ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವಾಸಿ ಪ್ರತಿಕ್ರಿಯೆ ನೀರಸ, ಗ್ರಾಮೀಣರಲ್ಲಿ ಉತ್ಸಾಹ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸರಾಸರಿ ಶೇ 70.62ರಷ್ಟು ಮತದಾನ
ಎಂ. ಮಹೇಶ
Published 28 ಏಪ್ರಿಲ್ 2024, 5:45 IST
Last Updated 28 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸರಾಸರಿ ಶೇ 70.62ರಷ್ಟು ಮತದಾನವಾಗಿದೆ. ಹೋದ ಚುನಾವಣೆಗೆ ಹೋಲಿಸಿದರೆ ಪ್ರಮಾಣದಲ್ಲಿ ಗಣನೀಯ ಏರಿಕೆಯೇನೂ ಕಂಡುಬಂದಿಲ್ಲ. ಹಕ್ಕು ಚಲಾವಣೆ ಬಗ್ಗೆ ನಗರವಾಸಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮೀಣರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ.

ಒಟ್ಟು 20,92,222 ಮತದಾರರಲ್ಲಿ 14,77,571 ಮಂದಿ ಮತದಾನ ಮಾಡಿದ್ದಾರೆ. ಪುರುಷರಲ್ಲಿ ಶೇ 71ರಷ್ಟು ಮಂದಿ, ಮಹಿಳೆಯರಲ್ಲಿ ಶೇ 69.90, ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಶೇ 21.20ರಷ್ಟು (184 ಮಂದಿಯಲ್ಲಿ 39) ಮಂದಿ ಮತ ಚಲಾಯಿಸಿದ್ದಾರೆ.

10,26,324 ಪುರುಷ ಮತದಾರರ ಪೈಕಿ 7,32,605 ಮತ್ತು 10,65,714 ಮಹಿಳೆಯರ ಪೈಕಿ 7,44,927 ಮಂದಿ ಮತದಾನ ಮಾಡಿದ್ದಾರೆ.

ನೋಂದಾಯಿಸಿದ ಒಟ್ಟು ಮತದಾರರ ಪೈಕಿ ಮಹಿಳೆಯರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಆದರೆ, ಮತ ಚಲಾಯಿಸಿದವರ ಪ್ರಮಾಣದಲ್ಲಿ ಪುರುಷರ ಸಂಖ್ಯೆ ಜಾಸ್ತಿ ಇದೆ. ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರಗಳ ಸರಾಸರಿ ಮತದಾನ ಶೇ 71.87ರಷ್ಟಾಗಿತ್ತು. ಈ ಬಾರಿ ಅದಕ್ಕಿಂತಲೂ ಕಡಿಮೆ ದಾಖಲಾಗಿದೆ.

ಶೇ 61ನ್ನೂ ದಾಟಿಲ್ಲ!: ವಿದ್ಯಾವಂತರು, ಪ್ರಜ್ಞಾವಂತರು ‘ಎನಿಸಿಕೊಂಡಿರುವ’ ನಗರದ ಹಲವು ಮಂದಿ ಜನತಂತ್ರದ ಹಬ್ಬದಿಂದ ದೂರ ಉಳಿದಿದ್ದಾರೆ. ನಗರ ಪ್ರದೇಶವನ್ನೇ ಒಳಗೊಂಡಿರುವ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಕಳವಳಕಾರಿಯಾಗಿದೆ. ಕೃಷ್ಣರಾಜ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಪ್ರಮಾಣ ಶೇ 61ನ್ನೂ ತಲುಪಿಲ್ಲ! ಅಲ್ಲಿನ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವಲ್ಲಿ ನಡೆದ ಪ್ರಯತ್ನ ಫಲ ಕೊಟ್ಟಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳನ್ನೇ ಒಳಗೊಂಡಿರುವ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ ಪ್ರಮಾಣ ಶೇ 72ರಷ್ಟು ದಾಟಿದೆ.

ಈ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ 67.30ರಷ್ಟು ಮತದಾನವಾಗಿತ್ತು. ಅದು 2019ರಲ್ಲಿ ಶೇ 69.51ಕ್ಕೆ ಏರಿಕೆ ಆಗಿತ್ತು. ಜಿಲ್ಲಾಡಳಿತವು ಈ ಬಾರಿ ಶೇ 85ರಷ್ಟು ತಲುಪುವ ಗುರಿ ಇಟ್ಟುಕೊಂಡಿತ್ತು.

ಇದಕ್ಕಾಗಿ ಸ್ವೀಪ್‌ ಸಮಿತಿಯ ಮೂಲಕ ‘ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ’ (ಸ್ವೀಪ್‌) ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಸಲಾಗಿತ್ತು. ನಗರದಲ್ಲೂ ಹತ್ತು ಹಲವು ಕಾರ್ಯಕ್ರಮಗಳು ನಡೆದಿದ್ದವು. ವಿವಿಧ ಕ್ಷೇತ್ರದ ಸಾಧಕರನ್ನು ರಾಯಭಾರಿಗಳನ್ನಾಗಿ ಮಾಡಿಕೊಳ್ಳಲಾಗಿತ್ತು. ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲೂ ಪ್ರಚಾರ ನಡೆಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳಿಂದಲೂ ಹಲವೆಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಇದರಿಂದ ಅಂತಹ ದೊಡ್ಡ ಪರಿಣಾಮವೇನೂ ಆಗಿಲ್ಲ. ಕೊಂಚವಷ್ಟೆ ಹೆಚ್ಚಾಗಿದ್ದಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಹಲವು ಕಾರಣ?: ವಾರಾಂತ್ಯದಲ್ಲಿ ಮತದಾನ ನಡೆದದ್ದು, ಬಿರುಬಿಸಿಲಿನ ಪರಿಣಾಮವಾಗಿ ನಗರದ ಮತದಾರರು ನಿರೀಕ್ಷಿಸಿದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬರಲಿಲ್ಲ. ಇದು ಮತದಾನದ ಒಟ್ಟಾರೆ ಸರಾಸರಿ ಪ್ರಮಾಣದ ಮೇಲೆ ‍ಪರಿಣಾಮ ಬೀರಿದೆ. ಅದರಲ್ಲೂ ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ‘ಹಕ್ಕುದಾರ’ರಿಂದ ಹೆಚ್ಚಿನ ಒಲವು ವ್ಯಕ್ತವಾಗಿಲ್ಲದಿರುವುದನ್ನು ಅಂಕಿ–ಅಂಶಗಳಿಂದ ಗುರುತಿಸಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ 80.19ರಷ್ಟು ಮತ ಚಲಾವಣೆಯಾಗಿದೆ. ನಂತರದ ಸ್ಥಾನದಲ್ಲಿ ಹುಣಸೂರು (ಶೇ 77.91), ಮಡಿಕೇರಿ (ಶೇ 75.41), ವಿರಾಜಪೇಟೆ (ಶೇ 73.88), ಚಾಮುಂಡೇಶ್ವರಿ (ಶೇ 73.40) ವಿಧಾನಸಭಾ ಕ್ಷೇತ್ರಗಳಿವೆ. ಕೃಷ್ಣರಾಜದಲ್ಲಿ ಅತಿ ಕಡಿಮೆ ಎಂದರೆ ಶೇ 60.87ರಷ್ಟು ಮಾತ್ರವೇ ಮತದಾನವಾಗಿದೆ.

ಮತದಾನ ಪ್ರಕ್ರಿಯೆ ಮುಗಿದ ನಂತರ, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಂತ ಜೋಸೆಫ್‌ ಕಾನ್ವೆಂಟ್‌, ವಿರಾಜಪೇಟೆ–ವಿರಾಜಪೇಟೆಯ ಸೇಂಟ್ ಅನೆಸ್ ಪ್ರೌಢಶಾಲೆ, ಪಿರಿಯಾಪಟ್ಟಣ– ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ಪುಷ್ಪ ಇಂಗ್ಲಿಷ್ ಮಾಧ್ಯಮ ಶಾಲೆ, ಹುಣಸೂರು– ಹುಣಸೂರಿನ ಸೇಂಟ್ ಜೋಸೆಫ್‌ ಪಿಯು ಕಾಲೇಜು, ಚಾಮುಂಡೇಶ್ವರಿ– ಮೈಸೂರಿನ ಜೆಎಲ್‌ಬಿ ರಸ್ತೆಯ ಮಹಾರಾಣಿ ಮಹಿಳಾ ಕಲಾ ಕಾಲೇಜು, ಕೃಷ್ಣರಾಜ– ಮೈಸೂರಿನ ಜೆಎಲ್‌ಬಿ ರಸ್ತೆಯ ಮಹಾರಾಜ ಸರ್ಕಾರಿ ಪಿಯು ಕಾಲೇಜು, ಚಾಮರಾಜ– ಮೈಸೂರಿನ ಬೇಡನ್‌ ಪೊವೆಲ್‌ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೈಸೂರಿನ ಊಟಿ ರಸ್ತೆಯ ಶಿವರಾತ್ರೀಶ್ವರ (ಜೆಎಸ್‌ಎಸ್‌) ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ‘ಡಿಮಸ್ಟರಿಂಗ್‌’ ಕಾರ್ಯ ನಡೆಯಿತು. ಬಳಿಕ ಮತಯಂತ್ರಗಳನ್ನು ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನ ಭದ್ರತಾ ಕೊಠಡಿಗೆ ಸಾಗಿಸಲಾಗಿದೆ.

ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್‌ನ ಎಂ.ಲಕ್ಷ್ಮಣ ಸೇರಿದಂತೆ 18 ಮಂದಿಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಮತ ಎಣಿಕೆ ಕಾರ್ಯ ಜೂನ್‌ 4ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT