ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮುಡಾ: ಖಾತೆ ವರ್ಗಾವಣೆಗೆ ಆನ್‌ಲೈನ್‌ ಪಾವತಿ ಕಡ್ಡಾಯ

Published 10 ನವೆಂಬರ್ 2023, 7:09 IST
Last Updated 10 ನವೆಂಬರ್ 2023, 7:09 IST
ಅಕ್ಷರ ಗಾತ್ರ

ಮೈಸೂರು: ನಿವೇಶನ ಖಾತಾ ವರ್ಗಾವಣೆಗೆ ಶುಲ್ಕ ಪಾವತಿಯ ಬ್ಯಾಂಕ್‌ ಚಲನ್‌ ಅನ್ನು ಅರ್ಜಿದಾರರು ನಕಲು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಎಲ್ಲ ನಗದು ರೂಪದ ಶುಲ್ಕ ಪಾವತಿಯನ್ನು ರದ್ದುಗೊಳಿಸಿದೆ. ಆನ್‌ಲೈನ್‌, ಚೆಕ್‌, ಡಿಡಿ ಪಾವತಿ ಕಡ್ಡಾಯಗೊಳಿಸಿದ್ದು, ಕ್ಯೂಆರ್‌ ಕೋಡ್‌ ಮೂಲಕ ಶುಲ್ಕ ನೀಡುವ ಹೊಸ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮವಹಿಸಿದೆ. ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೇ ಈ ವ್ಯವಸ್ಥೆ ಹೊಸದು.

ಚಲನ್ ನಕಲು ಮಾಡಿರುವ ಪ್ರಕರಣಗಳು ಹಲವು ವರ್ಷಗಳಿಂದ ಪ್ರಾಧಿಕಾರದಲ್ಲಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವ ಕಾರಣ ಇದೇ ಜನವರಿಯಿಂದ ಎಲ್ಲ ಶುಲ್ಕ ಪಾವತಿಗಳ ಬಗ್ಗೆ ಪರಿಶೀಲನೆಗೆ ತನಿಖಾ ತಂಡವನ್ನು ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್ ರಚಿಸಿದ್ದಾರೆ. ಈ ಪರಿಶೀಲನೆ ನಂತರ ಹಿಂದಿನ ವರ್ಷಗಳ ಎಲ್ಲ ವಹಿವಾಟನ್ನು ತಂಡ ತಪಾಸಣೆ ಮಾಡಲಿದೆ.

ನಗರ ಯೋಜನೆ ಸದಸ್ಯ ಆರ್‌.ಶೇಷ, ಕಾರ್ಯದರ್ಶಿ ಜೆ.ಡಿ.ಶೇಖರ್, ಎಇಇ ಕೆ.ಆರ್‌.ಮಹೇಶ್‌ ಹಾಗೂ ಮುಖ್ಯ ಲೆಕ್ಕಾಧಿಕಾರಿ ಮುತ್ತಾ ತನಿಖಾ ತಂಡದಲ್ಲಿದ್ದು, ಇದೀಗ ಅವರು ಬೆಳಕಿಗೆ ತಂದ 5 ನಕಲು ಪ್ರಕರಣಗಳಲ್ಲಿ 7 ಮಂದಿ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ. 

ನಗದು ಜಮಾ ಆಗಿರಲಿಲ್ಲ: ‘7 ಮಂದಿ ಅರ್ಜಿದಾರರು ಬ್ಯಾಂಕ್‌ ಆಫ್‌ ಬರೋಡದ ಚಲನ್‌ ಜೆರಾಕ್ಸ್‌ ಪ್ರತಿಯನ್ನು ದಾಖಲೆಗಳೊಂದಿಗೆ ಲಗತ್ತಿಸಿದ್ದರು. ಚಲನ್‌ ಆಧರಿಸಿ ಅವರಿಗೆ ವರ್ಗಾವಣೆ ಪತ್ರ ನೀಡಲಾಗಿತ್ತು. ‍ಆದರೆ, ಚಲನ್‌ನ ಸಹಿ ಹಾಗೂ ಮೊಹರು ತಾಳೆಯಾಗುತ್ತಿಲ್ಲ. ಅಲ್ಲದೇ, ನಗದು ಜಮಾ ಆಗಿರಲಿಲ್ಲ’ ಎಂದು ಜಿ.ಟಿ.ದಿನೇಶ್‌ ಕುಮಾರ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಧಿಕಾರಕ್ಕೆ ಯಾವುದೇ ಕಪ್ಪುಚುಕ್ಕೆ ಬರಬಾರದು. ಹೀಗಾಗಿ ನಾಲ್ವರ ತನಿಖಾ ತಂಡ ರಚಿಸಿ, ಎಲ್ಲ ವಿಭಾಗಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಮಧ್ಯವರ್ತಿಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿಯಿಂದಲೂ ಈ ಪ್ರಮಾದ ನಡೆದಿರುವ ಶಂಕೆಯಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ನಿವೇಶನಗಳಿಗೆ ಸಂಬಂಧಿಸಿದ ಕಡತಕ್ಕೆ ಅಧಿಕಾರಿಯ ಸಹಿಯನ್ನು ನಕಲು ಮಾಡಿರುವ ಮತ್ತೊಂದು ಪ್ರಕರಣದಲ್ಲಿ ಪ್ರಾಧಿಕಾರದ ನೌಕರ ಎಂ.ಎಸ್‌.ನಂದೀಶ್‌ ಅವರಿಗೆ ಕಡ್ಡಾಯ ರಜೆ ನೀಡಲಾಗಿದ್ದು, ಮತ್ತೊಬ್ಬ ಹೊರಗುತ್ತಿಗೆ ನೌಕರ ಗುರುದತ್‌ ಎಂಬವರನ್ನು  ಕೆಲಸದಿಂದ ತೆಗೆಯಲಾಗಿದೆ’ ಎಂದು ತಿಳಿಸಿದರು.

