ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ವಿಜ್ಞಾನ ಕಲಿಕೆಗೆ ಆದ್ಯತೆ ನೀಡಿ

ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಪ್ರೊ.ಟಿ.ಕೆ.ಉಮೇಶ್
Last Updated 23 ಜೂನ್ 2018, 11:27 IST
ಅಕ್ಷರ ಗಾತ್ರ

ಮೈಸೂರು: ಪಿಯು ಕಲಿಕೆಯ ನಂತರ ವಿದ್ಯಾರ್ಥಿಗಳು ಮೂಲ ವಿಜ್ಞಾನ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಮೈಸೂರು ವಿ.ವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಕಿವಿಮಾತು ಹೇಳಿದರು.

ಮೈಸೂರು ಜಿಲ್ಲಾ ಪದವಿ ಪೂರ್ವ ಭೌತ ವಿಜ್ಞಾನ ಉಪನ್ಯಾಸಕರ ವೇದಿಕೆಯು ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭೌತವಿಜ್ಞಾನದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲ ವಿಜ್ಞಾನಕ್ಕೆ ಈಗಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ವಿಶ್ವದ ಬಹುತೇಕ ಎಲ್ಲ ವೈಜ್ಞಾನಿಕ ಸಂಸ್ಥೆಗಳಲ್ಲಿ ಸಂಶೋಧನೆಗಳು ಉತ್ತಮ ಗತಿಯಲ್ಲಿ ಸಾಗುತ್ತಿವೆ. ಇದಕ್ಕಾಗಿ ಅನೇಕ ವಿಜ್ಞಾನಿಗಳು ಪೂರ್ಣಾವಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮನುಕುಲಕ್ಕೆ ಒಳಿತಾಗುವ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ತರುವ ಶೋಧಗಳು ನಡೆಯುತ್ತಿವೆ. ಇಂತಹ ಶೋಧಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಮೇಲೆಯೇ ಹೆಚ್ಚಿನ ಒಲವು ತೋರುತ್ತಿರುವಂತಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ, ಮೂಲ ವಿಜ್ಞಾನವು ವೃತ್ತಿಪರ ಕೋರ್ಸ್‌ಗಳಿಗೆ ತಾಯಿ ಬೇರಿದ್ದಂತೆ. ಮೂಲ ವಿಜ್ಞಾನವಿಲ್ಲದೇ ಇದ್ದಲ್ಲಿ ಬೇರೆಲ್ಲ ವಿಜ್ಞಾನಗಳೂ ಅಸ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ ಎಂದರು.

ಅಂಕ ಗಳಿಕೆ ವಿದ್ಯಾರ್ಥಿ ಜೀವನಕ್ಕೆ ಅತ್ಯಗತ್ಯ. ಆದರೆ, ಅದೇ ಮೂಲ ಉದ್ದೇಶವಾಗಬಾರದು. ಅಂಕ ಗಳಿಕೆ ಜತೆಗೆ ಉತ್ತಮ ವ್ಯಕ್ತಿತ್ವ ಸುಧಾರಣೆಗೂ ಗಮನ ಹರಿಸಬೇಕು. ಇದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ಶಿಕ್ಷಕರು ಈ ನಿಟ್ಟಿನಲ್ಲಿ ಸಿದ್ಧರಾಗಬೇಕು. ವಿದ್ಯಾರ್ಥಿಗಳನ್ನು ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು ಎಂದು ಹೇಳಿದರು.

ವಿವಿಧ ಪಿಯು ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯ ಅಧ್ಯಕ್ಷ ಎ.ರಾಮೇಗೌಡ ಅಧ್ಯಕ್ಷತೆವಹಿಸಿದ್ದರು. ತರಳಬಾಳು ಪಿಯು ಕಾಲೇಜಿನ ಪ್ರಾಂಶುಪಾಲ ಎಸ್‌.ಶಿವಕುಮಾರ್‌, ವೇದಿಕೆಯ ಉಪಾಧ್ಯಕ್ಷ ಬಿ.ಆರ್.ನೀಲಕಂಠ, ಕಾರ್ಯದರ್ಶಿ ಬಿ.ಸಣ್ಣೇಗೌಡ, ಖಜಾಂಚಿ ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT