ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ಸಂವಿಧಾನ ತಿದ್ದುಪಡಿ ಹಿಂದೆ ಹುನ್ನಾರ’

‘ಕೇಶವಾನಂದ ಭಾರತಿ ಪ್ರಕರಣದ ಮರು ಚಿಂತನೆ' ಕುರಿತು ನಾಗಮೋಹನ ದಾಸ್ ಉಪನ್ಯಾಸ
Published 7 ಫೆಬ್ರುವರಿ 2024, 14:34 IST
Last Updated 7 ಫೆಬ್ರುವರಿ 2024, 14:34 IST
ಅಕ್ಷರ ಗಾತ್ರ

ಮೈಸೂರು: ‘ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿದು ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಿದ್ದು, ಐವತ್ತು ವರ್ಷಗಳ ನಂತರವೂ ಪ್ರಸ್ತುತವಾಗಿದೆ. ಹೀಗಾಗಿ ಅದರ ಪುನರ್ ವಿಮರ್ಶೆಯ ಅಗತ್ಯ ಇಲ್ಲ’ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.

ವಿದ್ಯಾವರ್ಧಕ ಕಾನೂನು ಕಾಲೇಜು ಸಭಾಂಗಣದಲ್ಲಿ ಬುಧವಾರ ಎನ್. ನಂಜೇಗೌಡ ಸ್ಮರಣಾರ್ಥ ಆಯೋಜಿಸಿದ್ದ ಪ್ರಥಮ ವರ್ಷದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಐವತ್ತು ವರ್ಷದ ಮೂಲ ತಳಹದಿ ಸಿದ್ಧಾಂತ: ಕೇಶವಾನಂದ ಭಾರತಿ ಪ್ರಕರಣದ ಮರು ಚಿಂತನೆ’ ವಿಷಯದ ಕುರಿತು ಅವರು ಮಾತನಾಡಿದರು.

‘ಇಂದಿನ ಅಗತ್ಯ, ಸ್ಥಿತಿಗತಿಗೆ ತಕ್ಕಂತೆ‌ ನಾವು ಸಂವಿಧಾನ ರಚನೆ ಮಾಡುತ್ತೇವೆ. ಕಾಲ ಬದಲಾದಂತೆ, ಅವಶ್ಯಕತೆಗೆ ಅನುಗುಣವಾಗಿ ಸಂವಿಧಾನದ ತಿದ್ದುಪಡಿ ಆಗಬೇಕು’ ಎಂದು ನೆಹರೂ ಸಂವಿಧಾನ ರಚನೆ ಕಾರ್ಯದ ವೇಳೆ ಹೇಳಿದ್ದರು‌. ಅದರಂತೆ ಸಂವಿಧಾನದ ಅನುಚ್ಛೇದ 4, 107, 161, 177ರಲ್ಲಿ ರಲ್ಲಿ ಸಂವಿಧಾನ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅನುಚ್ಛೇದ 360 ಅಡಿ ಸಂವಿಧಾನ ತಿದ್ದುಪಡಿಗೆ ಸಂಸತ್ತಿಗೆ ಪರಮಾಧಿಕಾರ ನೀಡಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ‘ಯಾವುದೇ ತಿದ್ದುಪಡಿಯು ಕಾನೂನು, ಸಂವಿಧಾನವನ್ನು ಪ್ರಶ್ನೆ ಮಾಡಿದಾಗ ಅದನ್ನು ನ್ಯಾಯಾಂಗವು ಪುನರ್ ವಿಮರ್ಶೆ ಮಾಡಬೇಕು' ಎಂದು ಹೇಳಿದ್ದರು.‌ ಅನುಚ್ಛೇದ 32ರ ಅಡಿ ನ್ಯಾಯಾಂಗಕ್ಕೆ ಸಂವಿಧಾನ ತಿದ್ದುಪಡಿಯ ಪರಾಮರ್ಶೆ ಅಧಿಕಾರ ಇದ್ದು, ಅದನ್ನು ಸಂವಿಧಾನದ ಆತ್ಮ ಎಂದು ಹೇಳಲಾಗಿದೆ’ ಎಂದು ವಿವರಿಸಿದರು.

‘1969ರಲ್ಲಿ ಕೇರಳ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಕೇರಳದ ದೊಡ್ಡ ಭೂ ಮಾಲೀಕರು ಜಮೀನು ಕಳೆದುಕೊಂಡರು.‌ ಅಂತಹ ಸಂತ್ರಸ್ಥರಲ್ಲಿ ಒಬ್ಬರಾದ ಕಾಸರಗೋಡಿನ ಯಡನೂರು ಮಠದ ಕೇಶವಾನಂದ ಭಾರತಿ‌ ಶ್ರೀಗಳು ಸುಪ್ರೀಂ ಕೋರ್ಟ್‌ಗೆ ರಿಟ್ ಹಾಕಿದರು. ಇದರ ವಿಚಾರಣೆಗಾಗಿ ಬರೋಬ್ಬರಿ 13 ನ್ಯಾಯಮೂರ್ತಿಗಳ ವಿಸ್ತೃತ ಸಂವಿಧಾನ ಪೀಠ ರಚನೆ ಆಯಿತು. ‌ಕಾನೂನು ತಜ್ಞರು ತಮ್ಮ ವಾದ ಮಂಡಿಸಿದರು. ಪ್ರಪಂಚದ 78 ಸಂವಿಧಾನಗಳನ್ನು ಪರಾಮರ್ಶಿಸಲಾಯಿತು. ಅಂತಿಮವಾಗಿ ಪೀಠವು, ‘ ಸಂವಿಧಾನ ತಿದ್ದುಪಡಿಗೆ ಶಾಸಕಾಂಗಕ್ಕೆ ಅಧಿಕಾರ ಇದೆ. ಆದರೆ ಸಂವಿಧಾನದ ಮೂಲ ತತ್ವಗಳನ್ನು ತಿದ್ದುಪಡಿ ಮಾಡುವಂತೆ ಇಲ್ಲ’ ಎಂದು ನ್ಯಾಯಪೀಠ ಹೇಳಿತು’ ಎಂದು ವಿವರಿಸಿದರು.

‘ಈ ಪ್ರಕರಣದ ನ್ಯಾಯಪೀಠವು ಸಂವಿಧಾನದಲ್ಲಿ ಅಂತರ್ಗತ ಆಗಿರುವ ಮೌಲ್ಯಗಳನ್ನು ಪಟ್ಟಿ‌ ಮಾಡಿ ಅದನ್ನು ಮೂಲ ತತ್ವ ಎಂದು ಗುರುತಿಸಿತು.‌ ಸಂಸದೀಯ ಪ್ರಜಾಪ್ರಭುತ್ವ, ಒಕ್ಕೂಟ ಸ್ವರೂಪ, ಧರ್ಮ‌ ನಿರಪೇಕ್ಷತೆ, ದೇಶದ ಏಕತೆ ಮತ್ತು ಸಮಗ್ರತೆ ಮೊದಲಾದವುಗಳನ್ನು ಮೂಲ ತತ್ವ ಎಂದು ಗುರುತಿಸಲಾಯಿತು. ನಂತರದ ಅನೇಕ ಪ್ರಕರಣಗಳಲ್ಲಿ ನ್ಯಾಯಪೀಠಗಳು ಈ ತತ್ವಗಳನ್ನು ಎತ್ತಿ ಹಿಡಿದು, ಅದನ್ನು ವಿಸ್ತರಿಸುತ್ತಾ ಹೋಗಿವೆ. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ ಅಂಶಗಳನ್ನು ಇದಕ್ಕೆ ಸೇರಿಸಲಾಗಿದೆ. ಇಂದು ಸಂವಿಧಾನ ಉಳಿದಿದೆ, ಅದರ ಆಶಯಗಳು ಉಳಿದಿದೆ ಎಂದರೆ ಅದಕ್ಕೆ ಕಾರಣ ಕೇಶವಾನಂದ ಭಾರತಿ ತೀರ್ಪು ಕಾರಣ’ ಎಂದು ಹೇಳಿದರು.

‘ಕಳೆದ ಎರಡು ವರ್ಷದಿಂದ ಈ ಪ್ರಕರಣದ ಪುನರ್ ವಿಮರ್ಶೆಗೆ ಆಗ್ರಹ ಕೇಳಿಬಂದಿದೆ. ಉಪ‌ ರಾಷ್ಟ್ರಪತಿಗಳೇ ಇದನ್ನು ಬೆಂಬಲಿಸಿದ್ದಾರೆ. ಆದರೆ ಅದರ ಅಗತ್ಯ ಇದೆಯೇ ಎಂಬುದನ್ನು‌ ನಾವೆಲ್ಲ ಕೇಳಿಕೊಳ್ಳಬೇಕು? ಯಾವ ಉದ್ದೇಶಕ್ಕೆ ತಿದ್ದುಪಡಿ ಬೇಕು? ಸಂವಿಧಾನ ಬದಲಿಸಲಾ? ಒಕ್ಕೂಟ ವ್ಯವಸ್ಥೆ ಧ್ವಂಸ ಮಾಡಲಿಕ್ಕ?’ ಎಂದು ಅವರು ಪ್ರಶ್ನಿಸಿದರು.

‘ನ್ಯಾಯಾಧೀಶರಿಗೂ ಒಂದು ಸಂವಿಧಾನದ ಚೌಕಟ್ಟು ಇದೆ. ಅದರಂತೆ ನಾವು ತೀರ್ಪು ಬರೆಯುತ್ತೇವೆ. ಸೇಚ್ಛಾಚಾರಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಹೀಗಾಗಿ ಇದರ ತಿದ್ದುಪಡಿ ಮಾಡಬೇಕು ಎಂಬುದರಲ್ಲಿ ಯಾವುದೇ ತಿರುಳು ಇಲ್ಲ. ಸಂವಿಧಾನ ತಿದ್ದುಪಡಿಯ ಅಗತ್ಯ ಇಲ್ಲ. ಇದನ್ನು ಬಯಸುವವರು ಸಂವಿಧಾನವನ್ನು ಸರಿಯಾಗಿ ಓದಿಲ್ಲ’ ಎಂದರು.

‘ಸಂವಿಧಾನದಿಂದಾಗಿಯೇ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಸಿಕ್ಕಿತು. ಈ ದೇಶ ದಲಿತ ರಾಷ್ಟ್ರಪತಿ, ಗಾಣಿಗ ಸಮುದಾಯದ ಪ್ರಧಾನಿ ಕಾಣಲು ಸಾಧ್ಯವಾಯಿತು. ನನ್ನಂತಹವನು ನ್ಯಾಯಮೂರ್ತಿ ಆಗಲೂ ಸಂವಿಧಾನ ಕಾರಣ. ಇಂತಹ ಸಂವಿಧಾನವನ್ನು ನಾವೆಲ್ಲ ಕಳೆದುಕೊಳ್ಳಬಾರದು. ಅದು ಹೋದರೆ ಕೋಮುವಾದ, ನಿರಂಕುಶವಾದ ನಮ್ಮನ್ನು ಆವರಿಸುತ್ತದೆ’ ಎಂದು ಎಚ್ಚರಿಸಿದರು.

‘ಸಂವಿಧಾನವನ್ನು ಉತ್ತಮಗೊಳಿಸಲು ಅವಕಾಶ ಇದೆ. ಆದರೆ ಇದನ್ನು ನಾಶಪಡಿಸಲು ಅವಕಾಶ ಇಲ್ಲ. ಸಂವಿಧಾನವನ್ಮು ಅಪ್ರಸ್ತುತ ಗೊಳಿಸುವ ಸಂಚು ನಡೆದಿದೆ.‌ ಸಂವಿಧಾನ ಉಳಿದರೆ ಮಾತ್ರ ದೇಶ ಹಾಗೂ ನಾವು- ನೀವು ಉಳಿಯಲು ಸಾಧ್ಯ’ ಎಂದು ಎಚ್ಚರಿಸಿದರು.

ಇದೇ ಸಂದರ್ಭ ದಿವಂಗತ ಎನ್. ನಂಜೇಗೌಡ ಕುಟುಂಬದವರು ದತ್ತಿ ನಿಧಿ ಸ್ಥಾಪನೆಗಾಗಿ ಕಾಲೇಜಿಗೆ ₹ 5 ಲಕ್ಷದ ಚೆಕ್‌ ನೀಡಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ, ಸಿಎಂಸಿ ಅಧ್ಯಕ್ಷ ಶಿವಲಿಂಗಯ್ಯ, ಪ್ರಾಚಾರ್ಯೆ ಪಿ. ದೀಪು, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಕೆ.ಬಿ. ವಾಸುದೇವ, ದತ್ತಿ ದಾನಿಗಳಾದ ಕಮಲಾಕ್ಷ್ಮಿ ನಂಜೇಗೌಡ, ಪ್ರೊ. ಸತೀಶ್‌ ಗೌಡ, ಎನ್‌. ಆನಂದ ಗೌಡ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT