ಮೈಸೂರು: ‘ಅಧ್ಯಾಪಕರಲ್ಲಿ ಬೋಧನಾ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜು ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ನಡೆದ ಯುಜಿಸಿ ನೆಟ್ ಮತ್ತು ಕೆ–ಸೆಟ್ ಪರೀಕ್ಷೆಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಅಧ್ಯಾಪಕರು ಗುಣಮಟ್ಟ ಕಳೆದುಕೊಂಡರೆ ದೇಶದ ಯುವಕರ ಪರಿಸ್ಥಿತಿ ದುಸ್ತರವಾಗಲಿದೆ. ಕಷ್ಟದ ಪರಿಸ್ಥಿತಿಗೆ ಸಿಲುಕುವರು. ಇಂದಿನ ದಿನಮಾನದಲ್ಲಿ ಓದಿ ವಿದ್ಯಾವಂತರಾಗಿ ದೇಶ ಕಟ್ಟಲು ಮುಂದಾಗುವ ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಧ್ಯಾಪಕರು ಸಿಗುತ್ತಿಲ್ಲ. ಎಲ್ಲರೂ ಪದವಿ ಪಡೆದಿದ್ದಾರೆ. ಆದರೆ, ಅವರಿಗೆ ಕೆಲಸ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜ್ಞಾನದ ಅರಿವು ವಿಸ್ತಾರ ಮಾಡುವವನೇ ಗುರು. ಆ ಗುರುವಿನ ಸ್ಥಾನ ತುಂಬಲು ನಿಷ್ಠೆಯಿಂದ ಪ್ರಾಮಾಣಿಕವಾಗಿರಬೇಕು. ಪ್ರಾಧ್ಯಾಪಕರು ಅಧ್ಯಾಪನದಲ್ಲಿ ಕೌಶಲ, ಉದಾತ್ತ ಧ್ಯೇಯ, ನಿಷ್ಠೆ ಹೊಂದಿರಬೇಕು. ಸತ್ಯ ಶೋಧನೆ ಮಾಡಿ ಪ್ರಚಲಿತ ಘಟನೆ ತಿಳಿ ಹೇಳಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಗುರಿ ಮುಟ್ಟುವವರೆಗೆ ನಿಲ್ಲಬಾರದು. ಯಾವುದೇ ಅಡೆ ತಡೆ ಬಂದರೂ ಎದೆಗುಂದದೆ ಪ್ರಯತ್ನ ಮುಂದುವರಿಸಬೇಕು’ ಎಂದು ಕಿವಿಮಾತು ಹೇಳಿದರು.
‘ದೇಶ ಕಟ್ಟುವ ಯುವಕರ ಅಭಿರುಚಿಗೆ ಮನ್ನಣೆ ಇಲ್ಲವಾಗಿದೆ. ನೀವೆಲ್ಲರೂ ಮುಂದೆ ಅತ್ಯುನ್ನತ ಪ್ರಾಧ್ಯಾಪಕರಾಗಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಕೆಎಸ್‌ಒಯುನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರದ ವ್ಯವಸ್ಥೆಯು ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
‘ದೂರ ಶಿಕ್ಷಣದಲ್ಲಿ ಕೆಎಸ್‌ಒಯು ರಾಜ್ಯದ ಏಕೈಕ ವಿ.ವಿ.ಯಾಗಿದೆ. ಯುಜಿಸಿ ನೆಟ್, ಕೆ–ಸೆಟ್ ತರಬೇತಿಗೆ 230 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಇಲ್ಲಿನ ಕ್ಯಾಂಪಸ್ ಸೌಕರ್ಯ ಬಳಸಿಕೊಳ್ಳಬೇಕು. ನಿಮ್ಮ ವಿಷಯಗಳ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿನ ಅಧ್ಯಾಪಕರ ನೆರವು ಪಡೆದುಕೊಳ್ಳಬೇಕು’ ಎಂದು ಕೆಎಸ್‌ಒಯು ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಸಲಹೆ ನೀಡಿದರು.
ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಗೀಳು ರೂಢಿಸಿಕೊಳ್ಳಬೇಕು. ನೀವೆಲ್ಲ ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕರಾಗುವವರು. ನಿಷ್ಠೆಯಿಂದ ಓದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಜಿ.ಆರ್.ಅಂಗಡಿ ಅವರು, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಅಧ್ಯಯನ ಕೇಂದ್ರದ ಡೀನ್ ಪ್ರೊ.ರಮಾನಾಥಂ ನಾಯ್ಡು, ಕುಲಪತಿಗಳ ವಿಶೇಷಾಧಿಕಾರಿ ಮಹದೇವ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.