ಎಚ್.ಡಿ.ಕೋಟೆ: ‘ಬುಡಕಟ್ಟು ಜನರ ಅಭಿವೃದ್ಧಿಗೆ ಆದಿವಾಸಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದಲ್ಲಿ ಲ್ಯಾಂಪ್ಸ್ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಬುಡಕಟ್ಟು ಜನರು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ವರ್ಷದಲ್ಲಿ ಆರು ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ವರ್ಷವಿಡೀ ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರ ಫಲವಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಸದ್ಯದಲ್ಲಿಯೇ ಅವರಿಗೆ ವರ್ಷಪೂರ್ತಿ ಆಹಾರ ವಿತರಣೆ ಆಗಲಿದೆ’ ಎಂದರು.
‘ತಾಲ್ಲೂಕಿನ ವಿವಿಧ ಹಾಡಿಗಳಲ್ಲಿ 700 ಮನೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಕಾಡಿನ ಒಳಭಾಗದಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆ ತೊಂದರೆ ನೀಡುತ್ತಿದ್ದು, ಅದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಧ್ವನಿ ಇಲ್ಲದವರ ಪರವಾಗಿ ನಿರಂತರವಾಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಜೇನುತುಪ್ಪವನ್ನು ಮೈಮುಲ್ ವತಿಯಿಂದ ಖರೀದಿಸುವಂತೆ ಮಾಡಲು ಕ್ರಮ ವಹಿಸುತ್ತೇನೆ’ ಎಂದರು.
ಅಧಿಕ ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಲ್ಯಾಂಪ್ಸ್ ಅಧ್ಯಕ್ಷ ವಡ್ಡರಗುಡಿ ಪುಟ್ಟಬಸವಯ್ಯ, ಉಪಾಧ್ಯಕ್ಷೆ ರೂಪ, ನಿರ್ದೇಶಕರಾದ ಕಾವೇರ, ಶಂಕರ, ರಾಜು, ಕಾಳಕಲ್ಕರ್, ಕಾಳಪ್ಪ, ದೇವರಾಜು, ಚಿಕ್ಕಣ್ಣ, ಶಿವಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲೇಂದ್ರ, ವೆಂಕಟೇಶ, ಮಹಾದೇವ, ಎಸ್. ಸಿದ್ದರಾಜು, ವಿಜಯ್ ಕುಮಾರ್, ಗಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.