‘ಈ ಎರಡೂ ಪ್ರಕರಣದ ನಂತರ ಹೊರಗುತ್ತಿಗೆ ನೌಕರರನ್ನು ವಿವಿಧ ವಿಭಾಗಗಳಿಗೆ ಪಾಳಿ ಆಧಾರದಲ್ಲಿ ಬದಲಿಸಲಾಗಿದೆ. ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದ್ದು, ಅವರು ಮಹಜರು ನಡೆಸುತ್ತಿದ್ದಾರೆ. ಹೊರಗುತ್ತಿಗೆ ನೌಕರರ ವಿರುದ್ಧವೂ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದರು. 

ಜಿ.ಟಿ.ದಿನೇಶ್‌ಕುಮಾರ್‌
ಜಿ.ಟಿ.ದಿನೇಶ್‌ಕುಮಾರ್‌
ತನಿಖಾ ತಂಡ ರಚನೆ: ಪರಿಶೀಲನೆ ಹೊರಗುತ್ತಿಗೆ ನೌಕರರ ಮೇಲೂ ಅನುಮಾನ ಪ್ರತ್ಯೇಕ ಪ್ರಕರಣ ದಾಖಲಿಸಲು ಕ್ರಮ: ಆಯುಕ್ತ
ಕ್ಯೂರ್‌ ಕೋಡ್‌ ಆಧರಿಸಿದ ಹೊಸ ಇ–ಪಾವತಿ ವ್ಯವಸ್ಥೆ ಜಾರಿಗೊಳಿಸುತ್ತಿದ್ದು ಎಲ್ಲ ‍ಪಾವತಿ ವಹಿವಾಟು ಪಾರದರ್ಶಕವಾಗಲಿದೆ
ಜಿ.ಟಿ.ದಿನೇಶ್‌ಕುಮಾರ್ ಮುಡಾ ಆಯುಕ್ತ
ಪ್ರಕರಣವೇನು?
ಖಾತೆ ವರ್ಗಾವಣೆಯ ಶುಲ್ಕ ಪಾವತಿಯ ಬ್ಯಾಂಕ್‌ ಚಲನ್‌ ಅನ್ನು ನಕಲು ಮಾಡಿದ ಆರೋಪದ ಮೇಲೆ ಅರ್ಜಿದಾರರಾದ ಎಂ.ಎಲ್‌.ಹುಂಡಿ ಗ್ರಾಮದ ಮೋಹನ್‌ಕುಮಾರ್ ಶ್ಯಾದನಹಳ್ಳಿಯ ಗಾಲಿ ಆನಂದ ರೆಡ್ಡಿ ಹೆಬ್ಬಾಳದ ಆರ್‌.ಯೋಗೇಶ್‌ ಪ್ರಸಾದ್‌ ನಜರಾಬಾದ್‌ನ ಯು.ಆರ್.ಗಿರೀಶ್‌ ರಂಜಿತಾ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಸಿ.ಡಿ.ವೇಣುಗೋಪಾಲ್ ಸಿ.ವಿ.ಅನುರಾಧಾ ವಿರುದ್ಧ ಮುಡಾ ಪ್ರಕರಣ ದಾಖಲಿಸಿದೆ. ಅರ್ಜಿದಾರರ ನಕಲಿ ಶುಲ್ಕ ಪಾವತಿಯ ಒಟ್ಟು ಮೊತ್ತ ₹ 82069 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT