ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಕುಡಿಯುವ ನೀರು ಚರಂಡಿಗೆ ಪೋಲು

Published 5 ಸೆಪ್ಟೆಂಬರ್ 2023, 12:39 IST
Last Updated 5 ಸೆಪ್ಟೆಂಬರ್ 2023, 12:39 IST
ಅಕ್ಷರ ಗಾತ್ರ

ಹುಣಸೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ಕಾವೇರಿ ನೀರು ಇಲ್ಲಿನ ನಗರಸಭೆ ನೀರು ಸಂಗ್ರಹ ಘಟಕದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿ ಚರಂಡಿ ಸೇರುತ್ತಿದೆ.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ವಾರದಲ್ಲಿ ಎರಡು ಮೂರು ದಿನ ಬಿಡುವ ವ್ಯವಸ್ಥೆ ಇದ್ದು, ನಿವಾಸಿಗರು ಪರದಾಡುತ್ತಿದ್ದಾರೆ. ಆದರೆ ಇದೀಗ ಶುದ್ಧ ನೀರು ಸಮರ್ಪಕವಾಗಿ ಸಂಗ್ರಹಿಸುವಲ್ಲಿ ನಗರಸಭೆ ವಿಫಲವಾಗಿದ್ದು, ಚರಂಡಿಗೆ ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ನಗರಸಭೆ ಸದಸ್ಯ ವಿವೇಕ್ ಮಾತನಾಡಿ, ‘ನಗರಸಭೆ ವ್ಯಾಪ್ತಿಯ 60 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಹರಸಾಹಸ ಪಡಬೇಕಾಗಿದೆ. ನೀರು ನಿರ್ವಹಣೆ ಎಂಜಿನಿಯರಿಂಗ್ ವಿಭಾಗ ಸಮರ್ಪಕವಾಗಿ ನಿರ್ವಹಣೆ ಮಾಡದೆ, ನೀರು ಸಂಗ್ರಹ ಘಟಕದ ವಾಲ್‌ಗಳು ಶಿಥಿಲವಾಗಿ 5 ಲಕ್ಷ ಲೀಟರ್ ನೀರು ಸಂಗ್ರಹ ಟ್ಯಾಂಕ್‌ನಿಂದ ವ್ಯರ್ಥವಾಗಿ ಚರಂಡಿ ಸೇರುವ ಬಗ್ಗೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸದೆ ನಿತ್ಯ ನೀರು ಹರಿದು ಚರಂಡಿ ಸೇರುತಿದೆ’ ಎಂದು ದೂರಿದರು.

ನಗರಸಭೆ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಶರ್ಮಿಳಾ ಮಾತನಾಡಿ, ‘ನೀರು ಸಂಗ್ರಹ ಘಟಕದಲ್ಲಿ 2010ರಲ್ಲಿ ವಾಲ್ ಅಳವಡಿಸಲಾಗಿದೆ. ಘಟಕದಲ್ಲಿರುವ 5 ಲಕ್ಷ ಸಾಮರ್ಥ್ಯದ ಟ್ಯಾಂಕ್‌ಗೆ ನೀರು ಸೇರಿದಾಗ ಒತ್ತಡಕ್ಕೆ ವಾಲ್ ಒಡೆದು ನೀರು ಸೋರುತ್ತಿದೆ. ಈ ಸಂಬಂಧ ಮೈಸೂರಿನ ವಾಟರ್ ಬೋರ್ಡ್ ವಿಭಾಗಕ್ಕೆ ಈಗಾಗಲೇ ಮಾಹಿತಿ ನೀಡಿದ್ದು, ಮುಂದಿನ ಎರಡು ದಿನದೊಳಗೆ ಪರ್ಯಾಯ ವಾಲ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ತತ್ವಾರ ಎದುರಿಸುತ್ತಿದ್ದು ಈ ಸಮಯದಲ್ಲೂ ನಗರಸಭೆ ನೀರು ನಿರ್ವಹಣೆ ಸಮರ್ಪಕವಾಗಿ ಮಾಡದೆ ಶುದ್ಧ ಕುಡಿಯುವ ನೀರು ಚರಂಡಿಗೆ ಹರಿದು ಹೋಗುತ್ತಿರುವುದು ನಗರಸಭೆ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಸುನಿಲ್ ಮಾರುತಿ ಬಡಾವಣೆ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT