ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನಿಗಮ ಮಂಡಳಿ ಸ್ಥಾನಕ್ಕೆ ಮುಖಂಡರ ಲಾಬಿ, ಪೈಪೋಟಿ

Published 17 ಜುಲೈ 2023, 5:52 IST
Last Updated 17 ಜುಲೈ 2023, 5:52 IST
ಅಕ್ಷರ ಗಾತ್ರ

ಎಂ.ಮಹೇಶ

ಮೈಸೂರು: ನಿಗಮ–ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಹಾಗೂ ವಿವಿಧ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಮಾಡಿಸಿಕೊಳ್ಳಲು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಪೈಪೋಟಿ ಕಂಡುಬರುತ್ತಿದೆ.

ತಮ್ಮ ನಾಯಕರ ಮಟ್ಟದಲ್ಲಿ ಲಾಬಿ ನಡೆಸುತ್ತಿರುವ ಅವರು, ಕೆಪಿಸಿಸಿ ಸೂಚನೆಯಂತೆ ಅರ್ಜಿಗಳನ್ನೂ ಸಲ್ಲಿಸಿ ‘ಅಧಿಕಾರ’ ಅಥವಾ ‘ಸ್ಥಾನಮಾನ’ಕ್ಕಾಗಿ ಕಾಯುತ್ತಿದ್ದಾರೆ.

ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಾವು ಹಾಕಿರುವ ಶ್ರಮವೆಷ್ಟು ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ದಡ ಸೇರಿದೆ. ಹೋದ ಚುನಾವಣೆಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಪುಟಿದೆದ್ದಿದೆ. ಇದಕ್ಕೆಲ್ಲವೂ ಕೊಡುಗೆ ನೀಡಿರುವ ಪಕ್ಷದವರು ತಮಗೆ ಸರ್ಕಾರದ ಮಟ್ಟದಲ್ಲಿ ಅಧಿಕಾರ ಸಿಗಬೇಕು ಎಂದು ಬಯಸುತ್ತಿದ್ದಾರೆ.

ಪಕ್ಷದಲ್ಲಿ ದೀರ್ಘಾವಧಿಯಿಂದ ಕೆಲಸ ಮಾಡಿರುವ ಹಾಗೂ ಯಾವುದೇ ಹುದ್ದೆ ಅನುಭವಿಸದ ಜನಪ್ರತಿನಿಧಿ ಅಲ್ಲದವರಿಗೆ ಜಾತಿ ಅನುಪಾತದಲ್ಲಿ ಮೊದಲ ಆದ್ಯತೆಯಲ್ಲಿ ಅವಕಾಶದ ನಿರೀಕ್ಷೆ ಇದೆ.
ಡಾ.ಬಿ.ಜೆ.ವಿಜಯ್‌ಕುಮಾರ್, ಅಧ್ಯಕ್ಷ, ಗ್ರಾಮಾಂತರ ಜಿಲ್ಲಾ ಸಮಿತಿ ಕಾಂಗ್ರೆಸ್

ಬೆಂಬಲಿಗರು, ಅನುಯಾಯಿಗಳು: ಜಿಲ್ಲೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕೂಡ ಆಗಿರುವುದರಿಂದ ಅವರ ಬೆಂಬಲಿಗರು ಹಾಗೂ ಅನುಯಾಯಿಗಳು ಸ್ಥಾನಮಾನವನ್ನು ಬಯಸಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿ ಮನದಾಳವನ್ನೂ ವ್ಯಕ್ತಪಡಿಸಿದ್ದಾರೆ. ಯಾರ‍್ಯಾರಿಗೆ ಯಾವ್ಯಾವ ಸ್ಥಾನಮಾನ ದೊರೆಯಬಹುದು ಎನ್ನುವುದು ಕುತೂಹಲ ಮೂಡಿಸಿದೆ; ಪೈಪೋಟಿಯಲ್ಲಿ ಅಧಿಕಾರದ ಗದ್ದುಗೆ ಏರುವವರು ಯಾರು ಎನ್ನುವುದು ಕೂಡ ಚರ್ಚೆಯಾಗುತ್ತದೆ.

ಮೈಸೂರಿನಲ್ಲಿ ಮುಖ್ಯವಾಗಿ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ), ಕಾಡಾ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಲ್ಯಾಕ್‌, ಕೆಎಸ್‌ಐಸಿ ಮೊದಲಾದವುಗಳ ಅಧ್ಯಕ್ಷರಾಗಲು ಹಲವರ ನಡುವೆ ಪೈಪೋಟಿ ಕಂಡುಬಂದಿದೆ. ಆ ಸ್ಥಾನಗಳಿಗೇ ಬಹಳಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ರಂಗಾಯಣದ ನಿರ್ದೇಶಕರಾಗಲೂ ಹಲವರು ಕಣ್ಣಿಟ್ಟಿದ್ದಾರೆ. ಈ ಬಜೆಟ್‌ನಲ್ಲಿ ಹೊಸದಾಗಿ ಘೋಷಿಸಲಾಗಿರುವ ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ ರಚನೆಯಾದಲ್ಲಿ ಅದಕ್ಕೆ ಅಧ್ಯಕ್ಷರಾಗುವುದಕ್ಕೂ ಪೈಪೋಟಿ ಇದೆ ಎನ್ನುತ್ತವೆ ಪಕ್ಷದ ಮೂಲಗಳು.

ಸ್ಕ್ರೀನಿಂಗ್ ಕಮಿಟಿ

ಆಯಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಒಳಗೊಂಡ ಸ್ಕ್ರೀನಿಂಗ್ ಸಮಿತಿಯು ಕೆಪಿಸಿಸಿಗೆ ಶಿಫಾರಸು ಮಾಡಿದೆ. ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ನಗರದಿಂದಲೂ 300ಕ್ಕೂ ಮಂದಿ ಅರ್ಜಿ ಸಲ್ಲಿಸಿದ್ದಾರೆ. ‘ಮುಡಾ’ ಅಧ್ಯಕ್ಷ ಸ್ಥಾನಕ್ಕೆ ಹಲವರು ಬೇಡಿಕೆ ಇಟ್ಟಿದ್ದಾರೆ. ಕೆಪಿಸಿಸಿ ಹಾಗೂ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ನೋಡಬೇಕು.
ಆರ್.ಮೂರ್ತಿ, ಅಧ್ಯಕ್ಷ, ನಗರ ಜಿಲ್ಲಾ ಸಮಿತಿ ಕಾಂಗ್ರೆಸ್

‘ಪಕ್ಷದ ಸೂಚನೆಯಂತೆ ಅರ್ಜಿ ಆಹ್ವಾನಿಸಲಾಗಿತ್ತು. ಆಕಾಂಕ್ಷಿಗಳು ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಕೆ.ಆರ್. ನಗರ ಕ್ಷೇತ್ರದಿಂದ 227, ಎಚ್‌.ಡಿ.ಕೋಟೆಯಿಂದ 223, ವರುಣದಿಂದ 100, ಚಾಮುಂಡೇಶ್ವರಿಯಿಂದ 200, ‌ಪಿರಿಯಾಪಟ್ಟಣದಿಂದ 110, ಹುಣಸೂರಿನಿಂದ 285, ತಿ.ನರಸೀಪುರದಿಂದ 200, ನಂಜನಗೂಡಿನಿಂದ 275 ಹಾಗೂ ನೇರವಾಗಿ ಗ್ರಾಮಾಂತರ ಜಿಲ್ಲಾ ಸಮಿತಿಗೆ 150 ಸೇರಿ ಒಟ್ಟು 1,770 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ’ ಎಂದು ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇನ್ನೂ ಸಲ್ಲಿಸಬಹುದು

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜುಲೈ 18ರಂದು ಪ್ರತ್ಯೇಕವಾಗಿ ಎರಡು ಪಟ್ಟಿಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗೆ ತಲುಪಿಸಲಾಗುವುದು. ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷರ ಕಚೇರಿಗೆ ರಿಜಿಸ್ಟರ್ ಪೋಸ್ಟ್ ಮಾಡಬಹುದು’ ಎನ್ನುತ್ತಾರೆ ಅವರು.

‘ಕಾಂಗ್ರೆಸ್ ಇತಿಹಾಸದಲ್ಲೇ ಇದೇ ಮೊದಲಿಗೆ ನಿಗಮ– ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘಟನೆ ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು ಎಂಬ ಕಾರಣದಿಂದ ಮುಕ್ತವಾಗಿ ಅರ್ಜಿ ಆಹ್ವಾನಿಸಿ ಆಯ್ಕೆ ಪ್ರಕ್ರಿಯೆಗೆ ಕೆಪಿಸಿಸಿ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT