ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಅಕಾಡೆಮಿಗಳಿಗೆ ಸರ್ಕಾರದ ನೇಮಕ: ಕೃಪಾ, ಮಾನಸಗೆ ‘ಅಧ್ಯಕ್ಷ’ ಗೌರವ

Published 17 ಮಾರ್ಚ್ 2024, 6:41 IST
Last Updated 17 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನೃತ್ಯದ ಅಭಿರುಚಿ ಹೆಚ್ಚಿಸಿದ, ಸಾಹಿತ್ಯದ ಕಂಪು ಹರಡಿದ ಇಬ್ಬರು ಸಾಧಕರಿಗೆ ರಾಜ್ಯ ಸರ್ಕಾರವು ಅಕಾಡೆಮಿಯ ಅಧ್ಯಕ್ಷ ಹುದ್ದೆಯ ಮೂಲಕ ಗೌರವ ನೀಡಿದೆ.

ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ವಿವಿಧ ಅಕಾಡೆಮಿಗಳಿಗೆ ಶನಿವಾರ ಅಧ್ಯಕ್ಷ– ಸದಸ್ಯರನ್ನು ನೇಮಿಸಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕೃಪಾ ಫಡ್ಕೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮಾನಸ ನೇಮಕಗೊಂಡಿದ್ದಾರೆ.

1997ರಲ್ಲಿ ‘ನೃತ್ಯಗಿರಿ’ ಸಂಸ್ಥೆ ಸ್ಥಾಪಿಸಿ ಆ ಮೂಲಕ ಕಳೆದ ಮೂರು ದಶಕಗಳಿಂದ ಮೈಸೂರಿನಲ್ಲಿ ಪ್ರದರ್ಶಕ ಕಲೆಗಳ ತರಬೇತಿ ನೀಡುತ್ತಿರುವ ಕೃಪಾ ಫಡ್ಕೆ ಭರತನಾಟ್ಯವನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ನೂರಾರು ವೇದಿಕೆಗಳಲ್ಲಿ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿ ವರ್ಷವೂ ನೃತ್ಯ ಸಪ್ತಾಹ ಆಯೋಜಿಸುತ್ತ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದ್ದಾರೆ.

ನಾಟ್ಯಾಚಾರ್ಯ ಕೆ.ಮುರಳೀಧರ್ ರಾವ್ ಮತ್ತು ನೃತ್ಯ ಕಲಾ ಸಿಂಧು ಕಮಲಾಕ್ಷ ಆಚಾರ್ಯ ಅವರ ಶಿಷ್ಯೆಯಾಗಿರುವ ಇವರು ಮೂರು ಸ್ನಾತಕೋತ್ತರ ಪದವಿಯ ಜೊತೆಗೆ ಪಿಎಚ್.ಡಿ ಪದವಿಯನ್ನೂ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದ ಬಾಲವಿಕಾಸ ಪ್ರಶಸ್ತಿ, ಕಿತ್ತೂರು ಚನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

‘ಅಧ್ಯಕ್ಷ ಹುದ್ದೆಯ ಗೌರವವು ಆಶ್ಚರ್ಯ ಮತ್ತು ಸಂತೋಷ ತಂದಿದೆ. ನಿಜಕ್ಕೂ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಹೊಸ ಜವಾಬ್ದಾರಿಗೆ ನ್ಯಾಯ ಸಲ್ಲಿಸುವ ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯುತ್ತೇನೆ’ ಎಂದು ಕೃಪಾ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಪುಸ್ತಕ ಸೇವೆಗೆ ಸಂದ ಗೌರವ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾನಸ ಲೇಖಕರಾಗಿ, ಪ್ರಕಾಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಗೌರವ ಅಧ್ಯಕ್ಷರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ಕು ವರ್ಷ ಕಾಲ ಮುನ್ನಡೆಸಿದ ಅನುಭವ ಅವರದ್ದು.

ಕನ್ನಡ ಎಂ.ಎ. ಪದವೀಧರರಾದ ಮಾನಸ, ತನುಮನು ಪ್ರಕಾಶನದ ಮೂಲಕ ಪ್ರಕಾಶಕರಾಗಿ ಗುರುತಿಸಿಕೊಂಡಿದ್ದು, ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಲೇಖಕರಾಗಿ ಕಾದಂಬರಿ, ಕವನ ಸಂಕಲನ, ಸಂಶೋಧನೆ ಹಾಗೂ ಸಂಪಾದಿತ ಕೃತಿಗಳನ್ನು ಸೇರಿದಂತೆ ಹತ್ತಾರು ಕೃತಿಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೂ ಹಲವು ಹೊತ್ತಿಗೆಗಳನ್ನು ಹೊರತಂದಿದ್ದಾರೆ. ಹಲವು ಸಂಘ–ಸಂಸ್ಥೆಗಳ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದು, ದಸರಾ ಕವಿಗೋಷ್ಠಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಲವು ಪುರಸ್ಕಾರ ದೊರೆತಿವೆ.

‘ಕನ್ನಡ ಪುಸ್ತಕ ಪ್ರಾಧಿಕಾರವು ವಿಭಿನ್ನ ರೀತಿಯ ಪ್ರಾಧಿಕಾರ. ಅದಕ್ಕೆ ತನ್ನದೇ ಆದ ಬೈಲಾ ಇದೆ. ಆರಂಭದಿಂದಲೂ ಇದರ ಬಗ್ಗೆ ಆಸಕ್ತಿ, ಪ್ರೀತಿ ಬೆಳೆಸಿಕೊಂಡು ಬಂದಿದ್ದೆ. ಈಗ ಅದರ ಅಧ್ಯಕ್ಷನಾಗಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ಮಾನಸ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಪುಸ್ತಕ ಪ್ರೇಮಿಯಾಗಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪುಸ್ತಕ ರೂಪದಲ್ಲೇ ಉಡುಗೊರೆ ನೀಡುವಂತೆ ಆದೇಶಿಸಿದ್ದು ಉತ್ತಮ ನಿರ್ಧಾರ. ಅಂತಹವರ ಮಾರ್ಗದರ್ಶನದಲ್ಲಿ ಪ್ರಾಧಿಕಾರದ ಘನತೆ ಹೆಚ್ಚಿಸುವ ಕೆಲಸ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಮಾನಸ
ಮಾನಸ

ಸದಸ್ಯ ಸ್ಥಾನದ ಗೌರವ

ವಿವಿಧ ಅಕಾಡೆಮಿಗಳಲ್ಲಿ ಮೈಸೂರಿನ ಅನೇಕರು ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಎಸ್.ರಾಮು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ವಿದ್ವಾನ್ ವೆಂಕಟರಾಘವನ್ ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿ ಮಹದೇವ ಶೆಟ್ಟಿ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಚಂದ್ರಕಿರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾಗಿ ಟಿ.ಗುರುರಾಜ್ ಅವರನ್ನು ನೇಮಿಸಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಗುರುರಾಜ್ ಗಾಯಕ ದೇವಾನಂದ ವರಪ್ರಸಾದ್ ರಂಗ ಸಮಾಜದ ಸದಸ್ಯರಾಗಿ ‘ಅಭಿಯಂತರರು’ ಸಂಸ್ಥೆಯ ಸುರೇಶ್ ಬಾಬು ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT