ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆ ಬಿಂಬಿಸಲಿರುವ ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಕಾರ್ಯಕ್ರಮಗಳ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಅ.3ರಂದು ಬೆಳಿಗ್ಗೆ 9.15ರಿಂದ 9.45ರ ನಡುವೆ ಉದ್ಘಾಟನೆಯನ್ನು ಸಾಹಿತಿ ಹಂ.ಪ. ನಾಗರಾಜಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂದು ಸಂಜೆ 6ಕ್ಕೆ ಅರಮನೆ ವೇದಿಕೆಯಲ್ಲೇ ಚಾಲನೆ ದೊರೆಯಲಿದೆ. ಸಂಗೀತ ಕ್ಷೇತ್ರದ ಸಾಧಕರೊಬ್ಬರಿಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನವೂ ನಡೆಯಲಿದೆ.
ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಅ.12ರಂದು ನಡೆಯಲಿದೆ. ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಂದಿಧ್ವಜ ಪೂಜೆಯನ್ನು ಮಧ್ಯಾಹ್ನ 1.40ರಿಂದ 2.10ರೊಳಗೆ ಮುಖ್ಯಮಂತ್ರಿ ನೆರವೇರಿಸಲಿದ್ದಾರೆ. ಸಂಜೆ 4ರಿಂದ 4.30ರೊಳಗೆ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಸಂಜೆ 7ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ಪ್ರದರ್ಶನ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮೊದಲ ದಿನವಾದ ಅ.3ರಂದು ಮಹೋತ್ಸವದ ಉದ್ಘಾಟನೆಯೊಂದಿಗೆ, ಇತರ ಬರೋಬ್ಬರಿ 12 ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಇವುಗಳಲ್ಲಿ ಆರು ಕಾರ್ಯಕ್ರಮಗಳ (ಚಲಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಕುಸ್ತಿ, ಕ್ರೀಡಾಕೂಟ, ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ) ಉದ್ಘಾಟನೆಯನ್ನು ಮುಖ್ಯಮಂತ್ರಿಯೇ ನೆರವೇರಿಸಲಿದ್ದಾರೆ. ಉಳಿದಂತೆ ಅಂದು ಆಹಾರ ಮೇಳ, ಶಿಲ್ಪ–ಚಿತ್ರಕಲಾ ಪ್ರದರ್ಶನ, ಪುಸ್ತಕ ಮೇಳ, ನವರಾತ್ರಿ ಜನಪದ ರಂಗ ಉತ್ಸವ, ವಿದ್ಯುತ್ ದೀಪಾಲಂಕಾರ ಹಾಗೂ ವಿದ್ಯುತ್ ರಥದ ಸಂಚಾರಕ್ಕೆ ಚಾಲನೆ ದೊರೆಯಲಿದೆ.
‘ಮಕ್ಕಳ ದಸರಾ ಕಲಾಥಾನ್’ ಅ.4ರಂದು ಬೆಳಿಗ್ಗೆ 9.30ಕ್ಕೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಜರುಗಲಿದೆ. ‘ಮತ್ಸ್ಯ ಮೇಳ’ ಈ ಬಾರಿಯ ವಿಶೇಷಗಳಲ್ಲೊಂದಾಗಿದ್ದು, 5ರಂದು ಬೆಳಿಗ್ಗೆ 11ಕ್ಕೆ ಜೆ.ಕೆ. ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮೇಯರ್ ಕುದುರೆ ‘ಸವಾರಿ’ ಇಲ್ಲ!
ದಸರೆಯ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯಲ್ಲಿ ನಗರದ ಪ್ರಥಮ ಪ್ರಜೆಯಾದವರು ಕುದುರೆ ಸವಾರಿಯಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ. ಅದಕ್ಕಾಗಿ ಅವರು ಹಲವು ದಿನಗಳವರೆಗೆ ಪೂರ್ವಾಭ್ಯಾಸ ನಡೆಸಿ ಕುದುರೆ ಸವಾರಿ ಕಲಿತು ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಯುದ್ದಕ್ಕೂ ಜನರತ್ತ ಕೈಬೀಸುತ್ತಾ ಸಾಗುತ್ತಾರೆ. ಆದರೆ ಈ ಬಾರಿ ಅಂತಹ ದೃಶ್ಯ ಕಾಣಸಿಗುವುದಿಲ್ಲ. ಏಕೆಂದರೆ ಪಾಲಿಕೆ ಆಡಳಿತ ಮಂಡಳಿಯ ಅವಧಿ ಮುಗಿದಿರುವುದು ಹಾಗೂ ಮೇಯರ್ ಇಲ್ಲದಿರುವುದು ಇದಕ್ಕೆ ಕಾರಣ.
ಈ ಬಾರಿ ಸಂಸದರಿಂದಲೂ ‘ಪುಷ್ಪಾರ್ಚನೆ’!
ಜಂಬೂಸವಾರಿ ಮೆರವಣಿಗೆಗೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಅ.12ರಂದು ಸಂಜೆ 4ರಿಂದ 4.30ರವರೆಗೆ ಚಾಲನೆ ಕೊಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ‘ವಿಶೇಷ ಆಹ್ವಾನಿತ’ರಾಗಿ ರಾಜವಂಶಸ್ಥರು ಪಾಲ್ಗೊಳ್ಳುತ್ತಾರೆ. ಈ ಬಾರಿ ಸಂಸದರು ಕೂಡ ಭಾಗವಹಿಸುತ್ತಿರುವುದು ವಿಶೇಷ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ಸಂಸದರಾಗಿರುವುದು ಇದಕ್ಕೆ ಕಾರಣ. ಅವರು ಅರಮನೆಯಲ್ಲಿ ಸಾಂಪ್ರದಾಯಿಕ ‘ಖಾಸಗಿ ದರ್ಬಾರ್’ ನಡೆಸುತ್ತಿರುವುದು ಸಂಸದರಾದ ನಂತರ ಇದೇ ಮೊದಲನೆಯದಾಗಿದೆ.
ಎಲ್ಲ ಕವಿಗೋಷ್ಠಿ ಜಗನ್ಮೋಹನದಲ್ಲೇ!
ಈ ಹಿಂದೆ ಒಂದೊಂದು ಕಡೆಗಳಲ್ಲಿ ಒಂದೊಂದು ಕವಿಗೋಷ್ಠಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲ ಕವಿಗೋಷ್ಠಿಗಳನ್ನೂ ಜಗನ್ಮೋಹನ ಅರಮನೆ ಸಭಾಂಗಣದಲ್ಲೇ ನಡೆಸಲಾಗುತ್ತಿದೆ. ಅ.5ರಂದು ಬೆಳಿಗ್ಗೆ 10.30ಕ್ಕೆ ‘ಪಂಚ ಕಾವ್ಯೋತ್ಸವ’ ನಡೆಯಲಿದ್ದು ಕವಿ ನಾಗತಿಹಳ್ಳಿ ಚಂದ್ರಶೇಖರ್ 6ರಂದು ಬೆಳಿಗ್ಗೆ 10.30ಕ್ಕೆ ‘ಸಮಾನತಾ’ ಕವಿಗೋಷ್ಠಿಯನ್ನು ಸಾಹಿತಿ ದೇವು ಪತ್ತಾರ 7ರಂದು ಬೆಳಿಗ್ಗೆ 10.30ಕ್ಕೆ ‘ಸಂತಸ’ ಕವಿಗೋಷ್ಠಿಯನ್ನು ಹಂ.ಪ. ನಾಗರಾಜಯ್ಯ 8ರಂದು ಬೆಳಿಗ್ಗೆ 10.30ಕ್ಕೆ ‘ಸಮಷ್ಠಿ’ ಕವಿಗೋಷ್ಠಿಯನ್ನು ಕವಿ ಎಚ್.ಎಸ್. ಶಿವಪ್ರಕಾಶ್ 9ರಂದು ಬೆಳಿಗ್ಗೆ 10.30ಕ್ಕೆ ‘ಸಮೃದ್ಧ’ ಕವಿಗೋಷ್ಠಿಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.