ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಸಲ್ಲಿಸಲು ಗುರುವಾರ ಇಲ್ಲಿನ ಲೋಕಾಯುಕ್ತ ಕಚೇರಿಗೆ ಬಂದಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅಧಿಕಾರಿಗಳಿಗೆ ಕಾದು ಸುಸ್ತಾದರು.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಎಫ್‌ಐಆರ್ ದಾಖಲಿಸುವಂತೆ ಲೋಕಾಯುಕ್ತದ ಮೈಸೂರು ಎಸ್ಪಿಗೆ ಆದೇಶಿಸಿತ್ತು. ಆದೇಶದ ಆನ್‌ಲೈನ್ ಪ್ರತಿಯೊಂದಿಗೆ ಮಧ್ಯಾಹ್ನ 12.30ರ ಸುಮಾರಿಗೆ ಬಂದ ಅವರಿಗೆ ಮಧ್ಯಾಹ್ನ 3 ಗಂಟೆಯಾದರೂ ಎಸ್ಪಿ ಟಿ.ಜಿ. ಉದೇಶ್ ಭೇಟಿ ಸಾಧ್ಯವಾಗಲಿಲ್ಲ. ಅಧಿಕಾರಿಯು ಕಚೇರಿಯಲ್ಲಿ ಲಭ್ಯರಿರಲಿಲ್ಲ.
ದೂರು:
ಅಧಿಕಾರಿ ಭೇಟಿಗೆ ಸಿಗದ ಕಾರಣಕ್ಕೆ ಬೇಸರಗೊಂಡ ಅವರು, ‘ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಕಾಣೆಯಾಗಿದ್ದು, ಅವರನ್ನು ಅಪಹರಿಸಿರುವ ಶಂಕೆ ಇದೆ' ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂಜೆ ದೂರು ನೀಡಿದರು.
‘ಅಧಿಕಾರಿಗಳನ್ನು ಕೇಳಿದರೆ ಸೂಕ್ತ ಮಾಹಿತಿ ಕೊಡುತ್ತಿಲ್ಲ. ಎಸ್ಪಿಯವರು ಮೊಬೈಲ್ ಕರೆ, ಎಸ್‌ಎಂಎಸ್‌ಗಳಿಗೂ ಪ್ರತಿಕ್ರಿಯಿಸುತ್ತಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯವು ನೀಡಿರುವ ಆದೇಶಕ್ಕೆ ತಡೆಯಾಜ್ಞೆ ತರಲು ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಗಲೆಂಬ ಕಾರಣಕ್ಕೆ ಎಸ್ಪಿ ಕಚೇರಿಗೆ ಬಂದಿಲ್ಲ. ಸಿದ್ದರಾಮಯ್ಯ ಅವರ ಕಡೆಯವರೇ ಅಧಿಕಾರಿಯನ್ನು ಅಪಹರಿಸಿರುವ ಶಂಕೆಯೂ ಇದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಅವರ ದೂರನ್ನು ದೇವರಾಜ ಠಾಣೆ ಪೊಲೀಸರು ಸ್ವೀಕರಿಸದ ಕಾರಣಕ್ಕೆ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದರು.
ಕಾಂಗ್ರೆಸ್ ಒತ್ತಾಯ; ‘ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಧಮ್ಕಿ ಹಾಕಿರುವ ಜೆಡಿಎಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಮುಖಂಡ ಮಹೇಶ್ ಅವರನ್ನು ಒಳಗೊಂಡ ತಂಡವು ಇಲ್ಲಿನ ಲೋಕಾಯುಕ್ತ ಕಚೇರಿಗೆ ಗುರುವಾರ ಬಂದಿತ್ತು. ಆದರೆ ಅಧಿಕಾರಿಯು ಸಿಗಲಿಲ್ಲ.
ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
‘ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಧಮ್ಕಿ ಹಾಕಿರುವ ಜೆಡಿಎಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಮುಖಂಡ ಮಹೇಶ್ ಅವರನ್ನು ಒಳಗೊಂಡ ತಂಡವು ಇಲ್ಲಿನ ಲೋಕಾಯುಕ್ತ ಕಚೇರಿಗೆ ಗುರುವಾರ ಭೇಟಿ ನೀಡಿತು. ಆದರೆ ಎಸ್.ಪಿ. ಉದೇಶ್ ಲಭ್ಯರಿಲ್ಲದೆ ದೂರು ನೀಡಲಿಲ್ಲ. ‘ಸ್ನೇಹಮಯಿ ಕೃಷ್ಣ ದೂರು ಆಧರಿಸಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಸರ್ಕಾರದ ಆದೇಶ ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಬುಧವಾರ ಜೆಡಿಎಸ್ ಮುಖಂಡ ಪ್ರದೀಪ್‌ಕುಮಾರ್ ಎಂಬುವರು ತಮ್ಮ ಬೆಂಬಲಿಗರೊಂದಿಗೆ ಲೋಕಾಯುಕ್ತ ಕಚೇರಿಯಲ್ಲಿ ಗಲಾಟೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಲಕ್ಷ್ಮಣ ಒತ್ತಾಯಿಸಿದರು.
ಮುಂದಿನ ಕ್ರಮ: ‘ಲೋಕಾ’ ಪೊಲೀಸ್ ಚರ್ಚೆ
ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಆದೇಶದ ಸಂಬಂಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಲೋಕಾಯುಕ್ತ ಪೊಲೀಸ್ ವಿಭಾಗದ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಭಾಗಿಯಾಗಿದ್ದರು. ‘ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿ ಆದೇಶದ ಪ್ರತಿ ಪಡೆದುಕೊಂಡಿದ್ದೇನೆ’ ಎಂದು ಉದೇಶ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.