ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಉಳಿವಿಗೆ ಬಿಜೆಪಿ– ಜೆಡಿಎಸ್‌ ಸೋಲಿಸಿ: ಇಂದೂಧರ ಹೊನ್ನಾಪುರ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆ
Published 17 ಏಪ್ರಿಲ್ 2024, 14:55 IST
Last Updated 17 ಏಪ್ರಿಲ್ 2024, 14:55 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿ– ಜೆಡಿಎಸ್‌ ಮೈತ್ರಿಕೂಟ ಸೋಲದಿದ್ದರೆ ದೇಶದ ಅಡಿಪಾಯ ಶಾಶ್ವತವಾಗಿ ಬದಲಾಗಲಿದೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಸಂಚಾಲಕ ಇಂದೂಧರ ಹೊನ್ನಾಪುರ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಪ್ರಗತಿಯ ಹಿಮ್ಮುಖ ಚಲನೆ ನಡೆದಿದೆ. ಕಾರ್ಪೊರೇಟ್ ವಲಯ ಲೂಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಸಮಾನತೆಯನ್ನೇ ಜೀವನ ಮಾಡಿಕೊಂಡ ವೈದಿಕ ಶಾಹಿ ಕೂಟ ನಾಗರಿಕರ ಬದುಕು, ಪ್ರೀತಿ, ವಿಶ್ವಾಸವನ್ನು ನಾಶ ಮಾಡಿದೆ’ ಎಂದು ದೂರಿದರು.

‘ಕಳೆದ ಹತ್ತು ವರ್ಷಗಳ ಮೋದಿ ಆಡಳಿತದ ವಿದ್ಯಮಾನಗಳನ್ನು ಗ್ರಹಿಸಿದರೆ, ಈ ಬಾರಿ ಅವರು ಅಧಿಕಾರಕ್ಕೆ ಬಂದರೆ ಮತ್ತೆ ಚುನಾವಣೆಯನ್ನು ನಡೆಸುವುದೇ ಅನುಮಾನವಿದೆ. ಎಲ್ಲ ಸಾರ್ವಜನಿಕ ಸಂಸ್ಥೆಗಳು ನಾಶವಾಗತೊಡಗಿವೆ. ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಉಂಟಾಗಿದೆ. ವ್ಯವಸ್ಥೆಗಳು ಬುಡಮೇಲಾಗಿವೆ. ನಿರುದ್ಯೋಗ, ಬೆಲೆಯೇರಿಕೆ, ತೆರಿಗೆ ಭಯೋತ್ಪಾದನೆ ಅವ್ಯಾಹತವಾಗಿದೆ’ ಎಂದರು.

‘ಇದಲ್ಲದೆ, ದೇಶದಲ್ಲಿ ನಿರುದ್ಯೋಗ ನಿರಾತಂಕವಾಗಿ ಬೆಳೆಯುತ್ತಿದೆ. ಬೆಲೆಯೇರಿಕೆ ಮಿತಿ ಮೀರಿದೆ. ಇದರ ನಡುವೆ ಒಕ್ಕೂಟ ವ್ಯವಸ್ಥೆಗೆ ಅಡ್ಡಿ ಬಂದು ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯುಂಟಾಗಿದೆ. ತೆರಿಗೆ ಭಯೋತ್ಪಾದನೆ ಹೇರಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದೇಶವನ್ನು ಉಳಿಸಿಕೊಳ್ಳಲು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಸುಳ್ಳುಗಳ ವಿಜೃಂಭಣೆಯಲ್ಲಿ ಬಿಜೆಪಿ ಸರ್ಕಾರ ತೊಡಗಿದ್ದು, ಜನತಂತ್ರ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ಧರ್ಮಗಳ ನಡುವೆ ಬೆಂಕಿ ಹಚ್ಚುವ ಅವರನ್ನು ದೂರವಿಡಬೇಕು. ರೈತರ, ಪ್ರಾದೇಶಿಕ ಜನರ ಪಕ್ಷ ಎನ್ನುವ ಜೆಡಿಎಸ್‌ ಕೂಡ ಅವರೊಡನೆ ಸೇರಿದ್ದು, ರೈತರು ಬೀದಿಯಲ್ಲಿ ಹೋರಾಡಿದ್ದನ್ನೂ ಮರೆತು ಬಿಟ್ಟು ಮಾತನಾಡುತ್ತಿದ್ದಾರೆ. ನರೇಂದ್ರ ಮೋದಿ ಮತ್ತು ಕುಮಾರಸ್ವಾಮಿ ಇಬ್ಬರ ಸೋಲು ನಿಶ್ಚಿತ. ಈ ಎರಡೂ ಪಕ್ಷಗಳನ್ನು ವಿರೋಧಿಸುವುದು ಎಲ್ಲರ ಕರ್ತವ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಸಜ್ಜಾಗಿ: ‘ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಸಿದ್ಧರಾಗಿರುವ ಬಿಜೆಪಿ– ಜೆಡಿಎಸ್‌ ಮೈತ್ರಿಯನ್ನು ಹಳ್ಳಿ– ಹಳ್ಳಿಗಳಲ್ಲೂ ವಿರೋಧಿಸಬೇಕು. ದಸಂಸ ಕಾರ್ಯಕರ್ತರು ಪ್ರತಿಯೊಬ್ಬರನ್ನು ಈ ನಿಟ್ಟಿನಲ್ಲಿ ಅಣಿಗೊಳಿಸಲು ಸಿದ್ಧರಾಗಬೇಕು’ ಎಂದು ಮುಖಂಡ ವಿ.ನಾಗರಾಜ ಮನವಿ ಮಾಡಿದರು.

ದಸಂಸ ರಾಜ್ಯ ಸಂಯೋಜಕ ವಿ.ನಾಗರಾಜ್, ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ವಿವಿಧ ಬಣಗಳ ಮುಖಂಡರಾದ ಎಂ.ಸೋಮಶೇಖರ್, ಜೀವನಹಳ್ಳಿ ಆರ್.ವೆಂಕಟೇಶ್, ಬೆನ್ನಿಗಾನಹಳ್ಳಿ ರಾಮಚಂದ್ರ, ದೇವಗಳ್ಳಿ ಸೋಮಶೇಖರ್, ದೊಡ್ಡಿಂದವಾಡಿ ಸಿದ್ದರಾಜು, ಆಲಗೂಡು ಶಿವಕುಮಾರ್, ಕಾರ್ಯ ಬಸವಣ್ಣ, ಕಲ್ಲಹಳ್ಳಿ ಕುಮಾರ್, ಮಲ್ಲಹಳ್ಳಿ ನಾರಾಯಣ್, ಬನ್ನಹಳ್ಳಿ ಸೋಮಣ್ಣ, ಶಂಭುಲಿಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT