ಮೈಸೂರು: ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ‘ಆರ್.ಧ್ರುವನಾರಾಯಣ ನುಡಿನಮನ’ ಸಭೆಯಲ್ಲಿ ನೆನಪುಗಳ ಭಾವಲೋಕ ತೆರೆದಿತ್ತು. ಧ್ರುವನಾರಾಯಣ ಅವರ ಒಡನಾಟವನ್ನು ನೆನೆದ ಮುಖಂಡರು, ಕಾರ್ಯಕರ್ತರ ಕಣ್ಣಾಲಿಗಳು ತುಂಬಿಬಂದವು.
ಕುವೆಂಪು ಅವರ ವಿಶ್ವಮಾನವ ಗೀತೆ ‘ಓ ನನ್ನ ಚೇತನ’ ಹಾಡುತ್ತಿದ್ದ ರಂಗಕರ್ಮಿ ಎಚ್.ಜನಾರ್ಧನ, ‘ಅನಂತ ನೀ ಅನಂತ ವಾಗು, ಆಗು ಆಗು ಆಗು.. ಅನಂತವಾಗು’ ಎನ್ನುತ್ತಲೇ ಉಮ್ಮಳಿಸಿ ಬಂದ ದುಃಖವನ್ನು ತಡೆದರೂ, ಗೀತೆ ಕೇಳಿದ ಅಭಿಮಾನಿಗಳು ಕಣ್ಣೀರಾದರು.
ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಸಮುದಾಯ ಮತ್ತು ರಾಜಕೀಯ ನಿಷ್ಠೆಗಳೆರಡೂ ಬೇರ್ಪಡಿಸಲಾಗದಂಥ ತಾತ್ವಿಕತೆಯು ಧ್ರುವನಾರಾಯಣ ಅವರ ಹೃದಯದಲ್ಲಿ ಅಂತಃರ್ಗತವಾಗಿತ್ತು. ಸ್ವಾರ್ಥಕ್ಕಾಗಿ ಬದುಕದೇ ಪರಾರ್ಥದಿಂದ ಕೆಲಸ ಮಾಡಿದ ಅವರ ನಿರ್ಗಮನವು ಶೂನ್ಯ ಆವರಿಸಿದೆ’ ಎಂದರು.
‘ಹುಟ್ಟಿದ ಮೂಲ, ಸಮುದಾಯದ ಚರಿತ್ರೆಯನ್ನು ಮರೆತಿರಲಿಲ್ಲ. ದೇಶದ ಚರಿತ್ರೆ ನೆನಪುಗಳನ್ನು ಕಳೆದುಕೊಂಡಿರಲಿಲ್ಲ. ಜನರ ಸಂಕಷ್ಟಗಳಿಗೆ ಹಲವು ರಾಜಕಾರಣಿಗಳಂತೆ ಕಣ್ಣು, ಕಿವಿ ಕಳೆದುಕೊಂಡವರಲ್ಲ. ನಡೆದು ಬಂದ ದಾರಿ ನೆನಪು ಅವರಲ್ಲಿ ಮಾಸಿರಲಿಲ್ಲ. ಪ್ರತಿ ಮಾತಿನಲ್ಲಿ ಸಜ್ಜನಿಕೆ ವ್ಯಕ್ತವಾಗುತ್ತಿತ್ತು. ಮಾತು ಮೃದುವಾಗಿದ್ದರೂ, ನಿಲುವುಗಳು ನಿಷ್ಠುರವಾಗಿದ್ದವು’ ಎಂದು ಸ್ಮರಿಸಿದರು.
ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್ ಮಾತನಾಡಿ, ‘ಮೈಸೂರು, ಮಂಗಳೂರು ಭಾಗದ ಚುನಾವಣಾ ಉಸ್ತುವಾರಿ ವಹಿಸಿಕೊಂಡಾಗ ಧ್ರುವನಾರಾಯಣ ಅವರೊಂದಿಗೆ ಕ್ಷೇತ್ರ ಪ್ರವಾಸ ಮಾಡಿದ್ದೆ. ಒಟ್ಟಿಗೆ ಊಟ ಮಾಡಿದ್ದೇವೆ, ನಡೆದಿದ್ದೇವೆ, ಕಿರಿಯ ಸೋದರನಂತೆ ನೋಡಿಕೊಂಡರು’ ಎಂದು ಸ್ಮರಿಸಿದರು.
‘ಯಾರೊಂದಿಗೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ನಗುತ್ತಲೇ ಉತ್ತರಿಸಿ ಎಲ್ಲರನ್ನು ಗೆಲ್ಲುತ್ತಿದ್ದರು. ಅಂಬೇಡ್ಕರ್ ವಾದಿ, ಗಾಂಧಿವಾದಿಯಾಗಿದ್ದ ಅವರನ್ನು ಎಲ್ಲ ಪಕ್ಷದವರೂ ಗೌರವಿಸುತ್ತಿದ್ದರು. ಎಲ್ಲ ರಾಜಕಾರಣಿಗಳೂ ಅನುಸರಿಸಬೇಕಾದ ಮಾದರಿ ವ್ಯಕ್ತಿತ್ವವಾಗಿತ್ತು’ ಎಂದರು.
ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ‘ಕವಲಂದೆ ಹೋಬಳಿಯ 56 ಗ್ರಾಮಗಳಿಗೆ ಕಬಿನಿ ನೀರು ತಂದು ಕುಡಿಯುವ ನೀರು ಸಮಸ್ಯೆ ಬಗೆಹರಿಸಿದರು’ ಎಂದು ನೆನೆದರು.
ಬೋಧಿದತ್ತ ಭಂತೇಜಿ ಪಂಚಶೀಲ ಬೋಧಿಸಿದರು. ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಖಂಡರಾದ ಕಾಗಲವಾಡಿ ಶಿವಣ್ಣ, ರಮೇಶ್ ಬಂಡಿಸಿದ್ದೇಗೌಡ, ವಾಸು, ಸಂದೇಶ್ ನಾಗರಾಜ್, ಪುರುಷೋತ್ತಮ್, ಅಯೂಬ್ ಖಾನ್, ಡಿ.ರವಿಂಶಕರ್, ಎ.ಆರ್.ಕೃಷ್ಣಮೂರ್ತಿ, ಲೇಖಕ ಪ್ರೊ.ಕಾಳೇಗೌಡ ನಾಗವಾರ, ಪತ್ರಕರ್ತರಾದ ಕೆ.ದೀಪಕ್, ಟಿ.ಗುರುರಾಜ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.
‘ಪಕ್ಷ ನಿಷ್ಠ ಸರಳ ರಾಜಕಾರಣಿ’: ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಆಡಂಬರವಿಲ್ಲದೇ ಸರಳವಾಗಿ ಬದುಕಿದ ಧ್ರುವನಾರಾಯಣ ಪಕ್ಷಕ್ಕೆ ನಿಷ್ಠರಾದ ಬದ್ಧ ರಾಜಕಾರಣಿಯಾಗಿದ್ದರು’ ಎಂದರು.
‘ತಂದೆ ಸಿದ್ದರಾಮಯ್ಯ ಯಾವುದೇ ಕಾರ್ಯಕ್ರಮಕ್ಕೆ ಬಂದರೂ, ಧ್ರುವ ಇದ್ದಾನಾ? ಎಂದು ಮೊದಲು ಕೇಳುತ್ತಿದ್ದರು. ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಬೇಕಿದ್ದರೆ, ಧ್ರುವನಾರಾಯಣ ಅವರಿಗೇ ಮೊದಲು ಕರೆ ಮಾಡುತ್ತಿದ್ದರು’ ಎಂದರು.
‘ರಾಜಕೀಯದಲ್ಲಿ ಉತ್ತಮ ಭವಿಷ್ಯವಿದ್ದ ಅವರಿಗೆ ಪಕ್ಷದ ಪ್ರಭಾವಿ ರಾಜಕಾರಣಿ ಆಗಿದ್ದರು. ಅವರಿಲ್ಲದೇ ಅನಾಥಭಾವ ಕಾಡುತ್ತಿದೆ. ಒತ್ತಡ ನಿಭಾಯಿಸಲಾಗದ ದುರ್ಬಲರಾಗಿರಲಿಲ್ಲ. ಟಿಕೆಟ್ ಸಿಗುವ ಸಾಧ್ಯತೆಯೂ ಇತ್ತು. ಆದರೆ, ಕೆಲವರು ಸಾವಿನಲ್ಲೂ ರಾಜಕೀಯ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.