ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು?: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ
Published 22 ಮೇ 2024, 16:05 IST
Last Updated 22 ಮೇ 2024, 16:05 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿಗೆ ಸಿದ್ದರಾಮಯ್ಯ ನೀಡಿರುವ ಕೊಡುಗೆಗಳೇನು?’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಒಂದೆಡೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇನ್ನೊಂದೆಡೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಸೇವನೆಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ. ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಅವರು ಯಾವ ರೀತಿ ಕೆಲಸ ಮಾಡಿದ್ದಾರೆ, ಎಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ. ರಾಜಕೀಯ ಜೀವನದ ಕೊನೇ ಹಂತದಲ್ಲಿರುವ ಅವರು ಈಗಲಾದರೂ ತವರು ಜಿಲ್ಲೆ ಅಭಿವೃದ್ಧಿಪಡಿಸಲಿ’ ಎಂದರು.

‘ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕಿಸುವ ನೈತಿಕತೆ ಮುಖ್ಯಮಂತ್ರಿಗಿಲ್ಲ’ ಎಂದು ತಿರುಗೇಟು ನೀಡಿದರು. 

‘ವಿರೋಧಿಗಳಿಗೆ ತೊಂದರೆ ಕೊಡುವುದು, ದ್ವೇಷದ ರಾಜಕಾರಣ ಮಾಡುವುದಷ್ಟೆ ಈ ಸರ್ಕಾರದ ಕೆಲಸವಾಗಿದೆ’ ಎಂದು ದೂರಿದರು.

‘ಮೈಸೂರು, ಚಿತ್ರದುರ್ಗ, ವಿಜಯಪುರ, ತುಮಕೂರು, ಧಾರವಾಡ ಮೊದಲಾದ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಬೆಳೆಗಳು ಅದರಲ್ಲೂ ತೋಟಗಾರಿಕೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ಮೈಸೂರು, ಬೆಂಗಳೂರು ಮೊದಲಾದ ನಗರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಆದರೆ, ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಮಳೆಗಾಲಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ’ ಎಂದು ಆರೋಪಿಸಿದರು.

‘ಬೆಳೆ ಹಾನಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ದೂರಿನಲ್ಲಿ, ಗದಗದಲ್ಲಿ ತಲಾ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಗಮನಕ್ಕೆ ಇದೆಯೋ, ಇಲ್ಲವೋ? ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಕೆಲಸವನ್ನು ಯಾರೊಬ್ಬ ಮಂತ್ರಿಯೂ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕಾಂತರಾಜು ವರದಿ ಪಾರದರ್ಶಕವಾಗಿ ನಡೆದಿದೆ, ಎಲ್ಲ ಸಮಾಜದವರಿಗೆ ನ್ಯಾಯ ಸಲ್ಲಿಸುವ ರೀತಿಯಲ್ಲಿ ಆಗಿದೆ ಎನ್ನುವುದಾದರೆ ಉಪ ಸಮಿತಿ ರಚಿಸುವ ಅಗತ್ಯವೇನಿದೆ? ಸುಮ್ಮನೆ ಕಾಲಹರಣ ಮಾಡುವ ಯತ್ನ ಇದಾಗಿದೆ. ಮುಖ್ಯಮಂತ್ರಿಗಾಗಲಿ ಅಥವಾ ಸಚಿವ ಸಂಪುಟದಲ್ಲಿ ಇರುವವರಿಗಾಗಲಿ ನಾಡಿನ ಸಮಸ್ಯೆಗಳ ಬಗ್ಗೆ ಯೋಚನೆ ಇಲ್ಲ. ಬಿಜೆಪಿ ನಾಯಕರ ವಿರುದ್ಧ ದೂರುವುದು ಅಥವಾ ಕೇಂದ್ರ ಸರ್ಕಾರದ ವಿರುದ್ಧ ಕೆದಕಿ ಕೆದಕಿ ಸಂಘರ್ಷ ಸೃಷ್ಟಿಸುವುದು ಬಿಟ್ಟರೆ ಈ ಸರ್ಕಾರದ್ದೇನೂ ಸಾಧನೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT