ಮೈಸೂರು: ‘ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿ ನಿರ್ಮಿಸುವ ಕನಸು ಇದೀಗ ನನಸಾಗಿದ್ದು, ಮೈಸೂರಿನಲ್ಲಿ 160 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದು ಸಂತಸ ತಂದಿದೆ’ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದುವರೆಗೂ ಯಾವ ಮುಖ್ಯಮಂತ್ರಿಗೂ ಸಾಧ್ಯವಾಗದಿದ್ದನ್ನು ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗ ಧನ್ಯವಾದ ಅರ್ಪಿಸುತ್ತದೆ’ ಎಂದರು.
‘ಚಿತ್ರನಗರಿ ನಿರ್ಮಾಣಕ್ಕೆ ಟೆಂಡರ್ ಸೇರಿದಂತೆ ಹಲವು ಪ್ರಕ್ರಿಯೆಗಳು ಶೀಘ್ರವಾಗಿ ನಡೆಯಬೇಕು. ಅಗತ್ಯ ತಂತ್ರಜ್ಞಾನಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯಲ್ಲಿ ಚಿತ್ರನಗರಿ ನಿರ್ಮಿಸಲು ಕನ್ನಡ ಚಿತ್ರರಂಗ ಸಂಪೂರ್ಣ ಸಹಕಾರ ನೀಡಲಿದೆ. ಚಿತ್ರಮಂದಿರ, ಸ್ಟುಡಿಯೊ, ಮಲ್ಟಿಫ್ಲೆಕ್ಸ್, ಥೀಮ್ ಪಾರ್ಕ್ ಹಾಗೂ ಹೋಟೆಲ್‌ಗಳ ನಿರ್ಮಾಣ ಆಗಲಿದೆ. ಮೊದಲು 110 ಎಕರೆಯನ್ನು ಇದಕ್ಕಾಗಿ ಮೀಸಲಿರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 50 ಎಕರೆ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ತಿಳಿಸಿದರು.
‘ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಅದರಂತೆ ಚಿತ್ರ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮುಖ್ಯಮಂತ್ರಿ ಕ್ರಮವಹಿಸಬೇಕು. ಜೊತೆಗೆ ಬೇರೆ ಬೇರೆ ಚಿತ್ರರಂಗದಲ್ಲಿರುವಂತೆ ನಮ್ಮಲ್ಲಿಯೂ ಹೌಸಿಂಗ್ ಸೊಸೈಟಿ ನಿರ್ಮಿಸಬೇಕು. ಈ ಹಿಂದೆ ಹಾಲಿವುಡ್, ಬಾಲಿವುಡ್ ಚಿತ್ರಗಳ ಚಿತ್ರೀಕರಣಕ್ಕೆ ಮೈಸೂರು ಮೊದಲ ಪ್ರಾಶಸ್ತ್ಯವಾಗಿತ್ತು’ ಎಂದರು.
ಕೇರಳದ ಹೇಮಾ ಸಮಿತಿಯ ವರದಿ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೇಂದ್ರ ಸಿಂಗ್ ಬಾಬು, ‘ಕೇರಳ ಪರಿಸ್ಥಿತಿಯೇ ಬೇರೆ. ಇಲ್ಲಿಯ ಪರಿಸ್ಥಿತಿಯೇ ಬೇರೆ. ನಮಗೆ ಕಮಿಟಿ ಅವಶ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ನಿಂತು ಚಿತ್ರರಂಗ ಬೆಳವಣಿಗೆಗೆ ಶ್ರಮಿಸಬೇಕು. ಸಾಹಿತ್ಯ ಆಧಾರಿತ ಚಿತ್ರ ನಿರ್ಮಿಸಲು ತೊಡಗಿಕೊಳ್ಳಬೇಕು’ ಎಂದು ತಿಳಿಸಿದರು.
ನಟ ಜೈಜಗದೀಶ್, ನಟಿ ವಿಜಯಲಕ್ಷ್ಮಿ ಸಿಂಗ್ ಇದ್ದರು.
ಈ ಮೊದಲೇ ದನಿ ಎತ್ತಬೇಕಿತ್ತು’
ಮೀಟೂ’ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ‘ಕನ್ನಡ ಚಿತ್ರರಂಗದಲ್ಲಿ ಈ ತರಹ ಯಾವುದೇ ಘಟನೆ ನಡೆದಿಲ್ಲ. ಆರೋಪ ಮಾಡಿದವರು ಯಾರೂ ಹೊಸಬರಲ್ಲ. ಈ ಮೊದಲೇ ದನಿ ಎತ್ತಬೇಕಿತ್ತು. ಇಷ್ಟು ದಿನ ಏಕೆ ತಡ ಮಾಡಿದರು’ ಎಂದು ಪ್ರಶ್ನಿಸಿದರು. ‘ಕೇವಲ ಹೆಸರಿಗಾಗಿ ಹಾಗೂ ಸುದ್ದಿಯಲ್ಲಿರಬೇಕೆಂಬ ಮನೋಭಾವದ ಧೋರಣೆಯನ್ನು ಕಲಾವಿದರು ಬಿಡಬೇಕು. ಹಾಗೇನಾದರೂ ಇದ್ದರೆ ಇಡೀ ಚಿತ್ರ ತಂಡವೇ ಒಗ್ಗಟ್ಟಾಗಿ ನ್ಯಾಯ ದೊರಕಿಸುತ್ತದೆ’ ಎಂದರು. ‘ಪರಭಾಷಾ ಚಿತ್ರ ಹಾವಳಿ ತಪ್ಪಿಸಲು ಕನ್ನಡಿಗರಿಂದ ಮಾತ್ರ ಸಾಧ್ಯವಾಗಿದ್ದು ನಾಯಕತ್ವದ ಹುಡುಕಾಟದಲ್ಲಿ ಚಿತ್ರರಂಗ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.