ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯುನಲ್ಲಿ ಹಣ ದುರ್ಬಳಕೆ: ದಾಖಲೆ ಒದಗಿಸಲು ಕೋರಿ ಪತ್ರ

Published 25 ಅಕ್ಟೋಬರ್ 2023, 19:57 IST
Last Updated 25 ಅಕ್ಟೋಬರ್ 2023, 19:57 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2021–22ರಲ್ಲಿ ಹಣ ದುರುಪಯೋಗ ಆರೋಪ ಕೇಳಿಬಂದಿದ್ದು, ಇದರ ಪರಿಶೀಲನೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.

ಕೆಎಸ್‌ಒಯುನಲ್ಲಿ ಹಣದ ದುರುಪಯೋಗ ಕುರಿತು ಇಲ್ಲಿನ ಹೂಟಗಳ್ಳಿ ನಿವಾಸಿ ಎಂ.ಎಲ್. ಪರಶುರಾಮ ಎಂಬುವರು ಲೆಕ್ಕಪರಿಶೋಧನಾ ಇಲಾಖೆಗೆ ದೂರು ನೀಡಿದ್ದರು.

‘ವಿಶ್ವವಿದ್ಯಾಲಯವು ಮೈಸೂರಿನ ಕುವೆಂಪುನಗರದ ಆಕ್ಸಿಸ್ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿದ್ದು, ಇದನ್ನು ಸಹಾಯಕ ಪ್ರಾಧ್ಯಾಪಕಿ ಆರ್. ಸುಮತಿ ಗೌಡ ಎಂಬುವರು ನಿರ್ವಹಿಸುತ್ತಿದ್ದಾರೆ. ಈ ಖಾತೆಯಲ್ಲಿ 2021ರ ಸೆ.28ರಿಂದ 2022ರ ಮೇ 7ರವರೆಗೆ ಒಟ್ಟು ₹94.38 ಲಕ್ಷ ಕ್ರೆಡಿಟ್‌ ಆಗಿದ್ದು, ₹85.86 ಲಕ್ಷ ಡೆಬಿಟ್‌ ಆಗಿದೆ. ಇದರಲ್ಲಿ ₹21 ಲಕ್ಷವನ್ನು ಖಾತೆದಾರರು ₹1 ಲಕ್ಷದಿಂದ ₹5 ಲಕ್ಷದವರೆಗಿನ ಸ್ವಯಂ ಚೆಕ್‌ ಮೂಲಕ ಡ್ರಾ ಮಾಡಿಕೊಂಡಿದ್ದಾರೆ. ಅಲ್ಲದೇ, ಕೆಎಸ್‌ಒಯುನ ಕೆಲವು ಖಾತೆಗಳಿಗೆ, ಕೆಲವು ನಿರ್ದಿಷ್ಟ ವ್ಯಕ್ತಿಗಳ ಹೆಸರಿಗೆ ಹಣ ನೀಡಲಾಗಿದೆ. ಇದೆಲ್ಲವನ್ನೂ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು’ ಎಂದು ದೂರುದಾರರು ಕೋರಿದ್ದರು.

ವಿಶ್ವವಿದ್ಯಾಲಯದ 2021–22ನೇ ಆಡಿಟ್‌ನಲ್ಲಿ ಈ ಖಾತೆಯ ವಿವರಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಿಲ್ಲ. ಬ್ಯಾಂಕ್‌ ಖಾತೆಯ ವಿವರಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಿಲ್ಲ. ಮುಕ್ತ ವಿ.ವಿ. ಕ್ಯಾಂಪಸ್‌ನ ಎಸ್‌ಬಿಐ ಶಾಖೆಯಲ್ಲಿ ಇರುವ ಖಾತೆಯ ವಿವರಗಳನ್ನು ಲೆಕ್ಕಪರಿಶೋಧನೆಗೆ ನೀಡಿಲ್ಲ. ಈ ಬಗ್ಗೆ ಕುಲಸಚಿವರ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ. ಈ ಬಗ್ಗೆ ಪರಿಶೀಲಿಸಲು ವಿಶ್ವವಿದ್ ಅಗತ್ಯ ದಾಖಲೆಗಳನ್ನು ಇಲಾಖೆಗೆ ನೀಡಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.

ಬ್ಯಾಂಕ್‌ ಖಾತೆಯ ವಿವರಗಳನ್ನು ಕೋರಿ ಸಂಬಂಧಿಸಿದ ಬ್ಯಾಂಕ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಅವರು ಮಾಹಿತಿ ನೀಡಿಲ್ಲ. ಇದರಿಂದಾಗಿ ಬ್ಯಾಂಕ್‌ನವರೂ ವಿಶ್ವವಿದ್ಯಾಲಯದ ಅಧಿಕಾರಿಗಳ ಜೊತೆ ಶಾಮೀಲಾಗಿ ಅಕ್ರಮ ಪಾವತಿಗೆ ನೆರವಾಗಿರುವ ಶಂಕೆ ವ್ಯಕ್ತವಾಗಿದೆ. ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಲು ವಿ.ವಿ. ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ದೀಪಕ್ ದೊರೆಯವರ್ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಕುಲಪತಿ ಪ್ರೊ.ಶರಣಪ್ಪ ಹಲಸೆ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT