ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಬಳಕೆಗೆ ದಂಡಾಸ್ತ್ರ

ಸೆ.1ರಿಂದ ಜಾರಿ; ಪ್ಲಾಸ್ಟಿಕ್‌ ಬಿಸಾಡಿದರೆ ₹500ರಿಂದ ₹10 ಸಾವಿರವರೆಗೆ ದಂಡ
Published 18 ಆಗಸ್ಟ್ 2023, 5:39 IST
Last Updated 18 ಆಗಸ್ಟ್ 2023, 5:39 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು ದಂಡಾಸ್ತ್ರವನ್ನು ಪ್ರಯೋಗಿಸಲು ಆದೇಶ ಹೊರಡಿಸಿದ್ದು, ಸೆ.1ರಿಂದ ಜಾರಿಯಾಗಲಿದೆ.

ಪ್ಲಾಸ್ಟಿಕ್‌ ತ್ಯಾಜ್ಯ ಬಿಸಾಡುವುದು, ಮದ್ಯಪಾನ, ವನ್ಯಜೀವಿಗಳಿಗೆ ತಿಂಡಿ– ತಿನಿಸು ನೀಡುವುದು ಹಾಗೂ ತೊಂದರೆ ನೀಡುವುದು ಸೇರಿದಂತೆ ಅರಣ್ಯದಲ್ಲಿ ನಿಯಮಬಾಹಿರ ಚಟುವಟಿಕೆಗಳನ್ನು ನಡೆಸಿದರೆ ₹500ರಿಂದ ₹10 ಸಾವಿರದವರೆಗೆ ದಂಡ ವಿಧಿಸಲು ‘ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ’ದ ಡಿಸಿಎಫ್‌ ಡಾ.ಬಸವರಾಜು ಅವರು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.

‘ನಗರ ಹಸಿರೀಕರಣ ವಲಯ ವ್ಯಾಪ್ತಿಯಲ್ಲಿ ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶವು ಬರಲಿದೆ. ನಗರದ ನಾಗರಿಕರಿಗೆ ಉತ್ತಮ ಪರಿಸರ, ಗಾಳಿಯನ್ನು ಒದಗಿಸುತ್ತಿದೆ. ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಚಾಮುಂಡೇಶ್ವರಿ ದೇವಾಲಯವು ಧಾರ್ಮಿಕ ಹಾಗೂ ಪ್ರವಾಸಿ ತಾಣಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಅರಣ್ಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಪ್ರವಾಸಿಗರು ಹಾಗೂ ಭಕ್ತರು ಅನುಮತಿ ಇಲ್ಲದೇ ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ತಿಂಡಿ– ತಿನಿಸುಗಳನ್ನು ಸೇವಿಸಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಅದರಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ಹಲವರು ಮದ್ಯಪಾನ ನಡೆಸುವುದಲ್ಲದೇ ಹಾನಿಕಾರಕ ಬಾಟಲಿಗಳನ್ನು ಕಾಡಿನೊಳಗೆ ಬಿಸಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. 

‘ಪ್ಲಾಸ್ಟಿಕ್‌ ತ್ಯಾಜ್ಯಗಳು ತೀವ್ರ ಕಾಡ್ಗಿಚ್ಚಿಗೆ ಕಾರಣವಾಗುತ್ತಿವೆ. ವನ್ಯಪ್ರಾಣಿಗಳಿಗೆ ಭಕ್ತರು ತಿಂಡಿ–ತಿನಿಸು ನೀಡುತ್ತಿರುವುದರಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತಿವೆ. ಮಾನವ– ವನ್ಯಪ್ರಾಣಿ ಸಂಘರ್ಷಕ್ಕೂ ಕಾರಣವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಇಲಾಖೆಯು ಬದ್ಧವಾಗಿದ್ದು, ಪ್ರವಾಸಿಗರು ಹಾಗೂ ಭಕ್ತರಲ್ಲಿ ಅರಿವು ಮೂಡಿಸಲು ದಂಡ ವಿಧಿಸಲು ಆದೇಶ ಹೊರಡಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

‘ರಾಜ್ಯ ಅರಣ್ಯ ಕಾಯ್ದೆ ಸೆಕ್ಷನ್ 76, 99 (1) ಅಡಿ ಅರಣ್ಯ ರಕ್ಷಣೆ ಹಾಗೂ ಅರಣ್ಯ ನಿಯಮಾವಳಿ 1969ರ ಅಡಿ ಅರಣ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರವು ನೀಡಿರುವ ಅಧಿಕಾರದ ಅಡಿಯಲ್ಲಿ ಜೀವವೈವಿಧ್ಯವನ್ನು ರಕ್ಷಿಸಲು ಆದೇಶ ಹೊರಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಜ್ಞಾಪನ ಪತ್ರದ ಪ್ರತಿಯನ್ನು ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ಪೊಲೀಸ್‌ ಆಯುಕ್ತ, ಮುಡಾ ಆಯುಕ್ತ, ಪಾಲಿಕೆ ಆಯುಕ್ತ, ಜಿಲ್ಲಾ ಪಂಚಾಯಿತಿ ಸಿಇಒ, ತಾಲ್ಲೂಕು ಪಂಚಾಯಿತಿ ಇಒ, ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ, ಅರಣ್ಯ ಇಲಾಖೆಯ ಮೈಸೂರು ಉಪವಿಭಾಗದ ಎಸಿಎಫ್‌, ಆರ್‌ಎಫ್‌ಒಗೆ ಬಸವರಾಜು ಕಳುಹಿಸಿದ್ದಾರೆ.

ಪ್ಲಾಸ್ಟಿಕ್‌ ಬಿಸಾಡಿದರೆ ಪರವಾನಗಿ ರದ್ದು ಪರಿಸರ ಸೂಕ್ಷ್ಮ ವಲಯ ರಕ್ಷಣೆಗೆ ಕ್ರಮ ಡಿಸಿಎಫ್‌ ಬಸವರಾಜು ಜ್ಞಾಪನ ಪತ್ರ

ಪರಿಸರ ಸೂಕ್ಷ್ಮ ವಲಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆದೇಶ ಹೊರಡಿಸಲಾಗಿದೆ

-ಡಾ.ಬಸವರಾಜು ಡಿಸಿಎಫ್ (ಪ್ರಾದೇಶಿಕ)

ನಿಷೇಧಿತ ಕಾರ್ಯ;ದಂಡ (₹ಗಳಲ್ಲಿ)

ಅರಣ್ಯ ಪ್ರದೇಶಕ್ಕೆ ಅತಿಕ್ರಮ ‍ಪ್ರವೇಶ;500 ಅನುಮತಿ ಇಲ್ಲದ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌;1000 ಪ್ಲಾಸ್ಟಿಕ್‌ ತ್ಯಾಜ್ಯ ಬಿಸಾಡುವುದು;500 ಬೆಟ್ಟದ ಅಂಗಡಿ ಮಾಲೀಕರು ಪ್ಲಾಸ್ಟಿಕ್‌ ಮೊದಲ ಬಾರಿ ಬಿಸಾಡಿದರೆ;2500 ಎರಡನೇ ಬಾರಿಯ ಅಪರಾಧಕ್ಕೆ;5000 ತಪ್ಪು ಪುನಾವರ್ತನೆಯಾದರೆ ಪರವಾನಗಿ ರದ್ದು ಮಾಡುವುದು;10000 ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಬೆಟ್ಟ ಪ್ರವೇಶ (ಬೆಟ್ಟದ ನಿವಾಸಿಗಳನ್ನು ಹೊರತು ಪಡಿಸಿ);2500 ಮದ್ಯದ ಬಾಟಲಿಗಳು ಸೇರಿದಂತೆ ಹಾನಿಕಾರಕ ವಸ್ತು ಒಯ್ದರೆ;5000 ವನ್ಯಪ್ರಾಣಿಗಳಿಗೆ ತೊಂದರೆ ಹಾಗೂ ಆಹಾರ ನೀಡಿದರೆ;1000 ಅರಣ್ಯ ಹಾನಿ ಮಾಡುವ ಚಟುವಟಿಕೆಗಳಿಗೆ;1000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT