಿಸಿದರು.

 ಸಂಸ್ಥೆಯ ಸಂಪರ್ಕಕ್ಕೆ ದೂ.ಸಂ.0821– 2544392.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು