ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ: ಎಚ್ಚರಿಕೆ

ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಡಿಎಚ್‌ಒ ಡಾ.ಭಗವಂತ ಅನವಾರ ದಿಢೀರ್ ಭೇಟಿ, ಪರಿಶೀಲನೆ
Last Updated 23 ಜೂನ್ 2018, 17:24 IST
ಅಕ್ಷರ ಗಾತ್ರ

ಯಾದಗಿರಿ:‘ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ. ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ಅಂತಹ ಕೃತ್ಯದಲ್ಲಿ ಭಾಗಿಗಳಾಗಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಎಚ್ಚರಿಕೆ ನೀಡಿದರು.

ನಗರದ ನೋಂದಾಯಿತ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿದ ಅವರು ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.

‘ಜಿಲ್ಲೆಯಲ್ಲಿ ಭ್ರೂಣಹತ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಹಣದ ಆಮಿಷಕ್ಕೆ ಒಳಗಾಗಿ ಅನೇಕರು ಭ್ರೂಣಲಿಂಗ ಪತ್ತೆಯಂತಹ ಹೀನಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಂಥವರು ಸಿಕ್ಕಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

ನಂತರ ಅವರು ಶಿವಾ ಸಾಯಿ ಹೆಸರಿನ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗೆ ಭೇಟಿ ನೀಡಿ, ಭ್ರೂಣಲಿಂಗ ಪತ್ತೆ ಕಾಯ್ದೆಯಡಿ (ಪಿಸಿಪಿಎನ್‌ಡಿಟಿ) ಬಾಲಿಕಾ ತಂತ್ರಾಂಶ ಪಾಲನೆ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿನ ತಜ್ಞರು ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರವನ್ನು ನಿಯಮಾವಳಿಯಂತೆ ಸೂಚನಾ ಫಲಕದಲ್ಲಿ ಹಾಕಿರಲಿಲ್ಲ. ಕೂಡಲೇ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ ಪರಿಶೀಲಿಸಿ ನಿಯಮಾವಳಿ ಪಾಲಿಸುವಂತೆ ಸೂಚಿಸಿದರು.

‘ಜಿಲ್ಲೆಯಲ್ಲಿ ಒಟ್ಟು 19 ಸ್ಕ್ಯಾನಿಂಗ್‌ ಸೆಂಟರ್‌ಗಳು ಇವೆ. ಅವುಗಳಲ್ಲಿ ಎರಡು ಸರ್ಕಾರಿ ಹಾಗೂ ಇನ್ನೆರಡು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ರದ್ದುಗೊಂಡಿವೆ. ಯಾದಗಿರಿಯಲ್ಲಿ ಆರು, ಶಹಾಪುರದಲ್ಲಿ 8 ಹಾಗೂ ಸುರಪುರ ತಾಲ್ಲೂಕಿನಲ್ಲಿ ಎರಡು ಸೇರಿದಂತೆ ಜಿಲ್ಲೆಯಲ್ಲಿ ಸದ್ಯ 16 ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಬಿ.ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದಾರ, ಫಾರ್ಮಾಸಿಸ್ಟ್ ಮಲ್ಲಿಕಾರ್ಜುನ, ಆರೋಗ್ಯ ಸಹಾಯಕ ನಾಗಣ್ಣ ಇದ್ದರು.

ಭ್ರೂಣಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ. ಸ್ಕ್ಯಾನಿಂಗ್‌ ಸೆಂಟರ್‌ಗಳ ತಾಂತ್ರಿಕತಜ್ಞರು ಇದರಲ್ಲಿ ಭಾಗಿಯಾಗಿರುವುದುಸಮಾಜದ ದುರಂತ.
- ಡಾ.ಭಗವಂತ ಅನವಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT