ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿ ಗರ್ಜಿಸಿರಲಿಲ್ಲವೇ?: ಜಿ.ಟಿ. ದೇವೇಗೌಡ

Published 30 ಜೂನ್ 2024, 13:04 IST
Last Updated 30 ಜೂನ್ 2024, 13:04 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡ ಗರ್ಜನೆ ಮಾಡಿರಲಿಲ್ಲವೇ?’ ಜೆಡಿಎಸ್‌ ಪ್ರಮುಖ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಕೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಈ ಹಿಂದೆ ಕಾಂಗ್ರೆಸ್ ವೀಕ್ ಆಗಿದ್ದಾಗ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದರು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಶಕ್ತವಾಗಿದ್ದು ಡಿಕೆಶಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಥವಾ ಅವರ ಶಾಸಕರಾರೂ ಹೇಳಿಲ್ಲ. ಶಿವಕುಮಾರ್‌ ಅವರಿಗೆ ಅವಕಾಶ ನೀಡುವಂತೆ ಒಕ್ಕಲಿಗ ಸ್ವಾಮೀಜಿ ಅಭಿಮಾನದಿಂದ ಮನವಿ ಮಾಡಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಮಾಧ್ಯಮದಲ್ಲಿ ಬರುತ್ತಲೇ ಇರುತ್ತದೆ. ಅದರ ಆಧಾರದ ಮೇಲೆ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅದು ದೊಡ್ಡ ಅಪರಾಧವಲ್ಲ’ ಎಂದು ಹೇಳಿದರು.

‘ಅಧಿಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದು ಸುದೀರ್ಘ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಅಧಿಕಾರವನ್ನು ತಕ್ಷಣವೇ ಬಿಟ್ಟು ಬಿಡುತ್ತಾರೆ ಎಂದು ನಾನು ಹೇಳುವುದಿಲ್ಲ. ಬಹುಮತವಿರುವ ಈ ಸರ್ಕಾರವನ್ನು ನಾವು ಬೀಳಿಸುವ ಪ್ರಶ್ನೆಯೇ ಇಲ್ಲ. ಅವರ ಪಕ್ಷದಲ್ಲೇ ಆಂತರಿಕ ಕಚ್ಚಾಟ, ಭಿನ್ನಾಭಿಪ್ರಾಯ ಬಂದರೆ ಸರ್ಕಾರ ಬೀಳಬಹುದು’ ಎಂದರು.

‘ಉತ್ತಮ ಹೊಂದಾಣಿಕೆ ಇದೆ’ (ಚಿತ್ರದುರ್ಗ ವರದಿ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಉತ್ತಮ ಹೊಂದಾಣಿಕೆ ಇದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಭಾನುವಾರ ಹೇಳಿದರು.

‘ತತ್ವ, ಸಿದ್ಧಾಂತದ ಆಧಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಡಿ.ಕೆ.ಶಿವಕುಮಾರ್‌ ಅವರೇ ಸೂಚಿಸಿದ್ದಾರೆ. ಹೀಗಾಗಿ ಈ ವಿಚಾರದ ಚರ್ಚೆ ಅನಗತ್ಯ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಮುಖ್ಯಮಂತ್ರಿ ಬದಲಾವಣೆ ಕುರಿತು ಚಿಂತಿಸಬೇಕಿರುವುದು ಕಾಂಗ್ರೆಸ್‌ ಹೈಕಮಾಂಡ್‌. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವಣ ವಿಚಾರ. ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಮುಂದೆ ಡಿಕೆಶಿ ಅವರಿಗೂ ಅವಕಾಶ ಇದೆ’ ಎಂದರು.

‘ಈ ಹಿಂದೆ ಅನೇಕ ಲಿಂಗಾಯತ ಮುಖಂಡರು ಮುಖ್ಯಮಂತ್ರಿ ಆಗಿದ್ದಾರೆ. ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಮಾತುಗಳನ್ನೂ ನಾವು ಕೇಳುತ್ತಿದ್ದೇವೆ. ಜಿ.ಪರಮೇಶ್ವರ, ಸತೀಶ್ ಜಾರಕಿಹೊಳಿ ಅವರಿಗೂ ಅವಕಾಶಗಳಿವೆ’ ಎಂದು ತಿಳಿಸಿದರು. 

ಜೋಶಿ ಆರೋಪ–(ಹುಬ್ಬಳ್ಳಿ ವರದಿ): ‘ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಮಾತ್ರ ಮೌನ ವಹಿಸಿದ್ದಾರೆ. ಈ ಎಲ್ಲದರ ಹಿಂದೆ ಸಿದ್ದರಾಮಯ್ಯ ಅವರ ಪಾತ್ರ ಇದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದು, ಬಿಡುವುದು ಆ ಪಕ್ಷದ ಆಂತರಿಕ ವಿಷಯ. ಆದರೆ, ಇದನ್ನು ಬಹಿರಂಗವಾಗಿ‌ ಚರ್ಚೆ ಮಾಡುತ್ತಿರುವುದರಿಂದ ಆಡಳಿತ ವ್ಯವಸ್ಥೆ ಮೇಲೆ‌ ಪರಿಣಾಮ ಬೀರುತ್ತಿದೆ’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಬಿಜೆಪಿಯವರ ಕೈವಾಡ ಇದೆ ಎಂಬ ಕಾಂಗ್ರೆಸ್ ಶಾಸಕರ ಆರೋಪ ಬಾಲಿಶವಾಗಿದೆ. ಕಾಂಗ್ರೆಸ್ ಎಡೆಯಲ್ಲಿ ಕತ್ತೆ ಸತ್ತು ಬಿದ್ದರೆ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಜನ ಮೆಚ್ಚಿದ ಮುಖ್ಯಮಂತ್ರಿಗಳಾಗಿದ್ದು, ಉತ್ತಮವಾಗಿ ಕೆಲಸ ಮಾಡುವುದರಿಂದಲೇ ಹೈಕಮಾಂಡ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
–ಡಾ.ಅಜಯ್‌ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಡಿಸಿಎಂ ವಿಚಾರವಾಗಿ ಹೊಸ ವ್ಯಾಖ್ಯಾನ ಮಾಡುವುದು ಕಾಂಗ್ರೆಸ್‌ನಲ್ಲಿ ನಡೆದಿದೆ. ಆದರೆ, ಅಸಲಿ ರಾಜಕಾರಣ ಬೇರೆಯೇ ಇದೆ. ಎಷ್ಟು ಜನರಿಗೆ ಡಿಸಿಎಂ ಮಾಡುತ್ತಾರೆ ಎಂದು ಕಾದು ನೋಡೋಣ.
–ಬಸವರಾಜ ಬೊಮ್ಮಾಯಿ, ಸಂಸದ
ಕೊಹ್ಲಿ-ರೋಹಿತ್ ಶರ್ಮಾ ಸೇರಿ ಟಿ–20 ಕ್ರಿಕೆಟ್‌ ವಿಶ್ವಕಪ್ ಕಿರೀಟ ಗೆದ್ದುಕೊಟ್ಟಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಕರ್ನಾಟಕಕ್ಕೆ ಕೊಹ್ಲಿ–ರೋಹಿತ್‌ ಜೋಡಿ ಇದ್ದಂತೆ.
–ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠ
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಒಕ್ಕಲಿಗರು, ದಲಿತರು, ಲಿಂಗಾಯತರು, ಸಿಎಂ ಸ್ಥಾನ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ. ಹೈಕಮಾಂಡ್ ತೀರ್ಮಾನಿಸುತ್ತದೆ.
– ಜಮೀರ್‌ ಅಹಮದ್‌ ಖಾನ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT