ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮುಚ್ಚಲು ವರದಿ: ಡಾ.ಅಮ್ಮಸಂದ್ರ ಸುರೇಶ್ ಖಂಡನೆ

ಎಚ್.ಡಿ.ಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 16 ಫೆಬ್ರುವರಿ 2023, 4:45 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ಸರ್ಕಾರಿ ಶಾಲೆಗಳು ಉಳಿದರೆ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ. ಆದರೆ, ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸಮಿತಿಯೊಂದು ರಾಜ್ಯ ಸರ್ಕಾರಕ್ಕೆ ವರದಿ ನೀಡಿರುವುದು ಖಂಡನೀಯ’ ಎಂದು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಅಮ್ಮಸಂದ್ರ ಸುರೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ಅಂತರಸಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಏಕೀಕರಣವಾಗಿ ಇಷ್ಟು ವರ್ಷಗಳು ಕಳೆದರೂ ಗಡಿ ಭಾಗಗಳಲ್ಲಿ ಕನ್ನಡವನ್ನು ಉಳಿಸಿ ಕೊಳ್ಳಲು ಹೋರಾಡುತ್ತಿದ್ದಾರೆ. ಹೋರಾಟ ಗಾರರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಎಚ್‌.ಡಿ.ಕೋಟೆಯು ಸಂಪತ್ಭರಿತ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. 1927ರಲ್ಲಿ ಬೊಪ್ಪನಹಳ್ಳಿಯಲ್ಲಿ ದೊರೆತ ಶಿಲಾ ಶಾಸನದ ಪ್ರಕಾರ, ಹೆಗ್ಗಡೆಗಳ ಆಳ್ವಿಕೆಯಿಂದ ಇಲ್ಲಿಗೆ ಹೆಗ್ಗಡದೇವನಕೋಟೆ ಎಂಬ ಹೆಸರು ಬಂದಿದೆ. ಪೊನ್ನಾಟರು, ಹೊಯ್ಸಳರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಎಂ.ವೆಂಕಟಕೃಷ್ಣಯ್ಯ, ಎಚ್.ಬಿ.ಲಿಂಗಯ್ಯ, ನೂರಲಕುಪ್ಪೆಯ ಎನ್.ಟಿ.ಸುಂದರ್ ದಾಸ್, ಮಾದಾಪುರದ ಎಸ್.ಪುಟ್ಟಸ್ವಾಮಿ, ಹೊಮ್ಮರಗಳ್ಳಿಯ ಎಚ್.ಕೆ.ತಿಮ್ಮಯ್ಯ ಸಕ್ರಿಯ ತೊಡಗಿಸಿಕೊಂಡಿದ್ದರು’ ಎಂದರು.

‘ದಲಿತ, ರೈತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸತ್ತಿಗೆಹುಂಡಿ ಶಿವಣ್ಣ, ಪುಟ್ಟರಂಗಯ್ಯ, ಬೆಟ್ಟಯ್ಯಕೋಟೆ ಸೇರಿದಂತೆ ಹಲವರು ತೊಡಗಿಸಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಆಲನಹಳ್ಳಿ ಕೃಷ್ಣ ಅವರ ಕಾದಂಬರಿಗಳು ಸಿನಿಮಾಗಳಾಗಿವೆ. ಕಾನೂನು ಲೇಖಕ ಬಿ.ಎಚ್.ಗೌಡ ಹೊಸಹಳ್ಳಿ, ಹಳಗನ್ನಡ ವಿದ್ವಾಂಸ ಪಾ.ನಾಗರಾಜಯ್ಯ, ಕಿತ್ತೂರಿನ ಪ್ರಸಿದ್ಧ ಲೇಖಕ ಸ.ಚ.ಮಹದೇವನಾಯಕ, ಕ್ಯಾತನಹಳ್ಳಿ ಬಸವರಾಜು ಮುಂತಾದವರಿದ್ದಾರೆ. ಪತ್ರಿಕೋದ್ಯಮದ ಪಿತಾಮಹ ಎಂದು ಹೆಸರು ಗಳಿಸಿದ್ದ ಎಂ.ವೆಂಕಟಕೃಷ್ಣಯ್ಯ ಇದೇ ತಾಲ್ಲೂಕಿನ ಮಗ್ಗೆಯಲ್ಲಿ ಜನಿಸಿ ಅನೇಕ ಪತ್ರಿಕೆಗಳನ್ನು ಮುನ್ನಡೆಸಿದ್ದರು. ಇಂತಹ ಮಹಾನ್ ಸಾಧಕರ ಹುಟ್ಟೂರಿನಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಗಡಿಭಾಗದಲ್ಲಿ ಕನ್ನಡದ ಜಾಗೃತಿ ಮೂಡಿಸಲು ಸಮ್ಮೇಳನ ಆಯೋಜಿಸಲಾಗಿದೆ. ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಸೂಕ್ತ ಸೌಲಭ್ಯಗಳಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ನಂತರ 156 ಸರ್ಕಾರಿ ಶಾಲೆಗಳನ್ನು ನವೀಕರಣಗೊಳಿಸಲಾಗಿದೆ. ಹೊಸ ಕಟ್ಟಡಗಳನ್ನೂ ನಿರ್ಮಿಸಲಾಗಿದೆ. ಇನ್ನೂ ಅನೇಕ ಸಮಸ್ಯೆಗಳಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿವಾರಿಸಲಾಗುವುದು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಲೋಲಮ್ಮ ಕಾಂತನಾಯಕ, ವೈ.ಡಿ.ರಾಜಣ್ಣ, ಜಾನಪದ ವಿದ್ವಾಂಸ ಸ.ಚ.ಮಹದೇವ ನಾಯಕ, ಡಿ.ಸುಂದರದಾಸ್ ಕೆ.ಪಿ.ಬಸವೇಗೌಡ, ವೆಂಕಟಸ್ವಾಮಿ, ನರಸೀಪುರ ರವಿ, ಎಂ.ಎನ್.ಜಗದೀಶ್, ನವೀನ್ ದಾಸ್, ಎಂ.ಚಂದ್ರಶೇಖರ್ ಶಿವರಾಂ, ಲತಾ ಮೋಹನ್, ಬಾಲಯ್ಯ, ಸರಗೂರು ತಾಲ್ಲೂಕು ಕಸಾಪ ಅಧ್ಯಕ್ಷ ಕೆಂಡಗಣ್ಣ, ನೂರಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಪುಟ್ಟರಾಜು, ಉಪಾಧ್ಯಕ್ಷ ಚೆಲುವರಾಜು ಇದ್ದರು.

ಮೆರವಣಿಗೆ: ಅಂತರಸಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಸಮ್ಮೇಳನಾಧ್ಯಕ್ಷ ಡಾ.ಅಮ್ಮಸಂದ್ರ ಸುರೇಶ್‌ ಅವರನ್ನು ಪೂರ್ಣಕುಂಭ ಗೌರವದೊಂದಿಗೆ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಗೊರವರ ಕುಣಿತ, ವೀರಗಾಸೆ, ಕೋಲಾಟ, ಆದಿವಾಸಿ ಕುಣಿತ, ಡೊಳ್ಳು ಕುಣಿತ ಹಾಗೂ ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮತ್ತು ಬ್ಯಾಂಡ್ ಸೆಟ್‌ಗಳ ಮೂಲಕ ಮೆರವಣಿಗೆ ಮಾಡಲಾಯಿತು.

‘ಸರ್ಕಾರಿ ಶಾಲೆ ಅಭಿವೃದ್ಧಿಗೆ ಯೋಜನೆ’

‘ರಾಜ್ಯ ಸರ್ಕಾರ ಮಠಗಳಿಗೆ ₹570 ಕೋಟಿ ಅನುದಾನ ನೀಡಿದೆ. ಆದರೆ, 2019ರಲ್ಲಿ ಮುದ್ರಣವಾದ ಕನ್ನಡ ಪುಸ್ತಕಗಳಿಗೆ ಇನ್ನೂ ಹಣ ನೀಡಿಲ್ಲ. ಕೋವಿಡ್‌ ನಂತರ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಯಲ್ಲಿದೆ. ಈ ಶಾಲೆಗಳನ್ನು ಸುಧಾರಿಸುತ್ತಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಿದ್ದು, ಮಕ್ಕಳ ಹಸಿವು ನೀಗಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಬಂಡಾಯ, ಶರಣ ಸಾಹಿತ್ಯ ಇರುವಂತೆ ರಾಜಕೀಯ ಸಾಹಿತ್ಯವು ಬರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

***

ತಾಲ್ಲೂಕಿನಲ್ಲಿ ಜಲಾಶಯಗಳ ನಿರ್ಮಾಣದ ವೇಳೆ ಮುಳುಗಡೆಯಾದ ಅನೇಕ ಹಾಡಿಗಳು, ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು.

–ಡಾ.ಅಮ್ಮಸಂದ್ರ ಸುರೇಶ್, ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT