ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಗೆ ಒಲಿಯುವ ಬೆಟ್ಟದಪುರ ಏಣಿ ಹನುಮಂತರಾಯ

ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನ; 15 ಅಡಿ ಎತ್ತರದ ಕಲ್ಲಿನ ಮೇಲೆ ಕೆತ್ತನೆ
Last Updated 2 ಜನವರಿ 2022, 4:52 IST
ಅಕ್ಷರ ಗಾತ್ರ

ಬೆಟ್ಟದಪುರ: ಮೈಸೂರಿನಿಂದ 84 ಕಿ.ಮೀ ದೂರವಿರುವ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಈ ಬೆಟ್ಟದ ತಪ್ಪಲಿನಲ್ಲೇ ಇರುವ ಏಣಿ ಹನುಮಂತರಾಯ ದೇವಸ್ಥಾನ ಭಕ್ತರ ನೆಚ್ಚಿನ ತಾಣವಾಗಿದೆ. ಭಕ್ತಿಗೆ ಒಲಿಯುವ ಹನುಮಂತನೆಂದೇ ಪ್ರಸಿದ್ಧಿ ಪಡೆದಿದೆ.

ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೇ, ಬೆಟ್ಟದ ತಪ್ಪಲಿನ ಎಡಭಾಗಕ್ಕೆ ಕಾಲ್ನಡಿಗೆ ಯಲ್ಲಿ ತೆರಳಬೇಕು. ಬಲಭಾಗಕ್ಕೆ ಏಣಿ ಹನುಮಂತರಾಯ ದೇವಾಲಯವಿದ್ದು, 120 ಮೆಟ್ಟಿಲುಗಳನ್ನು ಏರಿ ದೇವಾಲಯಕ್ಕೆ ಪ್ರವೇಶ ಮಾಡಬಹುದು.

ಈ ದೇವಾಲಯದಲ್ಲಿ 15 ಅಡಿಗಳಷ್ಟು ಎತ್ತರದ ಕಲ್ಲಿನ ಮೇಲೆ ಕೆತ್ತಿದ ಆಂಜನೇಯ ವಿಗ್ರಹವಿದೆ. ಇದು ಲಕ್ಷ್ಮಣನು ಆಂಜನೇಯನ ಭುಜದ ಮೇಲೆ ಕುಳಿತು ಇಂದ್ರಜಿತ್ತನೊಂದಿಗೆ ಯುದ್ಧ ಮಾಡುತ್ತಿರುವುದನ್ನು ಸೂಚಿಸುತ್ತದೆ. ವಿಗ್ರಹದ ಕಲ್ಲು ತುಂಬಾ ಎತ್ತರಕ್ಕೆ ಬೆಳೆಯುತ್ತಿರುವುದರಿಂದ ಅದಕ್ಕೆ ಏಣಿ ಹನುಮಂತರಾಯ ಎಂದು ಕರೆಯಲಾಗಿದೆ. ಈ ಕಲ್ಲು ಬೆಳೆಯುತ್ತಿದ್ದ ರಿಂದ ನೆತ್ತಿಯ ಮೇಲೆ ಕಬ್ಬಿಣದ ಮೊಳೆಗಳನ್ನು ಹೊಡೆದು ಅದರ ಬೆಳವಣಿಗೆಯನ್ನು ನಿಲ್ಲಿಸಲಾಗಿದೆ ಎಂಬ ಪ್ರತೀತಿ ಇದೆ.

ಈ ದೇವಸ್ಥಾನದ ಪಕ್ಕದಲ್ಲೇ ಶಿವಲಿಂಗವಿದ್ದು, ಅದರ ಮುಂದೆ ಗೂಡನ್ನು ಕೊರೆದು ಗಣಪತಿ ಮತ್ತು ಶಿವ ಪಾರ್ವತಿ ವಿಗ್ರಹಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಬಲಭಾಗದ ಗೋಡೆ ಪಕ್ಕದ ಬಂಡೆ ಮೇಲೆ ಗಣಪತಿ ಜಾರುಗುಪ್ಪೆ ಆಟ ಆಡುತ್ತಿದ್ದ ಎಂಬ ಪ್ರತೀತಿ ಇದೆ. ಈ ದೇವಾಲಯದ ಸುತ್ತ ಸಣ್ಣಸಣ್ಣ ಗುಹೆಗಳು ಕಾಣಸಿಗುತ್ತವೆ.

ಇಲ್ಲಿ ಪ್ರತಿ ಮಂಗಳವಾರ ಹಾಗೂ ಶನಿವಾರ ಮಾರ್ವಾಡಿ ಜನಾಂಗದವರು ವಿಶೇಷ ಪೂಜೆ ಸಲ್ಲಿಸುತ್ತಾರೆ. ವಾಯು ವಿಹಾರಕ್ಕೆಂದು ಬರುವವರು ದೇವಸ್ಥಾನದ ಬಳಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಮಕ್ಕಳಿಗೆ ಆಟವಾಡಲು ಅನುಕೂಲಕರ ಜಾಗವಾಗಿದೆ.

‘ಡಿ.ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ದೇವಾಲಯದ ಅಭಿವೃದ್ಧಿಗೆ ₹35 ಸಾವಿರ ಅನುದಾನ ನೀಡಿದ್ದರು. ಕೆ.ವೆಂಕಟೇಶ್ ಶಾಸಕರಾಗಿದ್ದಾಗ
₹5 ಲಕ್ಷ ಅನುದಾನ ಮಂಜೂರು ಮಾಡಿದ್ದರು. ಮಾಜಿ ಶಾಸಕ ಬಸವರಾಜು ಕುಡಿಯುವ ನೀರಿಗೆ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ದೇವಸ್ಥಾನದ ಕುಂಭಾಭಿಷೇಕ ಹಾಗೂ ಪ್ರಭಾವಳಿ ಮಾಡಿಸುವಂತೆ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರಿಗೆ ಮನವಿ ಮಾಡಲಾಗಿದೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಮೋಹನ್ ತಿಳಿಸಿದರು.

***

ನಮ್ಮ ಕುಟುಂಬದ 5 ತಲೆಮಾರಿನವರು ದೇವರ ಸೇವೆ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದೇವರ ಸೇವೆ ಮಾಡುತ್ತಿದ್ದೇನೆ.
–ಮೋಹನ್, ಪ್ರಧಾನ ಅರ್ಚಕ

‌***

2017ರಿಂದ ಇಲ್ಲಿಯವರೆಗೆ ದೇವಾಲಯದ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡಿದ್ದೇವೆ. ಹನುಮ ಜಯಂತಿಯನ್ನು ವೈಭವ ಯುತವಾಗಿ ಆಚರಿಸುತ್ತಿದ್ದೇವೆ.

–ಕೌಲನಹಳ್ಳಿ ಸೋಮಶೇಖರ್, ಪರಿಸರ ಹೋರಾಟಗಾರ

***

ಪ್ರತಿ ಶನಿವಾರ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತೇವೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೆ, ಮೊದಲು ಹನುಮಂತನಿಗೆ ಪೂಜೆ ಸಲ್ಲಿಸುತ್ತೇವೆ.
–ಹರೀಶ್‌, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT