ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ ಮಾರ್ಗ’ಕ್ಕೆ ಕಲಾ ಲೋಕ ಮೆರುಗು- ಸಂಸ್ಕೃತಿ–ಸಂಪ್ರದಾಯಗಳ ಪರಿಚಯ

ನಾಡಿನ ವಿವಿಧ ಸಂಸ್ಕೃತಿ–ಸಂಪ್ರದಾಯಗಳ ಪರಿಚಯ
Last Updated 5 ಅಕ್ಟೋಬರ್ 2022, 19:01 IST
ಅಕ್ಷರ ಗಾತ್ರ

ಮೈಸೂರು: ಮೇರೆ ಮೀರಿದ ಉತ್ಸಾಹ. ಮೆರುಗು ನೀಡಿದ ವಿವಿಧ ಪ್ರಾಕಾರದ ಕಲಾ ತಂಡಗಳು. ಬೆಂಕಿಯ ಉಂಡೆಗಳನ್ನು ಉಗುಳಿದ ಸಾಹಸಿಗಳು. ಆಕಾಶವನ್ನೇ ಮುಟ್ಟುತ್ತೇನೆಂಬ ಛಲ ತೋರಿದ ಮರಗಾಲು ಕುಣಿತ ಕಲಾವಿದರು. ಕಲೆ–ಸಂಸ್ಕೃತಿಯ ಪ್ರದರ್ಶನದ ರಸದೌತಣ.

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಕಂಡುಬಂದ ನೋಟವಿದು. ನಾಡಿನ ಹಲವು ಜಿಲ್ಲೆಗಳ ಕಲಾವಿದರು ತಮ್ಮ ಪ್ರತಿಭೆ, ಕಲಾ ಪ್ರದರ್ಶನ ನೀಡಿ ನೆರೆದಿದ್ದವರ ಮನಸೂರೆಗೊಂಡರು. ಅರಮನೆಯಿಂದ ಬನ್ನಿಮಂಟಪದವರೆಗೆ ಐದು ಕಿ.ಮೀ.ವರೆಗೆ ಒಮ್ಮೆ ಬಿಸಿಲು, ಮತ್ತೊಮ್ಮೆ ತಂಪಾದ ವಾತಾವರಣದಲ್ಲಿ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಇಕ್ಕೆಲಗಳಲ್ಲಿ ನಿಂತು ತಮ್ಮನ್ನು ನೋಡುತ್ತಿದ್ದ ಸಾವಿರಾರು ಮಂದಿಗೆ ರಂಜನೆಯ ಹಬ್ಬದೂಟ ಬಡಿಸಿದರು.

ಹಲವು ವಿಶೇಷ ಪ್ರಕಾರಗಳ ಕಲೆಗಳು ಪ್ರದರ್ಶನಕ್ಕೆ ಲಭ್ಯವಾದದ್ದು ಈ ಬಾರಿಯ ವಿಶೇಷವಾಗಿತ್ತು. ವಿವಿಧ ಕಲಾತಂಡಗಳು ಮೇಳೈಸಿದ್ದರಿಂದ ಎರಡು ವರ್ಷಗಳ ನಂತರ ನಡೆದ ಅದ್ಧೂರಿ ವಿಜಯದಶಮಿ ಮೆರವಣಿಗೆಯು ಕಳೆ ಕಟ್ಟಿತು.

ನಂದಿ ಧ್ವಜ, ವೀರಗಾಸೆ, ಪುರವಂತಿಕೆ, ಕೊಂಬುಕಹಳೆ, ಕಂಸಾಳೆ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಕಣಿ ವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ತಮಟೆ ನಗಾರಿ, ಯಕ್ಷಗಾನ ಬೊಂಬೆಗಳು, ವಿವಿಧ ಕುಣಿತದ ತಂಡಗಳು ನಾಡಿನ ಕಲಾ ಸೊಬಗನ್ನು ಪರಿಚಯಿಸಿದವು.

ನಂದಿ ಧ್ವಜ ಮೆರುಗು:

ಮೈಸೂರಿನ ಗೌರಿಶಂಕರ ನಗರದ ಗೌರೀಶಂಕರ ನಂದಿಧ್ವಜ ಸಂಘದ ಮಹದೇವಪ್ಪ ಉಡಿಗಾಲ ನೇತೃತ್ವದ ತಂಡದವು ಕಲಾ ತಂಡಗಳ ಮೆರವಣಿಗೆಗೆ ಮುನ್ನುಡಿ ಹಾಡಿತು. ಸ್ತಬ್ಧಚಿತ್ರಗಳ ಜೊತೆಗೆ ಕಲಾ ತಂಡಗಳು ಸಾಗಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕಹಳೆಗಳು ಮೊಳಗಿದರೆ, ಕುಣಿತಗಳು ಮುದ ನೀಡಿದವು. ಡೊಳ್ಳನ್ನು ಕಲಾವಿದರು ನೆರೆದಿದ್ದವರ ಎದೆ ನಡುಗುವಂತೆ ಬಾರಿಸುತ್ತಿದ್ದರು. ಈ ಸದ್ದಿಗೆ ಬಹುತೇಕರು ತಲೆ, ಕಾಲು ಅಥವಾ ಕೈಗಳ್ಳಲ್ಲಿ ತಾಳ ಹಾಕುತ್ತಿದ್ದರು! ವಿಶೇಷ ಮತ್ತು ವಿಚಿತ್ರ ವೇಷಧಾರಿಗಳೂ ಮೆರವಣಿಗೆಯಲ್ಲಿ ‘ದರ್ಶನ’ ನೀಡಿದರು. ಕೆಲವರ ಮುಖವಾಡಗಳು ಕೂಡ ವಿಚಿತ್ರವಾಗಿದ್ದವು.

ಮೈಸೂರಿನ ಗುಂಡೂರಾವ್‌ ನಗರದ ಅಂಬಳೆ ಶಿವಣ್ಣ ನೇತೃತ್ವದ ಬಸವೇಶ್ವರ ವೀರಗಾಸೆ ಜಾನಪದ ಕಲಾ ತಂಡದ ಪುರವಂತಿಕೆ, ಚಿತ್ರದುರ್ಗ ಜಿಲ್ಲೆಯ ಚಿಕ್ಕಬೆನ್ನೂರು ಅಂಚೆಯ ಬೀಳಂಗಿ ಗ್ರಾಮದ ಸಿ.ಎಚ್.ಶಿವಕುಮಾರ್ ತಂಡ, ಮಳವಳ್ಳಿ ತಾಲ್ಲೂಕು ಕಿರುಗಾವಲಿನ ಕೇರೇಗಾಲದ ಮಹಿಳಾ ಸಾಂಸ್ಕೃತಿಕ ಕಲಾ ತಂಡದಿಂದ ಒನಕೆ ಹಿಡಿದ ಓಬ್ಬವ್ವನೊಂದಿಗೆ ಕೊಂಬು ಕಹಳೆ ಮೊಳಗಿದವು. ಕೊಂಬು ಕಹಳೆ ತಂಡದಲ್ಲಿ ಬಾಲಕಿಯರೂ ಇದ್ದದ್ದು ವಿಶೇಷವಾಗಿತ್ತು.

ಚಿನ್ನಿಕೋಲು, ಗೇರ ನೃತ್ಯ, ಜಡೆ ಕೋಲಾಟ, ಕೀಲುಕುದುರೆ, ಗಿರಿಜನ ನೃತ್ಯ, ಬೇಡರ ವೇಷ, ನವಿಲು ನೃತ್ಯಗಳು ವಿಶೇಷವಾಗಿದ್ದವು. ಮುಳ್ಳು ಕುಣಿತಕ್ಕಾಗಿ ಬಾಗಲಕೋಟೆ ಜಿಲ್ಲೆ ಗೋವನಕೊಪ್ಪದ ಕಾವೇರಿ ಕಲಾತಂಡದವರು ಪಾಪಸ್ ಕಳ್ಳಿಯನ್ನೇ ತಂದಿದ್ದರು! ಹಗಲು ವೇಷ, ಕರಡಿ ಮಜಲು, ಕೋಳಿ ನೃತ್ಯ, ರಾಕ್ಷಸ ವೇಷ, ಸೋಮನ ಕುಣಿತವೂ ಮನ ಗೆದ್ದಿತು. ಪೊಲೀಸ್ ಬ್ಯಾಂಡ್‌ನವರೂ ಕಾರ್ಯಕ್ರಮ ನೀಡಿದರು. ಮೈಸೂರಿನ ಎಂ.ಎನ್.ಶ್ರೀನಿವಾಸ್ ನೇತೃತ್ವದ ನಾದಸ್ವರ ತಂಡದವರು ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳಲ್ಲಿ ಕೊನೆಯಲ್ಲಿದ್ದರು.

ಕಲಾವಿದರೊಂದಿಗೆ ಎಸ್‌ಟಿಎಸ್

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹೂವಿನ ಕುಣಿತ ಕಲಾವಿದರೊಂದಿಗೆ ನಟ ಪುನೀತ್ ರಾಜ್‌ಕುಮಾರ್‌ ಫೋಟೊ ಇದ್ದ ಬಾವುಟ ಹಿಡಿದು ಸಾಗಿದ್ದು ಗಮನಸೆಳೆಯಿತು. ಮತ್ತೊಮ್ಮೆ, ಸೋಮನ ಕುಣಿತ ತಂಡದೊಂದಿಗೂ ಅವರು ಹೆಜ್ಜೆ ಹಾಕಿದರು.

ಗಮನಸೆಳೆದ ಕೀಲುಕುದುರೆ, ವೇಷಧಾರಿಗಳು

ನಂಜನಗೂಡು ತಾಲ್ಲೂಕು ಕೆಂಪಿಸಿದ್ದನಹುಂಡಿಯ ಮಲೆಮಹದೇಶ್ವರ ಕಂಸಾಳೆ ಕಲಾವಿದರ ಸಂಘದ ಮಹದೇವು ತಂಡದಿಂದ ಕಂಸಾಳೆ, ಪಾಂಡವಪುರ ತಾಲ್ಲೂಕು ಸುಂಕಾತೊಣ್ಣೂರಿನ ವರನಂದಿ ಜಾನಪದ ಕಲಾ ಬಳಗದಿಂದ ಪಟ ಕುಣಿತ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸಾರವಾಡ ಚಂದ್ರಶೇಖರ ತಂಡದಂದ ಕೀಲುಕುದುರೆ ಗಮನಸೆಳೆಯಿತು.

ವಿಜಯಪುರ ಜಿಲ್ಲೆಯ ಕಣಬೂರದ ರಾಜೇಸಾನ ಅಮೀನಸಾಬ ಮುಲ್ಲಾ ನೇತೃತ್ವದ ರಾಚೂಟೇಶ್ವರ ಕೃಪಾ ಪೋಷಿತ ಪೀರ ಹುಸೇನ ಹೆಜ್ಜೆಮೇಳ ತಂಡದವರ ಹೆಜ್ಜೆ ಮೇಳ ಆಕರ್ಷಿಸಿತು. ತಿ.ನರಸೀಪುರ ತಾಲ್ಲೂಕು ಯಡಹಳ್ಳಿ ಗ್ರಾಮದ ಪೂಜಾ ಕುಣಿತಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಉಡುಪಿ ಜಿಲ್ಲೆಯ ಕಸ್ತೂರಬಾ ಬಡಗಬೆಟ್ಟು ಸ್ವಾಮಿ ಕೊರಗಜ್ಜ ಮಹಿಳಾ ಚಂಡೆ ಬಳಗದಿಂದ ಸಂಗಾರಿ ಮೇಳ, ಮೈಸೂರು ಜಿಲ್ಲೆಯ ತಾಯೂರಿನ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿ ಸಂಘದವರು ನೀಡಿದ ಮರಗಾಲು ಕುಣಿತ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ವೀರಮದಕರಿ ನಾಯಕರ ಯುವಕರ ಸಂಘದವರ ದೊಣ್ಣೆವರಸೆ, ದಕ್ಷಿಣ ವಲಯದ ತೆಲಂಗಾಣದ ನೃತ್ಯ, ಪಂಜಾಬ್‌ನ ಬಾಂಗ್ರಾ ಮತ್ತು ಜಿಂದುವಾ ನೃತ್ಯ ಆಕರ್ಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT