ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಬಾರದೇ ರೈತರು ಕಂಗಾಲು

ಮೂರು ತಿಂಗಳ ಹಿಂದೆಯೇ ಬೆಂಬಲ ಬೆಲೆಯಡಿ ರಾಗಿ ಖರೀದಿ
Published 3 ಜೂನ್ 2024, 6:44 IST
Last Updated 3 ಜೂನ್ 2024, 6:44 IST
ಅಕ್ಷರ ಗಾತ್ರ

ಹನಗೋಡು: ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕಳೆದ 3 ತಿಂಗಳ ಹಿಂದೆಯೇ ರೈತರಿಂದ ರಾಗಿ ಖರೀದಿಸಿದ್ದು ಇದುವರೆಗೂ ಯಾವುದೇ ಹಣ ಸಿಗದೇ ರೈತರು ಕಂಗಾಲಾಗಿದ್ದಾರೆ.

2023-24 ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸರ್ಕಾರವು ರಾಗಿ ಮತ್ತು ಭತ್ತ ವನ್ನು ಮಾರ್ಚ್ 20 ರಿಂದ ಹುಣಸೂರು ಮತ್ತು ರತ್ನಪುರಿಯಲ್ಲಿ ಖರೀದಿ ಕೇಂದ್ರ ತೆರೆದಿತ್ತು. ಖರೀದಿ ಮಾಡಿದ 15 ದಿನದೊಳಗೆ ಹಣ ಪಾವತಿ ಮಾಡುವುದಾಗಿ ಘೋಷಿಸಿತ್ತು. ಹುಣಸೂರು ತಾಲ್ಲೂಕಿನಾದ್ಯಂತ 3 ತಿಂಗಳಿನಿಂದ ರಾಗಿ ಖರೀದಿ ಕೇಂದ್ರಕ್ಕೆ ಮಾರಿರುವ ರೈತರಿಗೆ ಈವರೆಗೂ ಯಾವುದೇ ಹಣ ಬಿಡುಗಡೆ ಆಗಿಲ್ಲ.

ಹುಣಸೂರು ತಾಲೂಕಿನಾದ್ಯಂತ ರಾಗಿ ಮಾರಾಟ ಮಾಡಲು 4,780 ರೈತರು ನೊಂದಣಿ ಮಾಡಿ, 60,200 ಸಾವಿರ ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು.

‘ಮಾರ್ಚ್ 26ರಂದು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ್ದು ಇದುವರೆಗೂ ಹಣ ಬಂದಿಲ್ಲ. ಇದರಿಂದ ಈ ವರ್ಷ ವ್ಯವಸಾಯದ ಖರ್ಚಿಗೆ ಬೇರೆಯವರ ಬಳಿ ಬಡ್ಡಿ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು  ಬಿ. ಆರ್. ಕವಲು ಗ್ರಾಮದ ರೈತ ಮಾದೇವೇಗೌಡ ‘ಪ್ರಜಾವಾಣಿ’ ಜೊತೆ ತಮ್ಮ  ಅಳಲು ತೋಡಿಕೊಂಡರು.

ಭತ್ತ ಮಾರಾಟಕ್ಕೆ ನಿರಾಸಕ್ತಿ: ಈ ಸಾಲಿನಲ್ಲಿ ಭತ್ತದ ಬೆಲೆಯು ಸರ್ಕಾರ ನಿಗದಿ ಮಾಡಿದ ಬೆಲೆಗಿಂತಲೂ ಖಾಸಗಿ ಮಾರುಕಟ್ಟೆಗಳಲ್ಲಿ ಭತ್ತದ ಬೆಲೆ ಹೆಚ್ಚಿತ್ತು. ಯಾವುದೇ ಒಬ್ಬ ರೈನೂ ಸಹ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡಲು ನೋಂದಣಿಯನ್ನು ಮಾಡಿಸದ ಕಾರಣ ಭತ್ತವನ್ನು ಖರೀದಿ ಮಾಡಿಲ್ಲ.

‘ಹುಣಸೂರು ಮತ್ತು ರತ್ನಪುರಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವ ಎಲ್ಲ ರೈತರ ಬಿಲ್ ಗಳನ್ನು ಮಾಡಿದ್ದು ಸರ್ಕಾರದಿಂದ ಹಣ ಬಿಡುಗಡೆಯಷ್ಟೇ ಬಾಕಿಯಿದೆ. ಆದಷ್ಟು ಬೇಗ ಹಣ ಬರುವ ನಿರೀಕ್ಷೆಯಿದ್ದು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ಹುಣಸೂರಿನ ಖರೀದಿ ಕೇಂದ್ರದ ಅಧಿಕಾರಿ ಮಂಜುನಾಥ್ ತಿಳಿಸಿದರು.

‘ಕಳೆದ ವರ್ಷ ಬರಗಾಲದ ನಡುವೆಯೂ ರೈತರು ಕಷ್ಟಪಟ್ಟು ರಾಗಿ ಬೆಳೆದು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ ರೈತರಿಗೆ ತೊಂದರೆ ಆಗದಂತೆ ಆದಷ್ಟು ಬೇಗ ಸರ್ಕಾರವು ಹಣ ಬಿಡುಗಡೆ ಮಾಡಬೇಕು’ ಎಂದು  ಎಪಿಎಂಸಿ ಮಾಜಿ ಅಧ್ಯಕ್ಷ ಮುದಗಂದೂರು ಸುಭಾಷ್ ಮನವಿ ಮಾಡಿದರು

3 ತಿಂಗಳ ಹಿಂದೆಯೇ ರೈತರಿಂದ ಖರೀದಿ ಪೂರ್ಣ ಮಾರಾಟ ಮಾಡಿದ ಹಣ ಪಡೆಯಲು ಸುತ್ತಾಟ ವ್ಯವಸಾಯಕ್ಕಾಗಿ ಬಡ್ಡಿಹಣದ ಮೊರೆಹೋದ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT