ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ| ತಂಬಾಕು ದರ ಕುಸಿತ; ರೈತರ ಪ್ರತಿಭಟನೆ

ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೆಳೆಗಾರರ ಆಕ್ರೋಶ
Last Updated 23 ಫೆಬ್ರುವರಿ 2023, 3:14 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ತಂಬಾಕು ಖರೀದಿಸುತ್ತಿರುವ ಖರೀದಿದಾರ ಕಂಪನಿಗಳ ಧೋರಣೆ ಖಂಡಿಸಿ ರೈತರು ಬುಧವಾರ ಪ್ರತಿಭಟಿಸಿದರು.

ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ರೈತರು ತಂಬಾಕು ಹರಾಜು ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಿದರು. ತಂಬಾಕು ಮಂಡಳಿಯ ಆಡಳಿತ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು.

ಮಾಜಿ ಶಾಸಕ ಕೆ.ವೆಂಕಟೇಶ್ ಭೇಟಿ ನೀಡಿ ರೈತರು ಮತ್ತು ಮಂಡಳಿ ಕಾರ್ಯದರ್ಶಿ ವೇಣುಗೋಪಾಲ್, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ‘ರೈತರಿಗೆ ಸೂಕ್ತ ಬೆಲೆ ನೀಡಿ ತಂಬಾಕು ಖರೀದಿಸಬೇಕು. ಮಾರುಕಟ್ಟೆ ನಡೆಸುವ ಮತ್ತು ತಡೆಹಿಡಿಯುವ ಬಗ್ಗೆ ರೈತರು ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದರು.

ತಂಬಾಕು ಮಾರುಕಟ್ಟೆಗೆ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು ಭೇಟಿ ನೀಡಿ ಖರೀದಿದಾರರೊಂದಿಗೆ ಸಭೆ ನಡೆಸಿ, ಉತ್ತಮ ದರ ನೀಡಿ ತಂಬಾಕು ಖರೀದಿ ಮಾಡುವಂತೆ ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ತಂಬಾಕು ಪೂರ್ಣವಾಗಿ ಮಾರಾಟವಾಗಿಲ್ಲ. ಫೆ.24ರಂದು ಆಂಧ್ರ ಮಾರುಕಟ್ಟೆ ಆರಂಭವಾಗುತ್ತದೆ ಎಂಬ ಕಾರಣಕ್ಕಾಗಿ ತಂಬಾಕು ಬೆಲೆ ಕುಸಿತಗೊಂಡಿದೆ. ಆಂಧ್ರದ ಮಾರುಕಟ್ಟೆಯನ್ನು ಒಂದು ವಾರ ಮುಂದೂಡುವಂತೆ ತಂಬಾಕು ಮಂಡಳಿ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ’ ಎಂದರು.

ತಂಬಾಕು ಮಂಡಳಿ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ, ‘ಈ ಹಿಂದೆ ಹೆಚ್ಚು ಬೆಲೆ ಕೊಟ್ಟು ಖರೀದಿಸಿದ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂಬಾಕು ಮಾರಾಟ ಮಾಡಲು ವಿಫಲವಾಗಿವೆ. ಇದರಿಂದ ಹೆಚ್ಚಿನ ಬೆಲೆ ದೊರೆಯದಾಗಿದೆ. ಈಗ ಇರುವ 8 ಪ್ರಮುಖ ಕಂಪನಿಗಳಿಂದಲೇ ತಂಬಾಕು ಖರೀದಿಯಾಗುತ್ತಿದ್ದು, ರೈತರು ಸಾವಧಾನದಿಂದ ತಂಬಾಕು ಮಾರಾಟಕ್ಕೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ನಂತರ ತಂಬಾಕು ಹರಾಜು ನಡೆಸಲಾಯಿತು. ಉತ್ತಮ ದರ್ಜೆಯ ತಂಬಾಕು ಕೆ.ಜಿ.ಗೆ ₹215ವರೆಗೆ ಮಾರಾಟವಾಯಿತು.

ಈ ಸಂದರ್ಭದಲ್ಲಿ ತಂಬಾಕು ಮಂಡಳಿ ನಿರ್ದೇಶಕ ಜಿ.ಸಿ. ವಿಕ್ರಂರಾಜ್, ವಲಯ ವ್ಯವಸ್ಥಾಪಕ ಲಕ್ಷ್ಮಣ್‌ ರಾವ್, ಹರಾಜು ಅಧೀಕ್ಷಕರಾದ ಶಂಭುಲಿಂಗೇಗೌಡ, ಸಿ.ಎಂ.ಪ್ರಭಾಕರನ್, ರಾಮಮೋಹನ್‌ ಸೂರಿ, ಐಟಿಸಿ ಸುಜಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT