ಮೈಸೂರು: ‘ನಗರದ ಸಿದ್ಧಾರ್ಥ ನಗರದ ಬನ್ನೂರು ರಸ್ತೆಯ ಹೊಸ ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಾಣವಾಗುತ್ತಿರುವ ಗಾಂಧಿಭವನದ ಕಾಮಗಾರಿ ಶೇ 70ರಷ್ಟು ಮುಗಿದಿದ್ದು, 3–4 ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಅಶೋಕ್ಕುಮಾರ್ ತಿಳಿಸಿದ್ದಾರೆ.
‘ಇದು ಸಾಂಸ್ಕೃತಿಕ ನಗರಿ, ಅರಮನೆ ನಗರಿ ಹೆಗ್ಗಳಿಕೆಯ ನಗರದ ಮುಕುಟಕ್ಕೆ ಮತ್ತೊಂದು ಗರಿಯಾಗಲಿದೆ. ಗಾಂಧೀಜಿಯವರ ಚಿಂತನೆ, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಭವನದಲ್ಲಿ ತಿಳಿಸಲಾಗುವುದು. ಅವರ ಸರಳ ಜೀವನದ ಸಂದೇಶ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು, ಮಹಿಳೆಯರು, ಶೋಷಿತರು, ಹಿಂದುಳಿದ ವರ್ಗದವರ ಬಗೆಗೆ ಅವರಿಗಿದ್ದ ಕಾಳಜಿ–ತುಡಿತಗಳನ್ನು ಅನಾವರಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಭವನದಲ್ಲಿ ವರ್ಷ ಪೂರ್ತಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಿ ಮಹಾತ್ಮರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ಭವನ ತಲೆಎತ್ತುತಿದೆ. 100x100 ಅಡಿ ಅಳತೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಗ್ರಂಥಾಲಯ, ವಾಚನಾಲಯ, ವಿವಿಧೋದ್ದೇಶ ಸಭಾಂಗಣ, ತರಬೇತಿ ಕೇಂದ್ರ ಗಾಂಧಿಯವರ ಜೀವನದ ವಿವಿಧ ಹಂತಗಳ ಪೋಟೊ ಗ್ಯಾಲರಿ, 100 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಚೇರಿ ಇರಲಿದೆ. ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ ಇರಲಿದೆ. ಕಟ್ಟಡದ ಹಿಂಭಾಗದಲ್ಲಿ ಶೌಚಾಲಯ ನಿರ್ಮಾಣಗೊಳ್ಳಲಿದೆ.
ಮುಂಭಾಗದ ಅಂಗಳದಲ್ಲಿ ಹುಲ್ಲುಹಾಸಿನ ನಡುವೆ ಗಾಂಧಿಯವರ ವಿವಿಧ ಕಲಾಕೃತಿಗಳು, ಸ್ವಾತಂತ್ರ್ಯ ಸಂಗ್ರಾಮದ ಪೋಟೊಗಳು ಹಾಗೂ ದೆಹಲಿಯ ಪಾರ್ಲಿಮೆಂಟ್ ಮುಂಭಾಗದಲ್ಲಿರುವ ಗ್ಯಾರಾ ಮೂರ್ತಿ ಆಕೃತಿ ತಲೆ ಎತ್ತಲಿದೆ.
ಭವನದ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಎಸ್ಪಿ ಸದಸ್ಯರಿದ್ದು ಜಿಲ್ಲಾ ವಾರ್ತಾಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಅಶೋಕ್ಕುಮಾರ್ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಂದರೆ 2016-17ರ ಬಜೆಟ್ನಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲ ಆಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಇಲಾಖೆಯ ಮೂಲಕ ₹ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣದ ಯೋಜನೆಯನ್ನು ಘೋಷಿಸಿದ್ದರು. ಅದರ ನಿರ್ಮಾಣ ಈಗ ನಡೆಯುತ್ತಿದೆ.
ಭವನವು ಗಾಂಧಿ ಪ್ರಿಯರು ಗಾಂಧಿವಾದಿಗಳು ವಿದ್ಯಾರ್ಥಿಗಳು ಮಕ್ಕಳು ಸಾರ್ವಜನಿಕರು ಗಾಂಧಿಯವರನ್ನು ಅರಿಯುವ ಹಾಗೂ ಪ್ರವಾಸಕ್ಕೆ ತಾಣವಾಗಲಿದೆಡಿ.ಅಶೋಕ್ಕುಮಾರ್, ಉಪ ನಿರ್ದೇಶಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.